ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: ಗ್ರಂಥಾಲಯ ಸದ್ಬಳಕೆಗೆ ವಿದ್ಯಾರ್ಥಿಗಳ ನಿರಾಸಕ್ತಿ

2.70 ಲಕ್ಷ ಪುಸ್ತಕ ಹೊಂದಿರುವ ‘ಜ್ಞಾನಗಂಗಾ’: ಸಂಶೋಧನೆ, ಅಧ್ಯಯನಕ್ಕಾಗಿ ಒಳ್ಳೆಯ ವಾತಾವರಣ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 4:52 IST
Last Updated 28 ಆಗಸ್ಟ್ 2024, 4:52 IST
ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿನ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಓದುತ್ತಿರುವುದು  ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿನ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಓದುತ್ತಿರುವುದು  ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ‘ಜ್ಞಾನಗಂಗಾ’ ಕ್ಯಾಂಪಸ್‌ನಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸುಮಾರು 2.70 ಲಕ್ಷ ಮುದ್ರಿತ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯ ವಿದ್ಯಾರ್ಥಿಗಳನ್ನು ಕೈಬೀಸಿ ಕರೆಯುತ್ತಿದೆ.

800 ಎಕರೆ ಪ್ರದೇಶದಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯ 37 ವಿಭಾಗಗಳನ್ನು ಹೊಂದಿದೆ. ಸುಮಾರು 2 ಸಾವಿರ ವಿದ್ಯಾರ್ಥಿಗಳು, 350 ಸಂಶೋಧನಾ ವಿದ್ಯಾರ್ಥಿಗಳಿದ್ದಾರೆ. ಈ ಮೊದಲು ಗ್ರಂಥಾಲಯಕ್ಕೆ ಪ್ರತಿದಿನ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭೇಟಿ ನೀಡುತ್ತಿದ್ದರು. ಈಗ ಈ ಸಂಖ್ಯೆ 350–400ಕ್ಕೆ ಕುಸಿದಿದೆ.

ಗ್ರಂಥಾಲಯ ನಿತ್ಯ ಬೆಳಿಗ್ಗೆ 9ರಿಂದ ಸಂಜೆ 7 ಗಂಟೆಯವರೆಗೆ ತೆರೆದಿರುತ್ತದೆ. 10 ಸಾವಿರ ಆನ್‌ಲೈನ್‌ ಜರ್ನಲ್ಸ್‌, 5 ಸಾವಿರ ಎಲೆಕ್ಟ್ರಾನಿಕ್‌ ಬುಕ್ಸ್‌ ಹೊಂದಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೆ ಜ್ಞಾನಭಂಡಾರವೇ ಇಲ್ಲಿದೆ. ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ಒಳ್ಳೆಯ ವಾತಾವರಣ ಕಲ್ಪಿಸಲಾಗಿದೆ. ಓದಿಗೆ ಅನಕೂಲವಾಗಲಿ ಎಂದು ಸಾಹಿತ್ಯ, ರಾಜಕೀಯ, ಸಮಾಜ ವಿಜ್ಞಾನ, ಸಂಶೋಧನೆ ಸೇರಿ ಎಲ್ಲ ವಿಷಯಗಳ ಪುಸ್ತಕಗಳು ಪ್ರತ್ಯೇಕವಾಗಿ ಇರಿಸಲಾಗಿದೆ. ಎಸ್‌ಸಿ/ಎಸ್‌ಟಿ ಬುಕ್‌ಬ್ಯಾಂಕ್ ಸಹ ಇದೆ. ನೂತನವಾಗಿ ಪ್ರಕಟಿತವಾದ ಪುಸ್ತಕಗಳು, ಶೈಕ್ಷಣಿಕ ಜರ್ನಲ್‌ಗಳು, ಸಂಶೋಧನಾ ಪ್ರಬಂಧಗಳು ಸಿಗುತ್ತವೆ.

