ಕಲಬುರಗಿ: ನಗರದಾದ್ಯಂತ ದವನದ ಹುಣ್ಣಿಮೆ ದಿನವಾದ ಮಂಗಳವಾರ ಪವಮಾನ ಸುತದಾಮನಾದ ಆಂಜನೇಯನ ಜಯಂತಿಯನ್ನು ಸಂಭ್ರಮ–ಸಡಗರ, ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.
ನಗರದ ಹನುಮಾನ ತಾಂಡಾದ ಕೋರಂಟಿ ಹನುಮಾನ ದೇವಾಲಯ, ಕರುಣೇಶ್ವರ ನಗರದ ಜೈ ವೀರ ಹನುಮಾನ ದೇವಸ್ಥಾನ, ಗೋದುತಾಯಿ ನಗರದ ಆಂಜನೇಯ ದೇಗುಲ, ಹಳೆ ಜೇವರ್ಗಿ ರಸ್ತೆಯ ಮುದ್ದಿ ಹನುಮಾನ ದೇವಾಲಯ, ಮಾರ್ಕೆಟ್ ಸಮೀಪದ ಆಂಜನೇಯ ದೇವಸ್ಥಾನ, ಗಂಗಾನಗರದ ಹನುಮಾನ ದೇವಾಲಯ, ಜೇವರ್ಗಿ ರಸ್ತೆಯ ರಾಮಮಂದಿರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ಕೈಂಕರ್ಯಗಳು ಜರುಗಿದವು.
ಜಯಂತಿ ಪ್ರಯುಕ್ತ ಎಲ್ಲ ದೇಗುಲಗಳಲ್ಲೂ ಆಂಜನೇಯನಿಗೆ ಪೂಜೆ, ಕೀರ್ತನೆ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಎಲೆಪೂಜೆ, ಪವಮಾನ ಹೋಮ, ಹನುಮಾನ ಚಾಲೀಸಾ ಪಠಣ, ಸತ್ಯನಾರಾಯಣ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು.
ಹಲವಾರು ದೇವಸ್ಥಾನಗಳ ಆವರಣದಲ್ಲಿ ಹೆಣ್ಣುಮಕ್ಕಳು ತೊಟ್ಟಿಲು ಕಟ್ಟಿ, ಅದರಲ್ಲಿ ಬಾಲ ಹನುಮನ ಮೂರ್ತಿ ಇಟ್ಟು ಜೋಗುಳ ಹಾಡಿ, ತೊಟ್ಟಿಲು ತೂಗಿ ಸಂಭ್ರಮಿಸುತ್ತಿರುವುದು ಕಂಡುಬಂತು.
ಕರುಣೇಶ್ವರ ನಗರದ ಬೃಂದಾವನ ಕಾಲೊನಿಯ ಹನುಮಾನ ದೇವಸ್ಥಾನದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮನೋಹರ ಪೊದ್ದಾರ, ರಘುವೀರ ಕುಲಕರ್ಣಿ, ಈರಣ್ಣ ಮಾಲಿಪಾಟೀಲ, ಚನ್ನಪ್ಪ ಸುರಪುರಕರ್, ಬಸವರಾಜ
ದೇವತ್ಕಲ್, ದೇವತ್ಕಲ್, ಶಾಂತಪ್ಪ ಮೂಳಿ, ರಾಜಶೇಖರ ಹವಾಲ್ದಾರ, ಶಿವಾಜಿ ಪಾಟೀಲ್, ಸಿದ್ದಣ್ಣ ಹೂಗಾರ, ಮೌನೇಶ ನಿಂಬಾಳ, ಶಾಂತಪ್ಪ ಹೂಗಾರ, ಗಂಗಾಧರ ಸುತಾರ, ಶಿವಾನಂದ ಸುತಾರ ಇತರರು ಉಪಸ್ಥಿತರಿದ್ದರು.
ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ಹನುಮಾನ ಜಯಂತಿಯನ್ನು ವೈಭವದಿಂದ ಆಚರಿಸಲಾಯಿತು. ಬೆಳಿಗ್ಗೆ ಸೂರ್ಯೋದಯ ಕಾಲಕ್ಕೆ ಹನುಮಂತ ದೇವರ ಜನ್ಮೋತ್ಸವ ತೊಟ್ಟಿಲ ಸೇವೆ ನೆರವೇರಿತು. ನಂತರ ಮಹಿಳಾ ಭಜನಾ ಮಂಡಳಿಗಳ ಸದಸ್ಯರಿಂದ ಭಜನೆಯೊಂದಿಗೆ ಪಲ್ಲಕ್ಕಿ ಉತ್ಸವ ನೆರವೇರಿತು.
ವೆಂಕಣ್ಣಾಚಾರ್ಯ ಮಳಖೇಡ ಅವರಿಂದ ಸುಂದರಕಾಂಡ ಪ್ರವಚನ, ನಂತರ ನೈವೇದ್ಯ, ಮಹಾಮಂಗಳಾರತಿ ನೆರವೇರಿತು. ಹಿಂಗುಲಾಂಬಿಕಾ ಆಯುರ್ವೇದ ಕಾಲೇಜಿನಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ವೇಳೆ ಡಿ.ವಿ. ಕುಲಕರ್ಣಿ, ಶಾಮರಾವ ಕುಲಕರ್ಣಿ, ಗೋಪಾರಾವ, ಮೋತಿರಾಮ್ ಪವಾರ್, ಭೀಮಾಚಾರ್ಯ ಜೋಶಿ, ಗುರುರಾಜ್ ಕುಲಕರ್ಣಿ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿದ್ದರು.
