ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: ಪರೀಕ್ಷೆ ಬರೆದರೂ ಅಂಕಪಟ್ಟಿಯಲ್ಲಿ ಗೈರು!

ಶಿಷ್ಯವೇತನ ಪಡೆಯುವ ಅರ್ಹತೆ ಕಳೆದುಕೊಂಡ ವಿದ್ಯಾರ್ಥಿಗಳು: ತಮ್ಮದಲ್ಲದ ತಪ್ಪಿಗೆ ಪೂರಕ ಪರೀಕ್ಷೆ ಬರೆಯಬೇಕಾದ ಸ್ಥಿತಿ

ಭೀಮಣ್ಣ ಬಾಲಯ್ಯ
Published 5 ಅಕ್ಟೋಬರ್ 2024, 6:23 IST
Last Updated 5 ಅಕ್ಟೋಬರ್ 2024, 6:23 IST
ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ ವಿಶ್ವವಿದ್ಯಾಲಯ   

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜೊಂದರ ಯಡವಟ್ಟಿನಿಂದಾಗಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲೂ ಕೆಲ ವಿಷಯಗಳ ಮುಂದೆ ಗೈರು ಎಂದು ನಮೂದಾಗಿದೆ. ಇದರಿಂದಾಗಿ ಜಿಲ್ಲೆಯ ಆಳಂದ ತಾಲ್ಲೂಕಿನ 100 ಪದವಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಆಳಂದ ತಾಲ್ಲೂಕಿನ ನಿಂಬರ್ಗಾ ಗ್ರಾಮದ ದೇವನಾಂಪ್ರಿಯ ಪದವಿ ಕಾಲೇಜು, ಲಾಡ್ ಚಿಂಚೋಳಿಯ ಸಿದ್ದೇಶ್ವರ ಕಾಲೇಜು ಹಾಗೂ ಕಡಗಂಚಿಯ ಸಾಯಿ ಪ್ರತಾಪ ಪದವಿ ಕಾಲೇಜಿನ ಬಿ.ಕಾಂ ಮತ್ತು ಬಿ.ಎ ವಿದ್ಯಾರ್ಥಿಗಳು 2022ರ ನವೆಂಬರ್‌ನಲ್ಲಿ ಕಡಗಂಚಿಯ ಸಾಯಿ ಪ್ರತಾಪ ಪದವಿ ಕಾಲೇಜಿನಲ್ಲಿ ಎರಡನೇ ಸೆಮಿಸ್ಟರ್ ಪರೀಕ್ಷೆ ಬರೆದಿದ್ದರು. 

ಪರೀಕ್ಷೆ ಬರೆದು ಚಾತಕ ಪಕ್ಷಿಯಂತೆ ಫಲಿತಾಂಶಕ್ಕಾಗಿ ಒಂದೂವರೆ ವರ್ಷ ಕಾದಿದ್ದ ವಿದ್ಯಾರ್ಥಿಗಳಿಗೆ ಫಲಿತಾಂಶ ನೋಡಿ ಬರ ಸಿಡಿಲು ಬಡಿದಂತಾಗಿತ್ತು. ಕೊನೆ ಕ್ಷಣದಲ್ಲಿ ಪರೀಕ್ಷಾ ಕೇಂದ್ರ ಬದಲಿಸಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. 

