ADVERTISEMENT

ಕಲಬುರಗಿ: ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದ ಖರೀದಿ ನಿಯಮ!

ಪಹಣಿಯಲ್ಲಿ ಹೆಸರು ಬೆಳೆ ಎಂದು ನಮೂದಿಸಿದರಷ್ಟೇ ನೋಂದಣಿಗೆ ಅವಕಾಶ; ಪೂರ್ಣಗೊಳ್ಳದ ಬೆಳೆ ಸಮೀಕ್ಷೆ

ಮನೋಜ ಕುಮಾರ್ ಗುದ್ದಿ
Published 11 ಸೆಪ್ಟೆಂಬರ್ 2024, 5:00 IST
Last Updated 11 ಸೆಪ್ಟೆಂಬರ್ 2024, 5:00 IST
ಹೆಸರು ಕಾಳು
ಹೆಸರು ಕಾಳು   

ಕಲಬುರಗಿ: ರೈತರು, ರೈತ ಸಂಘಟನೆಗಳ ಒತ್ತಾಯದ ಬಳಿಕ ಹೆಸರು ಕಾಳು ಖರೀದಿಗೆ ಸರ್ಕಾರ ಮುಂದಾಗಿದೆ. ಆದರೆ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ವಿಧಿಸಿರುವ ನಿಯಮದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ಮಾರಾಟ ನೋಂದಣಿ ಮಾಡಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ.

ಇದರಿಂದಾಗಿ ಸಾವಿರಾರು ರೈತರು ತಾವು ಬೆಳೆದ ಹೆಸರು ಕಾಳನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡುವ ಬದಲು ಅಗ್ಗದ ಬೆಲೆಗೆ ಅಡತಿ ಅಂಗಡಿಗಳಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ 55,444 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದ್ದು, ಸುಮಾರು 4.5 ಲಕ್ಷ ಕ್ವಿಂಟಲ್ ಹೆಸರು ರಾಶಿ ಮಾಡಲಾಗಿದೆ. ಅದರಲ್ಲಿ ಸಹಕಾರ ಮಾರಾಟ ಮಹಾಮಂಡಳಿಯು 2.25 ಲಕ್ಷ ಕ್ವಿಂಟಲ್ ಹೆಸರು ಖರೀದಿಸಲು ಉದ್ದೇಶಿಸಿದೆ. 

ಜಿಲ್ಲೆಯಲ್ಲಿ ಸಾವಿರಾರು ರೈತರ ಪಹಣಿಗಳಲ್ಲಿ ಹೆಸರು ಬೆಳೆ ಬೆಳೆದ ಬಗ್ಗೆ ದಾಖಲಾಗಿಲ್ಲ. ಹೀಗಾಗಿ, ಪಹಣಿಯಲ್ಲಿ ಹೆಸರು ಬೆಳೆಯ ಉಲ್ಲೇಖವಿಲ್ಲದೇ ಮಹಾಮಂಡಳಿಯು ನೋಂದಣಿಗೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಕಷ್ಟಪಟ್ಟು ಬೆಳೆದ ಮುಂಗಾರು ಬೆಳೆಯನ್ನು ಕಡಿಮೆ ಬೆಲೆಗೆ ಖಾಸಗಿಯವರಿಗೆ ಮಾರಾಟ ಮಾಡಬೇಕಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

ADVERTISEMENT

ಸೆಪ್ಟೆಂಬರ್ 30ರವರೆಗೆ ಜಿಲ್ಲೆಯಾದ್ಯಂತ ಕೃಷಿ ಇಲಾಖೆಯು ಬೆಳೆ ಸಮೀಕ್ಷೆ ನಡೆಸುತ್ತಿದೆ. ಪ್ರತಿ ಹೊಲದ ಮಧ್ಯಭಾಗಕ್ಕೆ ಹೋಗಿ ಅಲ್ಲಿನ ಬೆಳೆಯ ಜಿಪಿಎಸ್‌ ಫೋಟೊ ತೆಗೆದು ಅಪ್‌ಲೋಡ್‌ ಮಾಡಬೇಕು. ಜಿಲ್ಲೆಯಾದ್ಯಂತ 919 ಖಾಸಗಿ ಬೆಳೆ ಸಮೀಕ್ಷೆ ಮಾಡುವ ಪಿಆರ್‌ಗಳಿದ್ದು, ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತಿದ್ದರಿಂದ ಮಧ್ಯಭಾಗಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.

