ವಾಡಿ: ‘ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಹೀಗಾಗಿ ದಸರಾ ಹಬ್ಬದ ಆಚರಣೆಗೂ ತಣ್ಣೀರು ಹಾಕಿದಂತಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಚಿತ್ತಾಪುರ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ₹10,000 ಹಾಗೂ ಪ್ರೌಢಶಾಲೆಯ ಅತಿಥಿ ಶಿಕ್ಷಕರಿಗೆ ₹10,500 ಕೊಡುವುದಾಗಿ ಹೇಳಿ ಅಗತ್ಯವಿರುವ ಶಾಲೆಗಳಿಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಒಟ್ಟು 322 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ಜೂನ್ ತಿಂಗಳಲ್ಲಿ ಕರ್ತವ್ಯಕ್ಕೆ ಶಾಲೆಗೆ ಬಂದಿರುವ 268 ಪ್ರಾಥಮಿಕ ಹಾಗೂ 54 ಪ್ರೌಢ ಶಾಲೆಯ ಅತಿಥಿ ಶಿಕ್ಷಕರಿಗೆ ಸೆಪ್ಟೆಂಬರ್ ತಿಂಗಳು ಮುಕ್ತಾಯವಾದರೂ ಗೌರವಧನ ಪಾವತಿಸಿಲ್ಲ. ಪರಿಣಾಮ ಅತಿಥಿ ಶಿಕ್ಷಕರು ಆರ್ಥಿಕ ತೊಳಲಾಟಕ್ಕೆ ಸಿಲುಕಿದ್ದಾರೆ. ಕೈಯಲ್ಲಿ ಕಾಸಿಲ್ಲದೇ ಖರ್ಚು ನಿಭಾಯಿಸಲು ಸಾಲದ ಮೊರೆ ಹೋಗಿದ್ದಾರೆ.
ಹಳ್ಳಿಯಿಂದ ನಗರಕ್ಕೆ, ಪಟ್ಟಣದಿಂದ ಹಳ್ಳಿಯಲ್ಲಿರುವ ಶಾಲೆಗಳಿಗೆ ಪ್ರಯಾಣ ಮಾಡುವ ಅತಿಥಿ ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ. ಸಾರಿಗೆ ವೆಚ್ಚಕ್ಕೂ ಹಣ ಭರಿಸಲಾಗದಷ್ಟು ತೊಂದರೆ ಅನುಭವಿಸುವಂತಾಗಿದೆ.
ಸೆಪ್ಟೆಂಬರ್ ಕೊನೆಯ ವಾರ ವೇತನಕ್ಕಾಗಿ ಅನುದಾನ ಬಂದಿದೆ. ಆದರೆ ಮಾಹಿತಿ ಸಂಗ್ರಹಿಸಿ ವೇತನ ನೀಡಲು ಎಷ್ಟು ದಿನಗಳು ಬೇಕು. ನಾಡಹಬ್ಬ ದಸರೆಗೆ ಹಣ ಕೈಸೇರಿದ್ದರೆ ಖುಷಿಯಿಂದ ಹಬ್ಬ ಆಚರಿಸುತ್ತಿದ್ದೆವು ಎಂದು ಕೆಲ ಅತಿಥಿ ಶಿಕ್ಷಕರು ಇಲಾಖೆ ವಿಳಂಬ ದೋರಣೆ ವಿರುದ್ಧ ಕಿಡಿ ಕಾರಿದರು.
ಏಕೋಪಾಧ್ಯಾಯ ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರು ಇಲ್ಲದಿದ್ದಾಗ ಶಾಲೆಯ ವ್ಯವಸ್ಥೆ ಅಚ್ಚುಕಟ್ಟಾಗಿ ತೂಗಿಸುವ ನಮಗೆ, ಸಕಾಲಕ್ಕೆ ಮಾಸಿಕ ಗೌರವಧನ ಸಿಗದಿರುವುದು ಚಿಂತೆಗೀಡು ಮಾಡಿದೆ ಎಂದು ಅತಿಥಿ ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.
‘ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಅನುದಾನ ಬಿಡುಗಡೆ ವಿಳಂಬದಿಂದಾಗಿ ಗೌರವ ಸಂಭಾವನೆ ಸಕಾಲಕ್ಕೆ ದೊರಕದೇ ತೀವ್ರ ನೋವು ಅನುಭವಿಸುತ್ತಿದ್ದೇವೆ. ಗೌರವಧನ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ₹15,000 ಹಾಗೂ ಪ್ರೌಢಶಾಲೆ ಶಿಕ್ಷಕರಿಗೆ ₹16,000 ಪರಿಷ್ಕರಿಸಿ, ಜೂನ್ ತಿಂಗಳಿನಿಂದ ಅನ್ವಯಿಸಿ ಪಾವತಿಸುವ ಬೇಡಿಕೆಯನ್ನೂ ಈಡೇರಿಸಿಲ್ಲ' ಎಂದು ರಾಜ್ಯ ಅತಿಥಿ ಶಿಕ್ಷಕರ ಸಂಘದ ಚಿತ್ತಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಸೋಮು ದಂಡಗುಂಡ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿದಿನ ಸಾರಿಗೆಗೆ ಹಣ ವ್ಯಯಿಸಿ ಹೋಗಿ ಪಾಠ ಮಾಡುತ್ತಿದ್ದೇವೆ. ನಾಲ್ಕು ತಿಂಗಳಿಂದ ವೇತನವಿಲ್ಲ. ದಸರಾ ಹಬ್ಬ ಆಚರಣೆಗೂ ತಣ್ಣೀರು ಬಿದ್ದಿದೆರಮೇಶ ಜೋಶಿ ಅತಿಥಿ ಶಿಕ್ಷಕ
ಸೆಪ್ಟೆಂಬರ್ ಕೊನೆಯ ವಾರದಲ್ಲಿ ಅನುದಾನ ಬಂದಿದೆ. ಅತಿಥಿ ಶಿಕ್ಷಕರ ಮಾಹಿತಿ ಕಲೆಹಾಕಿದ್ದು ಶೀಘ್ರವೇ ಹಣ ಪಾವತಿಸಲಾಗುವುದುಶಶಿಧರ ಎಂ. ಬಿರಾದಾರ ಬಿಇಒ ಚಿತ್ತಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.