ಪಲ್ಲಕ್ಕಿ ಮೆರವಣಿಗೆ: ನಗರದ ದೇಗುಲಗಳಲ್ಲಿ ಬೆಳಿಗ್ಗೆ ಪಲ್ಲಕ್ಕಿ ಸೇವೆ ನಡೆಸಲಾಯಿತು. ಈ ವೇಳೆ ಹನುಮಾನ ಮಹಾರಾಜ ಕೀ ಜೈ, ಪವನ ಪುತ್ರ ಕೀ ಜೈ, ಹನುಮಾನ ಕೀ ಜೈ ಎಂಬ ಘೋಷಣೆಗಳು ಮೊಳಗಿದವು.
ಅನ್ನಪ್ರಸಾದ: ಗೋದುತಾಯಿ ನಗರ, ಕೋರಂಟಿ ಹನುಮಾನ ದೇಗುಲ, ರಾಮಮಂದಿರ, ಕರುಣೇಶ್ವರ ನಗರದ ಹನುಮ ದೇವಾಲಯ ಸೇರಿ ವಿವಿಧೆಡೆ ಭಕ್ತರಿಗೆ ಶಿರಾ, ಗೋಧಿ ಪಾಯಸ, ಅನ್ನ, ಸಾಂಬಾರ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿದರು.
ಕೋರಂಟಿಯಲ್ಲಿ ಹಬ್ಬದ ಸಂಭ್ರಮ
ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಕೋರಂಟಿ ಹನುಮಾನ ದೇಗುಲದಲ್ಲಿ ಇಡೀ ದಿನ ಜಾತ್ರೆಯ ಸಂಭ್ರಮ ನಿರ್ಮಾಣವಾಗಿತ್ತು. ಬೆಳಿಗ್ಗೆ ಪವಮಾನ ಹೋಮ ಪಲ್ಲಕ್ಕಿ ಉತ್ಸವ ಮಹಾಮಂಗಳಾರತಿ ಸೇರಿ ವಿವಿಧ ಪೂಜಾ ಕಾರ್ಯಕ್ರಮ ನಡೆದವು. ಕೋರಂಟಿ ಹನುಮಾನ ದೇಗುಲಕ್ಕೆ ನಗರ ಸೇರಿ ವಿವಿಧ ಸ್ಥಳಗಳಿಂದ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಬಿಸಿಲನ್ನೂ ಲೆಕ್ಕಿಸದೇ ಎಲ್ಲ ಕಾಲೇಜಿನ ವಿದ್ಯಾರ್ಥಿಗಳು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದು ಆಂಜನೇಯ ಮೂರ್ತಿಯ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಸಂಜೆ 6.30 ಗಂಟೆಗೆ ಸಾವಿರಾರು ಜನರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು.
ಹನುಮಾನ ಜಯಂತಿ:
ರಥೋತ್ಸವ ಕಲಬುರಗಿ: ಇಲ್ಲಿನ ಗಂಗಾನಗರದ ಹನುಮಾನ ಮಂದಿರದಲ್ಲಿ ಜಯಂತ್ಯುತ್ಸವ ಸಮಿತಿ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ಧಾರ ಸಮಿತಿ ಸಹಯೋಗದಲ್ಲಿ ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಂಜೆ ನಂದಿಕೋಲು ಮೆರವಣಿಗೆ ಪುರವಂತರ ಕುಣಿತ ಭಜನಾ ಮಂಡಳಿಗಳ ಸಂಗೀತ ಸೇವೆಯೊಂದಿಗೆ ಸಂಜೆ 6.38ಕ್ಕೆ ವಿವಿಧ ಮಠಾಧೀಶರು ಹಾಗೂ ಸಾವಿರಾರು ಜನರ ಸಮ್ಮುಖದಲ್ಲಿ ರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಚಿನ್ಮಯಗಿರಿ ಮಠದ ವೀರ ಮಹಾಂತ ಶಿವಾಚಾರ್ಯರು ತೊನಸನಳ್ಳಿಯ ಕೊತಲಪ್ಪ ಮುತ್ಯಾ ಸಂಘಟನೆ ಅಧ್ಯಕ್ಷ ಉಮೇಶ ಹದಗಲ್ ರಮೇಶ ಬಿದನೂರು ಬಾಬಾಸಾಹೇಬ್ ಕೂಡಿ ಬಸವರಾಜ್ ಬಳೂರಗಿ ಸೇರಿ ಹಲವರು ಉಪಸ್ಥಿತರಿದ್ದರು.
ಹನುಮ ಭಾವಚಿತ್ರ ಅದ್ದೂರಿ ಮೆರವಣಿಗೆ
ಕಲಬುರಗಿ: ಹನುಮ ಜಯಂತಿ ಅಂಗವಾಗಿ ಕೇಸರಿ ನಂದನ್ ಯುವ ಬ್ರಿಗೇಡ್ ಸಂಘಟನೆ ವತಿಯಿಂದ ನಗರದ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಹನುಮ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಸಲಾಯಿತು. ಜಿಲ್ಲೆಯ ವಿವಿಧ ಮಠಾಧೀಶರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಕೇಸರಿ ಧ್ವಜ ಹಿಡಿದು ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಲಕ್ಷ್ಮಿಕಾಂತ ಸ್ವಾದಿ ಆನಂದ ಚವ್ಹಾಣ ಶಶಿಕಾಂತ ದಿಕ್ಷಿತ ವಿಕಾಸ ಚವ್ಹಾಣ ಶ್ವೇತಾಸಿಂಗ್ ದಯಾನಂದ ಯಂಕಂಚಿ ವಿಕ್ಕಿ ಚವ್ಹಾಣ ರಾಜು ಕಮಲಾಪುರೆ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.