ADVERTISEMENT

ಹನುಮ ಜಯಂತಿ: ಕೋರಂಟಿ ಹನುಮಾನ್, ರೋಕಡಾ ಆಂಜನೇಯ, ಗಂಟೆ ಹನುಮನಿಗೆ ತೊಟ್ಟಿಲು ಸೇವೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 6:47 IST
Last Updated 16 ಏಪ್ರಿಲ್ 2022, 6:47 IST
ಕಲಬುರಗಿಯ ಸ್ಮಶಾನ ಹನುಮಾನ್ (ಚಂದನಕೇರಿ) ದೇವಸ್ಥಾನದಲ್ಲಿ ಶನಿವಾರ ಆಂಜನೇಯನ ದರ್ಶನ ಪಡೆದ ಭಕ್ತರು
ಕಲಬುರಗಿಯ ಸ್ಮಶಾನ ಹನುಮಾನ್ (ಚಂದನಕೇರಿ) ದೇವಸ್ಥಾನದಲ್ಲಿ ಶನಿವಾರ ಆಂಜನೇಯನ ದರ್ಶನ ಪಡೆದ ಭಕ್ತರು   

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲ ಆಂಜನೇಯ ದೇವಸ್ಥಾನಗಳಲ್ಲಿ ಶನಿವಾರ ಹನುಮಾನ್ ಜಯಂತಿ ಸಂಭ್ರಮ ಮನೆಮಾಡಿತು.

ಪ್ರತಿ ಬಾರಿ ದವನದ ಹುಣ್ಣಿಮೆಯಂದು ಹನುಮ ಜಯಂತಿ ಆಚರಿಸಲಾಗುತ್ತದೆ. ಆದರೆ, ಆಂಜನೇಯನ ವರದಾನದ ದಿನವೇ ಆದ ಶನಿವಾರ ಜಯಂತಿ ಕೂಡಿಬಂದಿರುವುದು ವಿಶೇಷ. ಇದರಿಂದ ನಸುಕಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರಾಮಧೂತನ ದರ್ಶನ ಪಡೆಯಲು ಬಂದರು.

ದೇವಸ್ಥಾನಗಳಲ್ಲಿ ನಸುಕಿನ 4.45ರಿಂದಲೇ ರುದ್ರಾಭಿಷೇಕ, ಪೂಜೆ, ಆರತಿ, ಅಲಂಕಾರ ಕಾರ್ಯಕ್ರಮಗಳು ಆರಂಭವಾದವು. ಮತ್ತೆ ಕೆಲವು ಕಡೆ ಹನುಮಾನ್ ಚಾಲೀಸ್, ರಾಮನಾಮ ಜಪ, ಭಜನೆಗಳೂ ಆರಂಭವಾದವು.

ADVERTISEMENT

ಬಹುಪಾಲು ದೇವಸ್ಥಾನಗಳ ಆವರಣದಲ್ಲಿ ಹೆಣ್ಣುಮಕ್ಕಳು ತೊಟ್ಟಿಲು ಕಟ್ಟಿ, ಅದರಲ್ಲಿ ಮೂರ್ತಿ ಇಟ್ಟು ಬಾಲಹನುಮನಿಗೆ ಜೋಗುಳ ಹಾಡಿದರು.

ಇಲ್ಲಿನ ಸಂತ್ರಾಸವಾಡಿಯಲ್ಲಿರುವ ಪುರಾತನವಾದ ಚಂದನಕೇರಿಯ ವಾಯುಪುತ್ರನ ದೇವಸ್ಥಾನದಲ್ಲಿ ಹಲವು ಭಕ್ತರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡರು.

ಶಕ್ತಿನಗರದ ಶಕ್ತಿಆಂಜನೇಯ ಮಂದಿರ, ಶಾಂತಿನಗರದ ರಾಮಾಂಜನೇಯ ಮಂದಿರ, ಶಹಾಬಜಾರಿನ ಲಾಲ್ ಹನುಮಾನ್ (ಕೆಂಪು ಆಂಜನೇಯ), ಪ್ರಶಾಂತನಗರ, ಗೋದುತಾಯಿ ನಗರದ ದೇವಸ್ಥಾನಗಳಲ್ಲೂ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ರೋಕಡಾ ಹನುಮಾನ: ವಿಶಿಷ್ಟ ಹೆಸರಿನಿಂದ ಕರೆಯುವ ಇಲ್ಲಿನ ಬ್ರಹ್ಮಪುರದ "ರೋಕಡಾ ಹವಾಮಾನ" ದೇವಸ್ಥಾನದಲ್ಲಿ ವಧು- ವರರು, ನವದಂಪತಿಗಳು ಹೆಚ್ಚಾಗಿ ಕಂಡುಬಂದರು. ದಕ್ಷಿಣೆ ಹಾಕಿ ಬೇಡಿಕೊಂಡರೆ ತಕ್ಷಣ ವರ ನೀಡುತ್ತಾನೆ ಎಂಬ ಪ್ರತೀತಿಯ ಕಾರಣ ಈ ದೇವರಿಗೆ "ರೋಕಡಾ" ಎಂಬ ಅಂಕಿತ ಸೇರಿಕೊಂಡಿದೆ.

ಗಂಟೆ ಹಣಮಂತ: ನಗರದ ಎಂ.ಎಸ್.ಕೆ. ಮಿಲ್ ಪ್ರದೇಶದಲ್ಲಿರುವ ಹಣಮಂತ ಐತಿಹಾಸಿಕ ಮಹತ್ವ ಪಡೆದಿದ್ದಾನೆ. ವ್ಯಾಸರಾಜತೀರ್ಥರು ಪ್ರತಿಷ್ಠಾಪಿಸಿದ ಮೂರ್ತಿ ಇಲ್ಲಿದೆ. ಇಲ್ಲಿನ ಹಣಮಂತನ ಬಾಲಕ್ಕೆ ಗಂಟೆ ಕಟ್ಟಲಾಗಿದೆ. ಹೀಗಾಗಿ ಗಂಟೆ ಹಣಮಂತ, ಸಿದ್ಧಿ ಆಂಜನೇಯ ಎಂಬ ಹೆಸರೂ ಈ ದೇವರಿಗೆ ಇದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಹಲವು ಭಕ್ತರು ದೇವರ ಪೂಜೆ ನೆರವೇರಿಸಿ ಇಷ್ಟಾರ್ಥ ಬೇಡಿಕೊಂಡರು.

ಕೋರಂಟಿ ಹನುಮಾನ್ ದೇವಸ್ಥಾನದಲ್ಲಿಯೂ ಭಕ್ತರ ದಟ್ಟಣೆ ಕಂಡುಬಂತು. ಈ ದೇವಸ್ಥಾನಕ್ಕೆ ಮಹಾರಾಷ್ಟ್ರದ ಭಕ್ತರೂ ಹೆಚ್ಚಾಗಿರುವುದು ವಿಶೇಷ.

ಕಲಬುರಗಿಯ ಶಾಂತಿನಗರ ದೇವಸ್ಥಾನದಲ್ಲಿ ವಾಯುಪುತ್ರನಿಗೆ ಪೂಜೆ ಸಲ್ಲಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.