ADVERTISEMENT

ಐಎಎಸ್, ಕೆಎಎಸ್, ನೆಟ್, ಸೆಟ್ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಕೈಪಿಡಿಗಳ ಜೊತೆಗೆ ನಿಯಮಿತವಾಗಿ ಮಾಸಪತ್ರಿಕೆಗಳು ಕೂಡ ಬರುತ್ತವೆ. ಪ್ರತಿದಿನ ಕನ್ನಡ ಮತ್ತು ಇಂಗ್ಲಿಷ್ ಸೇರಿ 10ರಿಂದ 12 ದಿನಪತ್ರಿಕೆಗಳು ಬರುತ್ತವೆ.

ಡಿಜಿಟಲ್ ಗ್ರಂಥಾಲಯ: ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ಗುವಿವಿ ಗ್ರಂಥಾಲಯ ಡಿಜಿಟಲ್‌ ಮಾಧ್ಯಮಕ್ಕೂ ಒತ್ತು ನೀಡಿದೆ. ಇದಕ್ಕಾಗಿ ಉನ್ನತಮಟ್ಟದ ಕಂಪ್ಯೂಟರ್‌ಗಳು ಮತ್ತು ಇಂಟರ್ನೆಟ್ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್‌ಗಳು ಮತ್ತು ಸಂಶೋಧನೆಗಾಗಿ ಇಂಟರ್ನೆಟ್ ಅನ್ನು ಉಪಯೋಗಿಸಬಹುದು. ಅದರ ಜೊತೆಗೆ ಡೇಟಾಬೇಸ್‌ಗಳು, ಇ–ಬುಕ್ಸ್‌ ಮತ್ತು ಇ–ಜರ್ನಲ್ಸ್‌ ಸೌಲಭ್ಯವಿದೆ. ವಿದ್ಯಾರ್ಥಿಗಳು ಡಿಜಿಟಲ್ ಸಂಪನ್ಮೂಲಗಳನ್ನು ಬಳಸಿ ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬಹುದು. ಗ್ರಂಥಾಲಯಕ್ಕೆ ಮತ್ತೆ 100 ಕಂಪ್ಯೂಟರ್‌ಗಳು ಬಂದಿವೆ. ಟ್ಯಾಬ್‌ಗಳಿವೆ. ವಿದ್ಯಾರ್ಥಿಗಳು ಪುಸ್ತಕಗಳ ಜೊತೆಗೆ ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗ್ರಂಥಪಾಲಕ ಪ್ರೊ.ಸುರೇಶ ಜಂಗೆ ಹೇಳುತ್ತಾರೆ.

‘ವಿವಿಯ ವಿದ್ಯಾರ್ಥಿಗಳಿಗೆ ನೋಂದಣಿ ಮಾಡಿ ಐಡಿ ಕಾರ್ಡ್ ನೀಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಸಲುವಾಗಿ ಹೊರಗಿನ ವಿದ್ಯಾರ್ಥಿಗಳು ಕೂಡ ಬರುತ್ತಾರೆ. ಅವರಿಗೆ ತಿಂಗಳಿಗೆ ₹100 ಶುಲ್ಕವಿರುತ್ತದೆ. ಆದರೆ, ಅವರು ಗ್ರಂಥಾಲಯದಲ್ಲೇ ಪುಸ್ತಕಗಳನ್ನು ಓದಬಹುದು. ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲ’ ಎಂದರು.

ಸೈಕ್ಲೋಪಿಡಿಯಾ, ಜ್ಞಾನಪೀಠ ಪಡೆದ ಸಾಹಿತಿಗಳ ಪುಸ್ತಕಗಳನ್ನು ಪ್ರತ್ಯೇಕವಾಗಿ ಇಡಲಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಪೀಠ, ನಿಜಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ, ಕನಕದಾಸರ ಅಧ್ಯಯನ ಪೀಠ, ಶಿವಶರಣೆ ಹೇಮರಡ್ಡಿ ಮಲ್ಮಮ್ಮ ಅಧ್ಯಯನ ಪೀಠ ಸೇರಿ 11 ಅಧ್ಯಯನ ಸಂಶೋಧನಾ ಪೀಠಗಳು ಮತ್ತು ಆ ಎಲ್ಲ ಪೀಠಗಳ ಶರಣರ, ದಾಸರ, ಮಹಾನ್‌ ವ್ಯಕ್ತಿಗಳ ಪುಸ್ತಕಗಳು ಇವೆ. ಕನ್ನಡ ವಿಭಾದಲ್ಲಿರುವ ಹಸ್ತಪ್ರತಿಗಳು ಡಿಜಿಟಲ್‌ ರೂಪದಲ್ಲಿ ಸಿಗುತ್ತವೆ.

