ಕಲಬುರಗಿ: ಆಳಂದ ತಾಲ್ಲೂಕಿನ ಕಡಗಂಚಿಯಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ವಸಂತ ಪಂಚಮಿಯ ಅಂಗವಾಗಿ ಆಯೋಜಿಸಿದ್ದ ಸರಸ್ವತಿ ಪೂಜೆಗೆ ವಿದ್ಯಾರ್ಥಿಗಳ ಗುಂಪೊಂದು ಆಕ್ಷೇಪ ವ್ಯಕ್ತಪಡಿಸಿ ವಿವಿಯ ಗ್ರಂಥಾಲಯದ ಮುಖ್ಯಾಧಿಕಾರಿಯೊಂದಿಗೆ ವಾಗ್ವಾದ ನಡೆಸಿತು.
ವಿಶ್ವವಿದ್ಯಾಲಯದ ಗ್ರಂಥಾಲಯದ ಸಿಬ್ಬಂದಿ ಹಾಗೂ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳ ಗುಂಪೊಂದು ಸರಸ್ವತಿ ಪೂಜೆ ಆಯೋಜಿಸಿತ್ತು. ಶೈಕ್ಷಣಿಕ ಕೇಂದ್ರದಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ಧಾರ್ಮಿಕ ಆಚರಣೆಗಳು ನಡೆಸಬಾರದು ಎಂದು ಆಕ್ಷೇಪಿಸಿ ಎಡಪಂಥಿಯ ವಿಚಾರಧಾರೆಯ ವಿದ್ಯಾರ್ಥಿಗಳ ಮತ್ತೊಂದು ಗುಂಪು ಪೂಜೆಗೆ ವಿರೋಧ ವ್ಯಕ್ತಪಡಿಸಿತು. ವಿರೋಧದ ನಡುವೆಯೂ ಮಂತ್ರಗಳನ್ನು ಪಠಿಸುತ್ತಾ ಪೂಜೆ ನಡೆಸಲಾಯಿತು.
‘ವಿಶ್ವವಿದ್ಯಾಲಯದ ಆವರಣದಲ್ಲಿ ಸರಸ್ವತಿ ಪೂಜೆ ಏಕೆ ಮಾಡುತ್ತೀರಿ? ಇದೇನು ವಿಶ್ವವಿದ್ಯಾಲಯವೋ ಅಥವಾ ದೇವಸ್ಥಾನವೋ? ಪೂಜೆ ಪುನಸ್ಕಾರಗಳನ್ನು ನಿಮ್ಮ ಮನೆಗಳಲ್ಲಿ ಮಾಡಿಕೊಳ್ಳಿ. ಇದು ಶಾಲೆಯಲ್ಲ, ಎಲ್ಲ ಧರ್ಮದವರು ಓದುವ ವಿಶ್ವವಿದ್ಯಾಲಯ. ನಾನು ಬೌದ್ಧ ಧರ್ಮೀಯ. ಈ ಹಿಂದೆ ಅಂಬೇಡ್ಕರ್ ಅವರ ಫೋಟೊ ಇರಿಸಿ ಹಾರ ಹಾಕಲು ಅವಕಾಶ ಕೊಡಲಿಲ್ಲ. ಈಗ ಪೂಜೆಗೆ ಅವಕಾಶ ಕೊಟ್ಟಿದ್ದು ಎಷ್ಟು ಸರಿ’ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸಿದ.
‘ಗ್ರಂಥಾಲಯವನ್ನು ಧರ್ಮಛತ್ರ ಅಥವಾ ದೇವಸ್ಥಾನ ಎಂದುಕೊಂಡಿದ್ದೀರಾ? ಮನಸ್ಸಿಗೆ ಬಂದಂತೆ ಗಂಟೆ ಬಾರಿಸಿ, ಪೂಜೆ ಮಾಡುವುದಾದರೆ ದೇವಸ್ಥಾನಕ್ಕೆ ಹೋಗಿ. ಇಲ್ಲಿಗೆ ಏಕೆ ಬಂದಿದ್ದೀರಿ?’ ಎಂದರು.
