ಕಲಬುರಗಿ: ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕದಲ್ಲಿ 50 ಸ್ಥಾನಗಳನ್ನು ಪಡೆದಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಮ್ಮ ಪಕ್ಷವನ್ನು ನಾಶಗೊಳಿಸಲು ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿದ್ದು, ಈಗ ಕಾಂಗ್ರೆಸ್ ನಲ್ಲಿರುವ ಮಹಾನುಭಾವರೊಬ್ಬರು ಜೆಡಿಎಸ್ ಮುಂಬರುವ ಚುನಾವಣೆ ವೇಳೆ ನಾಮಾವಶೇಷವಾಗಲಿದೆ ಎಂದು ಹೇಳಿದ್ದಾರೆ. ಬಿಜೆಪಿ ಕೂಡಾ ಜೆಡಿಎಸ್ ಮುಗಿಸಲು ಪಣತೊಟ್ಟಿದೆ. ನಮ್ಮ ಶಕ್ತಿ ಕಡಿಮೆಯಾಗಿದ್ದರೂ ಮಂಗಳೂರು, ಉಡುಪಿಯಂತಹ ಜಿಲ್ಲೆಗಳಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಲಬುರಗಿಯಲ್ಲಿ ಹೆಚ್ಚು ಶಾಸಕರು ಆಯ್ಕೆಯಾಗಿ ಸರ್ಕಾರದಲ್ಲಿ ಸಚಿವರಾಗಿದ್ದರು. ಈಗಲೂ ಮುಂಬರುವ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಗಮನ ಕೇಂದ್ರೀಕರಿಸಿದ್ದೇವೆ ಎಂದರು.
ತಿಂಗಳಲ್ಲಿ ಎರಡು ಬಾರಿ ಪ್ರವಾಸ ಮಾಡಲಿದ್ದೇನೆ. ಎಚ್.ಡಿ.ಕುಮಾರಸ್ವಾಮಿ ಅವರೂ ತಂಡ ಕಟ್ಟಿಕೊಂಡು ಪ್ರವಾಸ ಮಾಡಿ ಪಕ್ಷ ಸಂಘಟಿಸಲಿದ್ದಾರೆ ಎಂದರು.
ಮೋದಿ ಬಿಟ್ಟರೆ ಬಿಜೆಪಿಗೆ ಅಸ್ತಿತ್ವವಿಲ್ಲ: ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಬಿಟ್ಟರೆ ಬೇರೆ ಅಸ್ತಿತ್ವವೇ ಇಲ್ಲ. ಏನು ಕೇಳಿದರೂ ಮೋದಿ ಎನ್ನುತ್ತಾರೆ ಎಂದು ದೇವೇಗೌಡ ಟೀಕಿಸಿದರು.
ಕಾಂಗ್ರೆಸ್ ಶಕ್ತಿಯೂ ರಾಷ್ಟ್ರಮಟ್ಟದಲ್ಲಿ ಕುಂದಿದೆ. ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಮಾತ್ರ ಸ್ಥಿರ ಸರ್ಕಾರವಿದೆ. ಪಂಜಾಬ್ ಕಾಂಗ್ರೆಸ್ ಸರ್ಕಾರ ಅಸ್ಥಿರತೆ ಎದುರಿಸುತ್ತಿದೆ ಎಂದರು.
ತೃತೀಯ ರಂಗವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ನನ್ನ ಕೈಲಾದ ಸಹಾಯ ಮಾಡುತ್ತೇನೆ. ಆದರೂ ಕಷ್ಟವಿದೆ. ಇದ್ದುದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಲವು ರಾಜ್ಯಗಳನ್ನು ಸಂಚರಿಸುತ್ತಿದ್ದಾರೆ. ಅವರೊಬ್ಬ ದಿಟ್ಟ ನಾಯಕಿ ಎಂದು ಶ್ಲಾಘಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಂಡೆಪ್ಪ ಕಾಶೆಂಪೂರ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್, ಮುಖಂಡರಾದ ಬಾಲರಾಜ ಗುತ್ತೇದಾರ, ಶಿವಕುಮಾರ್ ನಾಟೀಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.