ಚಿತ್ತಾಪುರ: ತಾಲ್ಲೂಕಿನ ಅಲ್ಲೂರ್ (ಬಿ) ಗ್ರಾಮದ ರಸ್ತೆ ನಿರ್ಮಾಣಕ್ಕೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯು ಸಲ್ಲಿಸಿದ ಅಂದಾಜು ಪಟ್ಟಿಯಂತೆ ₹2.5 ಕೋಟಿ ಅನುದಾನ ಮಂಜೂರಾಗಿತ್ತು. ನಂತರ ಸರ್ಕಾರ ಅನುದಾನ ಹಿಂದಕ್ಕೆ ಪಡೆದಿರುವುದು ಬೆಳಕಿಗೆ ಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ರಸ್ತೆ ಸುಧಾರಣೆಗೆ ಅನುದಾನ ಮಂಜೂರಾಗಿತ್ತು. ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳುವ ಪ್ರಕ್ರಿಯೆ ಶುರುವಾಗುವ ಹಂತದಲ್ಲೆ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅನುದಾನ ವಾಪಾಸು ಪಡೆಯಲಾಗಿದೆ ಎಂದು ಪಂಚಾಯತ್ ರಾಜ್ ಇಲಾಖೆ ಮೂಲಗಳು ತಿಳಿಸಿವೆ.
ತಾಲ್ಲೂಕಿನ ಅಲ್ಲೂರ್ (ಬಿ) ಮತ್ತು ಅಲ್ಲೂರ್ (ಕೆ) ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ 2010 ರಲ್ಲಿ ನಿರ್ಮಾಣ ಮಾಡಲಾಗಿತ್ತು. ಸರಿಯಾದ ದುರಸ್ತಿ ನಿರ್ವಹಣೆ ಕಾಣದೆ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ 2008 ರಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-2ರ ಅಡಿಯಲ್ಲಿ ಅಲ್ಲೂರ್ (ಬಿ) ಗ್ರಾಮದಿಂದ ಸಾತನೂರು-ಅಳ್ಳೊಳ್ಳಿ ಕೂಡು ರಸ್ತೆಯವರೆಗೆ 8.49 ಕಿ.ಮೀ ರಸ್ತೆ ಸುಧಾರಣೆ ಮತ್ತು ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿತ್ತು.
ಜನವರಿ 31, 2010 ರಂದು ಕಾಮಗಾರಿ ಪೂರ್ಣಗೊಂಡಿತ್ತು. ನಂತರ 5 ವರ್ಷಗಳ ಕಾಲ ರಸ್ತೆ ನಿರ್ವಹಣೆ ಗುತ್ತಿಗೆದಾರರಿಗೆ ಸೇರಿತ್ತು. ಅದಕ್ಕಾಗಿ ₹15.65 ಲಕ್ಷ ಹಣ ಇಲಾಖೆಯಲ್ಲಿ ಟೆಂಡರ್ ಹಣ ಕಾಯ್ದಿಡಲಾಗಿತ್ತು. ಆದರೆ, ರಸ್ತೆ ಹಾಳಾದರೂ ಕಾಮಗಾರಿ ಕೈಗೊಂಡಿದ್ದ ಗುತ್ತಿಗೆದಾರ ದುರಸ್ತಿ ಕೆಲಸ ಮಾಡದ ಕಾರಣ ರಸ್ತೆ ಪ್ರತಿ ವರ್ಷ ಹದಗೆಡುತ್ತಾ ಈಗ ಸಂಪೂರ್ಣ ಹಾಳಾಗಿ ಹೋಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಹಾಳಾಗಿ ಡಾಂಬರ್ ರಸ್ತೆ ಕಚ್ಚಾ ರಸ್ತೆಯಾಗಿ ಮಾರ್ಪಟ್ಟಿದೆ. ತಗ್ಗು ಉಂಟಾಗಿ ವಾಹನ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ಚಿತ್ತಾಪುರದಿಂದ ಗುರುಮಠಕಲ್ ಮತ್ತು ಯಾದಗಿರಿಗೆ ಮತ್ತು ಗ್ರಾಮಕ್ಕೆ ಇದೇ ಮಾರ್ಗದಿಂದ ಬಸ್ ಸಂಚಾರ ಇದೆ. ರಸ್ತೆ ದುರಸ್ತಿ ಮಾಡಿಸುತ್ತಿಲ್ಲ. ಹದಗೆಟ್ಟ ರಸ್ತೆಯಲ್ಲಿ ತುಂಬಾ ಕಷ್ಟವಾಗುತ್ತಿದೆ ಎಂದು ವಾಹನ ಚಾಲಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆ ಹದಗೆಟ್ಟಿದ್ದರಿಂದ ಅಲ್ಲೂರ್ (ಬಿ) ಮತ್ತು ಅಲ್ಲೂರ್ (ಕೆ) ಗ್ರಾಮದ ಜನರು ಬೈಕ್ ಮತ್ತು ಕಾರು ಮೂಲಕ ರಾಮತೀರ್ಥ ಗ್ರಾಮದ ಮೂಲಕ ರಾಜ್ಯ ಹೆದ್ದಾರಿ-126 ಬಳಸಿ ಭಂಕಲಗಾ, ಹೊಸೂರ ಮೂಲಕ ಚಿತ್ತಾಪುರಕ್ಕೆ ಬಂದು ಹೋಗುತ್ತಿದ್ದಾರೆ. ಆದಷ್ಟು ಬೇಗ ರಸ್ತೆ ಸುಧಾರಣೆ ಮಾಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.