ADVERTISEMENT

ಕಿರಿದಾಯಿತು ಕಲ್ಯಾಣ ನಾಡಿನ ಮೊದಲ ವಿವಿ

ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಈಗ 175 ಕಾಲೇಜುಗಳು ಮಾತ್ರ

ಸಿದ್ದರಾಜು ಎಂ.
Published 28 ಜೂನ್ 2023, 5:12 IST
Last Updated 28 ಜೂನ್ 2023, 5:12 IST
ಗುಲಬರ್ಗಾ ವಿಶ್ವವಿದ್ಯಾಲಯ ಚಿತ್ರ
ಗುಲಬರ್ಗಾ ವಿಶ್ವವಿದ್ಯಾಲಯ ಚಿತ್ರ   

ಕಲಬುರಗಿ: ನಾಲ್ಕು ದಶಕಗಳ ಹಿಂದೆ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ತನ್ನ ವ್ಯಾಪ್ತಿಯನ್ನು ಹೊಂದಿದ್ದ ಗುಲಬರ್ಗಾ ವಿಶ್ವವಿದ್ಯಾಲಯವು ಈಗ ಕಲಬುರಗಿ ಜಿಲ್ಲೆಗಷ್ಟೇ ಸೀಮಿತವಾಗಿ ಉಳಿದುಕೊಂಡಿದೆ.

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರವಾಗಿದ್ದ ಗುಲಬರ್ಗಾವು 1980ರಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯವಾಗಿ ರೂಪುಗೊಂಡಿತು. ಕಲ್ಯಾಣ ಕರ್ನಾಟಕದ ಮೊದಲ ವಿಶ್ವವಿದ್ಯಾಲಯದ ಹೆಗ್ಗಳಿಕೆಗೆ ಪಾತ್ರವಾಗಿದ್ದ ಗುಲಬರ್ಗಾ ವಿ.ವಿ ವ್ಯಾಪ್ತಿಗೆ ಬಳ್ಳಾರಿ, ಕೊಪ್ಪಳ–ರಾಯಚೂರು, ಯಾದಗಿರಿ, ಬೀದರ್‌ ಹಾಗೂ ಕಲಬುರಗಿ ಒಳಪಟ್ಟಿದ್ದವು. ಕ್ರಮೇಣ ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳು ಹಂಪಿ ಕನ್ನಡ ವಿಶ್ವವಿದ್ಯಾಯದ ಅಧೀನಕ್ಕೆ ಒಳಪಟ್ಟರೆ, 2021ರಲ್ಲಿ ರಾಯಚೂರು, 2022ರಲ್ಲಿ ಬೀದರ್‌ ಪ್ರತ್ಯೇಕ ವಿಶ್ವವಿದ್ಯಾಲಯವಾಗಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕೊಂಡಿ ಕಳಚಿಕೊಂಡವು.

ರಾಯಚೂರು, ಯಾದಗಿರಿ, ಬೀದರ್‌ ಹಾಗೂ ಕಲಬುರಗಿ ಈ ನಾಲ್ಕು ಜಿಲ್ಲೆಗಳಿಂದ ಬರೋಬ್ಬರಿ 545 ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ಕಾಲೇಜು ಹಾಗೂ ಮೂರು ಸ್ನಾತಕೋತ್ತರ ಕೇಂದ್ರಗಳನ್ನು ಹೊಂದಿತ್ತು. ಈಗ ಇದರ ವ್ಯಾಪ್ತಿ 175 ಕಾಲೇಜು ಹಾಗೂ ಒಂದು ಸ್ನಾತಕೋತ್ತರ ಕೇಂದ್ರಕ್ಕಷ್ಟೇ ಸೀಮಿತವಾಗಿದೆ. ಸದ್ಯ ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ 111 ಪದವಿ ಕಾಲೇಜು, 11 ಸ್ನಾತಕೋತ್ತರ ಪದವಿ ಕಾಲೇಜು, 27 ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜು, 26 ಬಿ.ಇಡಿ ಕಾಲೇಜುಗಳು ಮಾತ್ರ ಈಗ ಉಳಿದುಕೊಂಡಿವೆ. ಭೌಗೋಳಿಕ ವ್ಯಾಪ್ತಿಯು ಚಿಕ್ಕದಾಗಲಿದ್ದು, ಕಲಬುರಗಿ ಜಿಲ್ಲೆಗಷ್ಟೇ ಸೀಮಿತ ಆಗಿದೆ.

