ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕ ಪದವಿ ದ್ವಿತೀಯ ಮತ್ತು ನಾಲ್ಕನೇ (ರಿಪೀಟರ್ಸ್) ಹಾಗೂ ಆರನೇ ಸೆಮಿಸ್ಟರ್(ರೆಗ್ಯೂಲರ್ ಮತ್ತು ರಿಪೀಟರ್ಸ್) ಪರೀಕ್ಷಾ ಕೇಂದ್ರಗಳಿಗೆ ಬಾಹ್ಯ ಹಿರಿಯ ಮೇಲ್ವಿಚಾರಕರ ನೇಮಕಾತಿಯಲ್ಲಿ ನಿಯಮ ಪಾಲನೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಬೀದರ್ ಜಿಲ್ಲೆಗಳ ಪದವಿ ಮಹಾವಿದ್ಯಾಲಯಗಳಲ್ಲಿ ಪರೀಕ್ಷೆ ನಡೆಯುತ್ತಿದೆ. 155 ಪರೀಕ್ಷಾ ಕೇಂದ್ರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಸರ್ಕಾರಿ ಕಾಲೇಜು ಅಧ್ಯಾಪಕರನ್ನು ಪರೀಕ್ಷಾ ಕಾರ್ಯಗಳಿಂದ ದೂರ ಇರಿಸಲಾಗುತ್ತಿದೆ ಎಂಬುದು ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಆರೋಪ.
155 ಪರೀಕ್ಷಾ ಕೇಂದ್ರಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ 21, ಅನುದಾನಿತ ಪದವಿ ಕಾಲೇಜಿನಿಂದ 4 ಹಾಗೂ ಖಾಸಗಿ ಕಾಲೇಜುಗಳಿಗೆ ಅತ್ಯಧಿಕ 130 ಮಂದಿ ಬಾಹ್ಯ ಹಿರಿಯ ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ. ಸರ್ಕಾರಿ ಕಾಲೇಜುಗಳ ಅಧ್ಯಾಪಕರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ದೂರಿದೆ.
ಒಂದೇ ಖಾಸಗಿ ಪದವಿ ಮಹಾವಿದ್ಯಾಲಯದಿಂದ ನಾಲ್ವರು ಅಧ್ಯಾಪಕರನ್ನು ಬಾಹ್ಯ ಮೇಲ್ವಿಚಾರಕರನ್ನಾಗಿ ನೇಮಕ ಮಾಡಲಾಗಿದೆ. 500 ವಿದ್ಯಾರ್ಥಿಗಳಿಗೆ ಒಬ್ಬ ಮೇಲ್ವಿಚಾರಕರನ್ನು ನೇಮಿಸಬೇಕು ಎಂದು ಪರೀಕ್ಷಾ ಕೈಪಿಡಿಯ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಪಾರದರ್ಶಕವಾಗಿ ಪರೀಕ್ಷೆಗಳು ನಡೆಯುತ್ತಿಲ್ಲ. ಸಕಾಲಕ್ಕೆ ಮೌಲ್ಯಮಾಪನವೂ ಜರುಗುತ್ತಿಲ್ಲ. ಬಿಎ ಪ್ರಥಮ ಸೆಮಿಸ್ಟರ್ ಪರೀಕ್ಷೆ ಮುಗಿದು 6 ತಿಂಗಳಾಗಿದೆ ಎಂದು ಸಂಘ ಹೇಳಿದೆ.
ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ 6ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಮಾತ್ರ ಗುಲಬರ್ಗಾ ವಿ.ವಿ ವ್ಯಾಪ್ತಿಗೆ ಬರುತ್ತಾರೆ. ಹೀಗಾಗಿ, ಅಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ 50ರಿಂದ 100 ವಿದ್ಯಾರ್ಥಿಗಳು ಇದ್ದರೂ ಇಬ್ಬರು ಮೇಲ್ವಿಚಾರಕರನ್ನು ನಿಯೋಜಿಸಿ, ಅನಗತ್ಯ ವೆಚ್ಚ ಮಾಡುತ್ತಿದೆ ಎಂದು ಸಂಘ ಆಪಾದಿಸಿದೆ.
ಸೇಡಂ ಪಿಯುಸಿ ಕಾಲೇಜೊಂದರ ಅಧ್ಯಾಪಕರೊಬ್ಬರು ಬೇರೆ ಪದವಿ ಕಾಲೇಜಿನ ಲೆಟರ್ ಹೆಡ್ ಪಡೆದು, ಪದವಿ ಅಧ್ಯಾಪಕರೆಂದು ಸುಳ್ಳು ಮಾಹಿತಿ ನೀಡಿದ್ದಾರೆ. ಅವರನ್ನು ಬಾಹ್ಯ ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಲಾಗಿದೆ. ಸರ್ಕಾರಿ ಅಧ್ಯಾಪಕರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಸಂಘದ ಪದಾಧಿಕಾರಿಗಳು ದೂರಿದ್ದಾರೆ.
ವಿಶ್ವವಿದ್ಯಾಲಯ ಯುಜಿಸಿ ಹಾಗೂ ಪರೀಕ್ಷಾ ಕೈಪಿಡಿ ಮಾರ್ಗದರ್ಶಿಯಲ್ಲಿ ಉಲ್ಲೇಖಿಸಿದ ನಿಯಮಗಳ ಅನುಸಾರ ಪರೀಕ್ಷೆಗಳನ್ನು ನಡೆಸಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ.-ಶರಣಪ್ಪ ಸೈದಾಪೂರ, ಹೈದರಾಬಾದ್ ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ವಿಭಾಗೀಯ ಅಧ್ಯಕ್ಷ
‘ಎಲ್ಲರಿಗೂ ಆದ್ಯತೆ ನೀಡಲಾಗಿದೆ’
‘ಸರ್ಕಾರಿ ಅನುದಾನಿತ ಮತ್ತು ಖಾಸಗಿ ಕಾಲೇಜುಗಳ ಅಧ್ಯಾಪಕರಿಗೆ ಆದ್ಯತೆ ಕೊಡಲಾಗಿದೆ. ಪರೀಕ್ಷೆ ಕೈಪಿಡಿಯ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ಅನರ್ಹರು ನಿಯೋಜನೆಗೊಂಡಿದ್ದು ನನ್ನ ಗಮನಕ್ಕೆ ತಂದರೆ ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು’ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.