ವಿದ್ಯಾರ್ಥಿಗಳ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಗ್ರಂಥಾಲಯದ ಮುಖ್ಯಾಧಿಕಾರಿ, ‘ಇದೆಲ್ಲ ನಮಗೆ ಹೇಳ ಬೇಡಿ. ನೀವು ಏನಾದರು ಕೇಳುವುದು ಇದ್ದರೆ ಕುಲಪತಿಗಳ ಬಳಿ ಹೋಗಿ ಕೇಳಿ’ ಎಂದು ಹೇಳಿದರು.
ನರೋಣಾ ಠಾಣೆಯ ಪೊಲೀಸರು ಕ್ಯಾಂಪಸ್‌ಗೆ ಬಂದು ವಾಗ್ವಾದ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಿಮ್ಮ ನಿಮ್ಮ ಆಚರಣೆಗಳನ್ನು ಮಾಡಿ ಎಂದು ತಿಳಿ ಹೇಳಿ, ವಿದ್ಯಾರ್ಥಿಗಳನ್ನು ಅಲ್ಲಿಂದ ಕಳುಹಿಸಿದರು.
‘ಈಚೆಗೆ ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿಗೆ ಹಾರ ಹಾಕಲು ಹೋದಾಗ ಕಾನೂನು ಬಾಹಿರ ಎಂದು ತಡೆದು ನನ್ನನ್ನು ತಳ್ಳಿದರು. ಗ್ರಂಥಾಲಯದ ಒಳಗೆ ಪೂಜೆ ಕಾರ್ಯಕ್ರಮ ಮಾಡುತ್ತಿದ್ದರು. ವಿಶ್ವವಿದ್ಯಾಲಯ ಅನುಮತಿ ಕೊಟ್ಟಿದೆಯಾ ಎಂದು ಕೇಳಿದಾಗ ಸಮರ್ಪಕವಾಗಿ ಉತ್ತರ ನೀಡಲಿಲ್ಲ’ ಎಂದು ಸಂಶೋಧನಾ ವಿದ್ಯಾರ್ಥಿ ನಂದನಕುಮಾರ ಹೇಳಿದರು.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ, ‘ವಸಂತ ಪಂಚಮಿಯ ಅಂಗವಾಗಿ ಆಯಾ ವಿಭಾಗದ ವಿದ್ಯಾರ್ಥಿಗಳು ಪೂಜೆ ಆಯೋಜಿಸಿದ್ದರು. ಬೇರೆ ಬೇರೆ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ತಮ್ಮ ಆಚರಣೆಗಳನ್ನು ಮಾಡುತ್ತಾರೆ. ಕೆಲವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ’ ಎಂದರು.
ಈ ಹಿಂದೆಯೂ ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿತ್ತು. ರಾಮನವಮಿ ವೇಳೆ ರಾಮನ ಪೂಜೆ ಮಾಡಿದ ಸಂಬಂಧ ಕೆಲವರು ಆಕ್ಷೇಪ ಎತ್ತಿದ್ದರು.
ರಾಮ ಸೀತೆ ಬಗ್ಗೆ ಅವಹೇಳನಕಾರಿ ಪೋಸ್ಟ್
ಸಿಯುಕೆ ವಿದ್ಯಾರ್ಥಿಗಳ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ರಾಮ ಮತ್ತು ಸೀತೆಯ ಬಗ್ಗೆ ಅವಹೇಳನಾಕಾರಿಯಾಗಿ ಬರೆಯಲಾಗಿದೆ ಎಂಬ ಪೋಸ್ಟರ್ ಹರಿದಾಡುತ್ತಿದೆ. ಸೀತಾಯಣ ಪುಸ್ತಕ ಮುಖಪುಟದೊಂದಿಗೆ ರಾಮ ಹಾಗೂ ಸೀತೆಯ ಚಾರಿತ್ರ್ಯ ಕುರಿತು ಬರೆಯಲಾಗಿದೆ. ಜತೆಗೆ ಸರಸ್ವತಿಯ ಬಗ್ಗೆಯೂ ಪ್ರಸ್ತಾಪಿಸಿ ಪೋಸ್ಟ್ ಮಾಡಲಾಗಿದೆ ಎಂಬ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.