ಕಲಬುರಗಿ: ಮನೆ ಬದಲಾಯಿಸಿದ ನಂತರ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಹಳೆ ಮನೆಯ ಆರ್.ಆರ್. ಸಂಖ್ಯೆಯನ್ನು ಡಿ–ಲಿಂಕ್ ಮಾಡುವ ಸೌಲಭ್ಯ ಈಗ ಜೆಸ್ಕಾಂ ಗ್ರಾಹಕರಿಗೆ ಲಭ್ಯವಾಗಿದೆ.
ಬಾಡಿಗೆ ಮನೆ ಅಥವಾ ಯಾವುದೋ ಕಾರಣಕ್ಕೆ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಆರ್.ಆರ್. ಖಾತೆ ಸಂಖ್ಯೆಯನ್ನು ಡಿ–ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್. ಸಂಖ್ಯೆಯೊಂದಿಗೆ ನೋಂದಣಿ ಮಾಡಿಸಿ, ಗೃಹ ಜ್ಯೋತಿಯ ಲಾಭ ಪಡೆಯಬಹುದಾಗಿದೆ.
ಜೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ 2024ರ ಸೆಪ್ಟೆಂಬರ್ ಅಂತ್ಯಕ್ಕೆ ಒಟ್ಟು 21.95 ಲಕ್ಷ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಅವುಗಳ ಪೈಕಿ 20.69 ಲಕ್ಷ ಜನರು ಗೃಹ ಜ್ಯೋತಿಯ ಫಲಾನುಭವಿಗಳಾಗಿದ್ದಾರೆ. ಆದರೆ, ಬಾಡಿಗೆದಾರರು ಮನೆ ಬದಲಿಸುವಾಗ ಡಿ–ಲಿಂಕ್ ಸೌಲಭ್ಯವಿಲ್ಲದೆ ಗೃಹಜ್ಯೋತಿ ಲಾಭ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದೀಗ ಡಿ–ಲಿಂಕ್ ಸೌಲಭ್ಯ ಲಭ್ಯವಾಗಿರುವುದು ಸಾವಿರಾರು ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ.
ಹಂತ 1– ಗ್ರಾಹಕರು: https://sevasindhu.karnataka.gov.in/GruhaJyothi_Delink/GetAadhaarData.aspx ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಲಿಂಕ್ ಓಪನ್ ಮಾಡಿ ಆಧಾರ್ ಸಂಖ್ಯೆಯನ್ನು ನೋಂದಣಿ ಮಾಡಿ ಒಟಿಪಿ ಪಡೆದುಕೊಳ್ಳಬೇಕು.
ಹಂತ 2– ಎರಡು ಬಾರಿ ಒಟಿಪಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ಹಂತ 3– ಅರ್ಜಿದಾರರ ವಿವರಗಳನ್ನು ತೋರಿಸಲಾಗುತ್ತದೆ ಮತ್ತು ಮೇಲಿನ ವಿವರಗಳು ಸರಿಯಾಗಿದೆಯೇ ಎಂಬ ಆಯ್ಕೆಗೆ ಇಲ್ಲ ಎಂದು ಕ್ಲಿಕ್ ಮಾಡಿ, ಡಿ–ಲಿಂಕ್ ಕಾರಣವನ್ನು ಆಯ್ಕೆ ಮಾಡಿ ಸಲ್ಲಿಸು (ಸಬ್ಮಿಟ್) ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
ಮನೆ ಬದಲಿಸುವ ಸಂದರ್ಭದಲ್ಲಿ ಆಧಾರ್ ನಂಬರ್ ಜೊತೆ ಲಿಂಕ್ ಆಗಿರುವ ಆರ್.ಆರ್. ನಂಬರ್ ವಿವರ ಪರಿಶೀಲಿಸಿ ಡಿ–ಲಿಂಕ್ ಮಾಡಬಹುದು. ಹೊಸ ಮನೆಗೆ ಗೃಹಜ್ಯೋತಿ ಲಾಭ ಪಡೆಯಲು ಸದ್ಯ ಯಾವುದೇ ಆಧಾರ್ ಜತೆ ಲಿಂಕ್ ಆಗಿರದ ಆರ್.ಆರ್. ನಂಬರ್‌ಗೆ ಲಿಂಕ್ ಮಾಡಬಹುದು. ಅಂದರೆ, ಈ ಹಿಂದೆ ಮನೆಯಲ್ಲಿ ವಾಸವಿದ್ದರೂ ಡಿ–ಲಿಂಕ್ ಮಾಡಿರುವುದನ್ನು ಖಾತ್ರಿ ಪಡಿಸಿಕೊಳ್ಳಿ.
ಅರ್ಹ ಫಲಾನುಭವಿಗಳಿಗೆ ಯಾವುದೇ ಕಾರಣಕ್ಕೂ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಡಿ ಲಿಂಕ್ ಸೌಲಭ್ಯ ಕಲ್ಪಿಸಲಾಗುತ್ತಿದ್ದು ಗ್ರಾಹಕರು ಇದರ ಸದುಪಯೋಗಪಡಿಸಿಕೊಳ್ಳಬಹುದು–ರವೀಂದ್ರ ಕರಲಿಂಗಣ್ಣವರ್ ವ್ಯವಸ್ಥಾಪಕ ನಿರ್ದೇಶಕ ಜೆಸ್ಕಾಂ ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.