ಕಲಬುರಗಿ: ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದ ಭವನದಲ್ಲಿ ಸೋಮವಾರ ನಡೆದ ವಿವಿಯ 42ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಘೋಷಿಸಿ, ಕೊನೆಯ ಗಳಿಗೆಯಲ್ಲಿ ನಿರಾಕರಿಸಲಾಗಿದೆ ಎಂದು ಆರೋಪಿಸಿ ಪದವೀಧರೆ ಮತ್ತು ಆಕೆಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಕಾಲ ಗೊಂದಲ ನಿರ್ಮಾಣವಾಯಿತು.
ಬೀದರ್ ಜಿಲ್ಲೆಯ ಭಾಲ್ಕಿಯ ಸಿ.ಬಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜಿನ ಪದವೀಧರೆ ರೋಶಿನಿ ಹಾಗೂ ಆಕೆಯ ಪೋಷಕರು ವಿವಿಯ ಕುಲಪತಿ ಪ್ರೊ.ದಯಾನಂದ ಅಗಸರ ವಿರುದ್ಧ ವಾಗ್ವಾದ ನಡೆಸಿದರು.
ಘಟಿಕೋತ್ಸವದಲ್ಲಿ ಸ್ವಾಗತ, ಗೌರವ ಡಾಕ್ಟರೇಟ್ ಪದವಿ ಪ್ರದಾನ ಮುಗಿದು ಚಿನ್ನದ ಪದಕ ವಿಜೇತರ ಪದವೀಧರರನ್ನು ವೇದಿಕೆಗೆ ಆಹ್ವಾನಿಸುತ್ತಿದ್ದಂತೆ ರೋಷಿನಿ ಹಾಗೂ ಆಕೆಯ ಪೋಷಕರು ವೇದಿಕೆಯ ಮುಂಭಾಗಕ್ಕೆ ಬಂದರು. ವೇದಿಕೆಯಿಂದ ಕೆಳಗೆ ಬಂದ ಪ್ರೊ.ದಯಾನಂದ ಅಗಸರ, ಪದವೀಧರೆ ಹಾಗೂ ಪೋಷಕರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಅವರ ಮಾತಿಗೆ ಕಿವಿಗೊಡಲಿಲ್ಲ.
'ಎಂಎ ಇಂಗ್ಲಿಷ್‌ನಲ್ಲಿ ಪ್ರಥಮ ಶ್ರೇಯಾಂಕ ಪಡೆದಿದ್ದು ಮುಂಬರುವ ಘಟಿಕೋತ್ಸವದಲ್ಲಿ ಚಿನ್ನದ ಪದಕ ನೀಡಬೇಕಾಗಿದೆ. ಜತೆಗೆ ಪ್ರಮಾಣ ಪತ್ರ ಮುದ್ರಿಸಬೇಕಾಗಿದೆ. ಈ ಸಂಬಂಧ ಎರಡು ಭಾವಚಿತ್ರಗಳನ್ನು ಹಾಗೂ ವಿಳಾಸ ಕಳುಹಿಸುವಂತೆ ನನ್ನ ಹೆಸರು ನಮೂದಿಸಿ ಜುಲೈ 10ರಂದು ಕಾಲೇಜಿಗೆ ಪತ್ರ ಕಳುಹಿಸಲಾಗಿತ್ತು. ಚಿನ್ನದ ಪದಕ ಪಡೆದವರ ಅಂತಿಮ ಪಟ್ಟಿಯಲ್ಲಿ ನನ್ನ ಹೆಸರಿಲ್ಲ. ಏಕಾಏಕಿ ಕೈಬಿಟ್ಟಿದ್ದು ಏಕೆ' ಎಂದು ಪದವೀಧರೆ ರೋಷಿನಿ ಅವರು ಕುಲಪತಿಗಳನ್ನು ಪ್ರಶ್ನಿಸಿದರು.
ನಿಮಗಿಂತ ಬೇರೊಬ್ಬ ವಿದ್ಯಾರ್ಥಿನೆ ಹೆಚ್ಚು ಅಂಕ ಪಡೆದಿದ್ದು ಗಮನಕ್ಕೆ ಬಂದಿದ್ದರಿಂದ ನಿಮ್ಮ ಹೆಸರು ಅಂತಿಮ ಪಟ್ಟಿಗೆ ಪರಿಗಣಿಸಲಿಲ್ಲ ಎಂದು ಮನವರಿಕೆ ಮಾಡಿದ ಪ್ರೊ. ದಯಾನಂದ ಅಗಸರ ವೇದಿಕೆಗೆ ತೆರಳಿದರು.
ಅವರ ಹಿಂದೆಯೇ ವೇದಿಕೆ ಹತ್ತಲು ಯತ್ನಿಸಿದ ಪದವೀಧರೆಯನ್ನು ಪೊಲೀಸರು ತಡೆದರು. ಈ ವೇಳೆ ಆಕೆಯ ಸಹೋದರ ವಿಕ್ರಂ ಮುದಾಳೆ ಕಿಡಿಕಾರಿ, 'ನನ್ನ ಸಹೋದರಿಗೆ ಸಿಗಬೇಕಿದ್ದ ಚಿನ್ನದ ಪದಕವನ್ನು ಹಣಕ್ಕಾಗಿ ಬೇರೊಬ್ಬರಿಗೆ ಮಾಡಿಕೊಂಡಿದ್ದೀರಿ. ವಿಶ್ವವಿದ್ಯಾಲಯದ ಉನ್ನತ ಹುದ್ದೆಯಲ್ಲಿ ಕುಳಿತು ಹಣದ ವ್ಯವಹಾರ ಮಾಡುತ್ತಿದ್ದೀರಿ' ಎಂದು ಆರೋಪಿಸಿದರು.
ತಕ್ಷಣವೇ ಸ್ಪಷ್ಟನೆ: ರೋಷಿನಿ ಅವರು ಎಂಎ ಇಂಗ್ಲಿಷ್‌ನಲ್ಲಿ ಹೆಚ್ಚು ಅಂಕ ಪಡೆದಿದ್ದರೆಂದು ಫೋಟೊ ಕಳುಹಿಸುವಂತೆ ಪತ್ರದಲ್ಲಿ ಕೋರಲಾಗಿತ್ತು. ಮತ್ತೆ ಪರಿಶೀಲನೆ ನಡೆಸಿದಾಗ ಈ ವಿಷಯದಲ್ಲಿ ಬೇರೊಬ್ಬ ವಿದ್ಯಾರ್ಥಿನಿ ಹೆಚ್ಚು ಅಂಕ ಗಳಿಸಿದ್ದು ಗಮನಕ್ಕೆ ಬಂತು. ಹೀಗಾಗಿ, ರೋಷಿನಿ ಅವರು ಚಿನ್ನದ ಪದಕ ಪಡೆಯಲು ಅರ್ಹರಾಗಿಲ್ಲ ಎಂದು ಮೌಲ್ಯಮಾಪನ ಕುಲಸಚಿವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.