‘ಬೆಳೆ ಸಮೀಕ್ಷೆ ಮಾಡುವವರು ಖಾಸಗಿ ವ್ಯಕ್ತಿಗಳಾಗಿರುವುದರಿಂದ ಟಾರ್ಗೆಟ್ ಕೊಟ್ಟು ಇಂತಿಷ್ಟು ಹೊಲಗಳ ಬೆಳೆ ಸಮೀಕ್ಷೆ ಮಾಡಲೇಬೇಕು ಎಂದು ನಾವೂ ಹೇಳುವಂತಿಲ್ಲ. ಹೀಗಾಗಿ, ಹೆಸರು ಖರೀದಿಗೆ ನೋಂದಣಿ ದಿನಾಂಕವನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ’ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಹೆಸರು ₹ 8 ಸಾವಿರದಂತೆ ಇದ್ದು, ಬೆಂಬಲ ಬೆಲೆಯಡಿ ₹ 8682ಕ್ಕೆ ಖರೀದಿ ಮಾಡಲಾಗುತ್ತಿದೆ.

‘ಈಗಾಗಲೇ ಶೇ 70ರಷ್ಟು ರೈತರು ರಾಶಿ ಮಾಡಿ ಮಾರುಕಟ್ಟೆಗೆ ಸಾಗಿಸಿದ್ದಾರೆ. ಉಳಿದ ರೈತರಿಗಾದರೂ ನಿಯಮಗಳ ಭೀತಿ ತೋರಿಸದೇ ಹೆಸರು ಖರೀದಿಗೆ ಮುಂದಾಗಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಅಥವಾ ಕಂದಾಯ ನಿರೀಕ್ಷಕರ ದೃಢೀಕರಣವನ್ನು ಪಡೆದುಕೊಂಡು ನೋಂದಣಿ ಮಾಡಿಕೊಳ್ಳಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮನವಿ ಮಾಡಿದರು.

ನೋಂದಣಿ ಸಂದರ್ಭದಲ್ಲಿ ಪಹಣಿಯಲ್ಲಿ ಹೆಸರು ಬೆಳೆ ನಮೂದಿಸಿರುವುದನ್ನು ಕಡ್ಡಾಯ ಮಾಡದೇ ಖರೀದಿ ಸಂದರ್ಭದಲ್ಲಿ ಈ ಬಗ್ಗೆ ದಾಖಲೆ ಸಲ್ಲಿಸಲು ಅವಕಾಶ ನೀಡುವಂತೆ ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕರಿಗೆ ಪತ್ರ ಬರೆಯುತ್ತಿದ್ದೇವೆ
ಸಮದ್ ಪಟೇಲ್ ಜಂಟಿ ಕೃಷಿ ನಿರ್ದೇಶಕ

‘ಅವೈಜ್ಞಾನಿಕ ಕ್ರಮದಿಂದ ರೈತರಿಗೆ ಅನ್ಯಾಯ’

‘ಹೆಸರು ಬೆಳೆ ಖರೀದಿ ಕೇಂದ್ರಗಳನ್ನು ತೆರೆದಿರುವ ರಾಜ್ಯ ಸಹಕಾರ ಮಾರಾಟ ಮಂಡಳಿಯವರು ರೈತರ ಪಹಣಿಯಲ್ಲಿ ಹೆಸರು ಬೆಳೆ ಇರಲೇಬೇಕು ಎನ್ನುವ ನಿಯಮ ಹೇರುವ ಮೂಲಕ ರೈತರನ್ನು ಬೆಂಬಲ ಬೆಲೆ ಖರೀದಿಯಿಂದ ದೂರ ಇಡುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿಗಳ ಸಲಹೆಗಾರ ಆಳಂದ ಶಾಸಕ ಬಿ.ಆರ್. ಪಾಟೀಲ ಆರೋಪಿಸಿದ್ದಾರೆ. ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ‘ಹೊಲದಲ್ಲಿ ಹೆಸರು ಬೆಳೆ ಒಂದೇ ಇರಬೇಕು. ಬೇರೆ ಬೆಳೆ ಇರಬಾರದು ಎಂದು ಅಧಿಕಾರಿಗಳು ಪಹಣಿಯಲ್ಲಿ ಬೆಳೆ ನಮೂದಿಸಲು ಷರತ್ತು ಹಾಕುತ್ತಿದ್ದಾರೆ. ಆದರೆ ಮೊದಲಿನಿಂದಲೂ ರೈತರು ಒಂದು ಬೆಳೆಯ ಮಧ್ಯೆ ಹೆಸರು ಉದ್ದು ಅಲಸಂದಿಯಂತಹ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೇ ಬೆಳೆ ಸಮೀಕ್ಷೆ ತಡವಾಗುತ್ತಿದ್ದು ಅದು ಪಹಣಿಯಲ್ಲಿ ದಾಖಲಾಗುವುದು ಯಾವಾಗ?’ ಎಂದು ಪ್ರಶ್ನಿಸಿದರು. ‘ಈ ನಿಯಮ ಸಡಿಲಿಸಿ ಎಲ್ಲ ರೈತರ ಹೆಸರು ಖರೀದಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಕೃಷಿ ಮಾರಾಟ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ. ಈ ಸಮಸ್ಯೆ ಇತ್ಯರ್ಥಪಡಿಸುವಂತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಅವರೂ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.