ಗ್ರಂಥಾಲಯದ ಹೊರಗಡೆ ಹಸಿರು ಪರಿಸರದ ಮಧ್ಯೆ ವಿದ್ಯಾರ್ಥಿಗಳು ಓದಲಿ ಎಂಬ ಉದ್ದೇಶದಿಂದ ‘ಬಯಲು ಹಸಿರು ಗ್ರಂಥಾಲಯ’ ಆರಂಭಿಸಲಾಗಿದೆ. ಕಟ್ಟೆಆಸಗಳಲ್ಲಿ ಕುಳಿತು ಚರ್ಚೆ ಮಾಡಬಹುದು.

ಅತ್ಯುನ್ನತ ಪ್ರಶಸ್ತಿ: ಗುಲಬರ್ಗಾ ವಿವಿ ಗ್ರಂಥಾಲಯಕ್ಕೆ 2014ರಲ್ಲಿ ಅತ್ಯುನ್ನತ ಪ್ರಶಸ್ತಿಯಾದ ಭಾರತೀಯ ಗ್ರಂಥಾಲಯ ಸಂಘ (ಐಎಲ್ಎ)ದಿಂದ ‘ದಿ ಬೆಸ್ಟ್ ಯುನಿವರ್ಸಿಟಿ ಲೈಬ್ರರಿ’ ಪ್ರಶಸ್ತಿ ಸಂದಿದೆ. 2023ರಲ್ಲಿ ಭಾರತದಲ್ಲಿ ‘ಫ್ಯಾನ್ ಇಂಡಿಯಾ’ ಎಂಬ ಏಳು ವಿಶ್ವವಿದ್ಯಾಲಯಗಳ ಆಯ್ಕೆಪ‌ಟ್ಟಿಯಲ್ಲಿ ಗುಲಬರ್ಗಾ ವಿವಿಗೂ ಕೂಡ ಸ್ಥಾನ ಲಭಿಸಿ ಅವಾರ್ಡ್‌ ಸಂದಿದೆ.

ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥಾಲಯದ ಎದುರು ನಿರ್ಮಿಸಿರುವ ‘ಹಸಿರು ಬಯಲು ಗ್ರಂಥಾಲಯ’ದಲ್ಲಿ ವಿದ್ಯಾರ್ಥಿಗಳು ಓದುತ್ತಿರುವುದು  ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಗ್ರಂಥಾಲಯಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಅಸೈನ್‌ಮೆಂಟ್‌ ನೀಡುವ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಗ್ರಂಥಾಲಯ ಸದ್ಬಳಕೆ ಮಾಡಿಕೊಳ್ಳಲು ಸೂಚಿಸಬೇಕು
ಪ್ರೊ.ಸುರೇಶ ಜಂಗೆ ಗ್ರಂಥಪಾಲಕ ಗುಲಬರ್ಗಾ ವಿಶ್ವವಿದ್ಯಾಲಯ
ಪುಸ್ತಕಗಳನ್ನು ಕೊಳ್ಳಲು ಆಗದ ಬಡ ವಿದ್ಯಾರ್ಥಿಗಳಿಗೆ ವಿವಿ ಗ್ರಂಥಾಲಯ ತುಂಬಾ ಅನುಕೂಲವಾಗಿದೆ. ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಉತ್ತಮ ವಾತಾವರಣವಿದೆ
ನಾಗೇಶ ಕುಂಬಾರ ಅರ್ಥಶಾಸ್ತ್ರ ವಿದ್ಯಾರ್ಥಿ ಗುವಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.