ADVERTISEMENT

ಈ ವಿದ್ಯಾರ್ಥಿಗಳಿಗೆ ಮೊದಲು ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್)ಯ ಮಾನ್ಯತೆ ಪಡೆದಿರುವ ವೆಂಕಯ್ಯ ಕುಸಯ್ಯ ಗುತ್ತೇದಾರ ಕಾಲೇಜಿನ ಪರೀಕ್ಷಾ ಕೇಂದ್ರವನ್ನು ನೀಡಲಾಗಿತ್ತು. ಕೊನೆ ಕ್ಷಣದಲ್ಲಿ ಯುಯುಸಿಎಂಎಸ್‌ನಿಂದ ಮಾನ್ಯತೆ ಪಡೆಯದ ಕಡಗಂಚಿಯ ಸಾಯಿ ಪ್ರತಾಪ ಪದವಿ ಕಾಲೇಜಿನಲ್ಲಿ ಪರೀಕ್ಷೆ ಬರೆಯಿಸಲಾಗಿದೆ. ಈ ಕಾಲೇಜಿಗೆ ಪರೀಕ್ಷೆಗೆ ಹಾಜರಾದವರ ವಿವರ ಯುಯುಸಿಎಂಎಸ್‌ನಲ್ಲಿ ಸಲ್ಲಿಸಲು ಅವಕಾಶ ಇಲ್ಲ.

ಇದು ಕಾಲೇಜಿನವರು ಮಾಡಿದ ತಪ್ಪಾಗಿದ್ದು ಅವರನ್ನು ಕರೆಯಿಸಿಕೊಂಡು ಸರಿಪಡಿಸಲಾಗುವುದು. ವಿದ್ಯಾರ್ಥಿಗಳ ಹಿತವನ್ನು ಕಾಯುವ ಕೆಲಸ ಮಾಡಲಾಗುವುದು.
ಮೇಧಾವಿನಿ ಕಟ್ಟಿ, ಕುಲಸಚಿವೆ, ಗುವಿವಿ

‌ವೆಂಕಯ್ಯ ಕುಸಯ್ಯ ಗುತ್ತೇದಾರ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದವರ ವಿವರಗಳನ್ನು ಮಾತ್ರ ಯುಯುಸಿಎಂಎಸ್‌ನಲ್ಲಿ ಸಲ್ಲಿಸಲಾಗಿದೆ. ಆದ್ದರಿಂದ ಈ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ‘ಗೈರು’ ಎಂದು ನಮೂದಿಸಲಾಗಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸುತ್ತಾರೆ.

ತಮ್ಮದಲ್ಲದ ತಪ್ಪಿಗಾಗಿ ವಿಶ್ವವಿದ್ಯಾಲಯಕ್ಕೆ ಎಡತಾಕುತ್ತಿರುವ ವಿದ್ಯಾರ್ಥಿಗಳು, ‘ಪೂರಕ ಪರೀಕ್ಷೆ ಬರೆಯಿರಿ’ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳ ನೀಡುತ್ತಿರುವ ಉತ್ತರದಿಂದ ಕಂಗಾಲಾಗಿದ್ದಾರೆ. ಶಿಷ್ಯವೇತನ ಪಡೆಯುವ ಅರ್ಹತೆಯನ್ನೂ ಕಳೆದುಕೊಂಡಿದ್ದಾರೆ. ಭವಿಷ್ಯದ ಶೈಕ್ಷಣಿಕ ಬದುಕಿನ ದಾರಿಯಲ್ಲಿ ಕತ್ತಲೆ ಕವಿಯುವ ಆತಂಕ ಎದುರಿಸುತ್ತಿದ್ದಾರೆ.

‘ವಿಶ್ವವಿದ್ಯಾಲಯದವರು ಪೂರಕ ಪರೀಕ್ಷೆ ಬರೆಯಿರಿ ಎಂದು ಹೇಳುತ್ತಾರೆ. ನಮ್ಮದಲ್ಲದ ತಪ್ಪಿಗೆ ಮತ್ತೆ ಶುಲ್ಕ ಕಟ್ಟಿ ಪರೀಕ್ಷೆ ಬರೆಯಬೇಕು. ಮತ್ತೆ ಹಳೆ ವಿಷಯಗಳನ್ನು ಓದಬೇಕು. ಅಲ್ಲದೆ, ಅಂಕಪಟ್ಟಿಯಲ್ಲಿ ರಿಪೀಟರ್ ಎಂದು ನಮೂದಿಸಲಾಗುತ್ತದೆ. ಇದರಿಂದ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೈಜ್ ಮನಿ ಬರುವುದಿಲ್ಲ’ ಎಂದು ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.