ADVERTISEMENT

2021–2022ನೇ ಸಾಲಿನಿಂದ ರಾಯಚೂರು ವಿಶ್ವವಿದ್ಯಾಲಯ, 2022–23ರಿಂದ ಬೀದರ್ ವಿಶ್ವವಿದ್ಯಾಲಯವು ಶೈಕ್ಷಣಿಕ ಚಟುವಟಿಕೆ ಆರಂಭಿಸಿದ್ದು, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ 224 ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳು ಈಗ ರಾಯಚೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟಿವೆ. ಬೀದರ್‌ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಈಗ 146 ಮಹಾವಿದ್ಯಾಲಯಗಳು ಸೇರಿವೆ. ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದ ಸ್ಥಿರಾಸ್ತಿ, ಚರಾಸ್ತಿಗಳನ್ನು ಈ ಎರಡೂ ಹೊಸ ವಿಶ್ವವಿದ್ಯಾಲಯಗಳಿಗೆ ಹಸ್ತಾಂತರ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ.

2022–23ನೇ ಸಾಲಿನಲ್ಲಿ ಒಟ್ಟು 86,213 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಅವರಲ್ಲಿ 77,752 ಪದವಿ, 4,261 ಸ್ನಾತಕೋತ್ತರ ಪದವಿ, 4,200 ಬಿ.ಇಡಿ ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದರು. 2023–24ನೇ ಸಾಲಿನಲ್ಲಿ ಸದ್ಯ 73,461 ವಿದ್ಯಾರ್ಥಿಗಳು ಉಳಿದುಕೊಂಡಿದ್ದು, ಎಲ್ಲ ಪದವಿಗಳ ಮೊದಲ ವರ್ಷದ ಪ್ರವೇಶ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಬೇಕಿದ್ದು, ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖ ಆಗುವ ಸಾಧ್ಯತೆಯಿದೆ.

‘ಬೀದರ್‌ ವಿಶ್ವವಿದ್ಯಾಲಯದ ಎರಡು ಹಾಗೂ ಮೂರನೇ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಯ ಎರಡನೇ ವರ್ಷದ ವಿದ್ಯಾರ್ಥಿಗಳು ಗುಲಬರ್ಗಾ ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಡುತ್ತಾರೆ. ಈ ವಿದ್ಯಾರ್ಥಿಗಳಿಗೆ ಬೋಧನೆ, ಪಠ್ಯಕ್ರಮ, ಪರೀಕ್ಷೆ ಹಾಗೂ ಇತರೆ ನಿರ್ವಹಣೆ ಎಲ್ಲವೂ ನಮ್ಮ ವ್ಯಾಪ್ತಿಯಲ್ಲಿ ಇದೆ. ಮುಂದಿನ ಎರಡು ವರ್ಷಗಳಲ್ಲಿ ನಮ್ಮ ವ್ಯಾಪ್ತಿ ಸಂಪೂರ್ಣ ಕಡಿತಗೊಳ್ಳಲಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ. ದಯಾನಂದ ಅಗಸರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ 100 ಕಾಲೇಜುಗಳಿಗೆ ಒಂದು ವಿಶ್ವವಿದ್ಯಾಲಯ ಇರಬೇಕು ಎಂಬ ಭಾರತೀಯ ವಿಶ್ವವಿದ್ಯಾಲಯಗಳ ಸಂಘ (ಎಐಯು)ದ ನಿಯಮಾವಳಿ ಪ್ರಕಾರ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮುಂದಾಗಿವೆ. ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಸಾಲದು. ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಹಾಗೂ ಬೋಧಕ ಸಿಬ್ಬಂದಿ ನೇಮಕ ಮಾಡಬೇಕು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ನಿರ್ದೇಶಕ ಪ್ರೊ.ಎಚ್‌.ಟಿ.ಪೋತೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರೊ.ದಯಾನಂದ ಅಗಸರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.