ಕಲಬುರಗಿ: ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರು ಸಾಧಿಸಿದ ಗೆಲುವಿನ 200ನೇ ವಿಜಯೋತ್ಸವದ ಅಂಗವಾಗಿ ರಾಜ್ಯದ ಎಲ್ಲೆಡೆ ಸಂಚರಿಸುತ್ತಿರುವ ವಿಜಯ ಜ್ಯೋತಿ ರಥಯಾತ್ರೆಯನ್ನು ನಗರದಲ್ಲಿ ಸೋಮವಾರ ಸಂಭ್ರಮದಿಂದ ಸ್ವಾಗತಿಸಿ, ಮೆರವಣಿಗೆ ಮಾಡಲಾಯಿತು.
ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಬೆಳಿಗ್ಗೆ 8.30ರ ಗಂಟೆ ಹೊತ್ತಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ರಥಯಾತ್ರೆ ವಾಹನದಲ್ಲಿರುವ ಸ್ವಾತಂತ್ರ್ಯ ಹೋರಾಟದ ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮ ಮೂರ್ತಿಗೆ ಪುಷ್ಪಹಾರ ಹಾಕಿ ಗೌರವ ಸಲ್ಲಿಸಿದರು.
ಬಳಿಕ ರಥದ ಮುಂದಿನ ಜ್ಯೋತಿ ಪ್ರಜ್ವಲಿಸಿ, ಹಸಿರು ಬಾವುಟ ಬೀಸಿ ವಿಜಯ ಜ್ಯೋತಿ ರಥದ ಮೆರವಣಿಗೆಗೆ ಚಾಲನೆ ನೀಡಿದರು. ಅವರಿಗೆ ಕಲಬುರಗಿ ತಹಶೀಲ್ದಾರ್ ಆನಂದಶೀಲ, ಲಿಂಗಾಯತ ಸಮುದಾಯದ ಮುಖಂಡರಾದ ಶರಣಕುಮಾರ ಮೋದಿ, ಶರಣು ಪಪ್ಪಾ ಸಾಥ್ ನೀಡಿದರು.
ವಿಜಯ ಜ್ಯೋತಿ ರಥವು ಸರ್ದಾರ್ ಪಟೇಲ್ ವೃತ್ತದಿಂದ ಜಗತ್ ವೃತ್ತ, ಸೂಪರ್‌ಮಾರ್ಕೆಟ್, ಗಂಜ್ ಪ್ರದೇಶದ ಮೂಲಕ ಹುಮನಾಬಾದ್ ರಿಂಗ್ ರಸ್ತೆ ತಲುಪಿತು. ಅಲ್ಲಿಂದ ಕಮಲಾಪುರ ತಾಲ್ಲೂಕು ಆಡಳಿತ ರಥವನ್ನು ಸ್ವಾಗತಿಸಿಕೊಂಡಿತು.
ಕಲಬುರಗಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ವಿಜಯಕುಮಾರ ಜೇವರ್ಗಿ, ಸಿದ್ದಮ್ಮ ಪಾಟೀಲ, ಮಾಲಾ ಕಣ್ಣಿ , ಸಾವಿತ್ರಿ ಕುಳಗೇರಿ, ಗೌರಿ ಚಿಚಕೋಟಿ, ಜ್ಯೋತಿ ಮರಗೋಳ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಸೇರಿದಂತೆ ಹಲವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಕಲಬುರಗಿ ತಾಲ್ಲೂಕಿನ ಕುಸನೂರಿನ ಮಹಾಲಿಂಗೇಶ್ವರ ಡೊಳ್ಳಿನ ಸಂಘ ಹಾಗೂ ಅಫಜಲಪುರ ತಾಲ್ಲೂಕಿನ ಶಿರವಾಳದ ಮೇರಾ ಕೋಲಾಟ ಕಲಾ ತಂಡಗಳ ಕಲಾವಿದರು ಮೆರವಣಿಗೆಗೆ ಮೆರುಗು ತುಂಬಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.