ADVERTISEMENT

ಕುರಿಗಾರರ ಹಟ್ಟಿ ಲಕ್ಷ್ಮಿ ಪೂಜೆ ಸಂಭ್ರಮ: ಕುರಿದೊಡ್ಡಿಯಲ್ಲಿ ಆಚರಣೆ

ದೀಪಾವಳಿ ಹಬ್ಬಕ್ಕೆ ಅಡ್ಡಿಯಾಗದ ಸೂರ್ಯಗ್ರಹಣ

ಕಿಶನರಾವ್‌ ಕುಲಕರ್ಣಿ
Published 26 ಅಕ್ಟೋಬರ್ 2022, 3:41 IST
Last Updated 26 ಅಕ್ಟೋಬರ್ 2022, 3:41 IST
ಹನುಮಸಾಗರ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಕುರಿಗಾರರು ಮಂಗಳವಾರ ಬೆಳಿಗ್ಗೆ ಹಟ್ಟಿಲಕ್ಷ್ಮಿ ಹಾಗೂ ಕುರಿಗಳಿಗೆ ಪೂಜೆ ಮಾಡಿ ದೀಪಾವಳಿ ಹಬ್ಬ ಆಚರಿಸಿದರು
ಹನುಮಸಾಗರ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಕುರಿಗಾರರು ಮಂಗಳವಾರ ಬೆಳಿಗ್ಗೆ ಹಟ್ಟಿಲಕ್ಷ್ಮಿ ಹಾಗೂ ಕುರಿಗಳಿಗೆ ಪೂಜೆ ಮಾಡಿ ದೀಪಾವಳಿ ಹಬ್ಬ ಆಚರಿಸಿದರು   

ಹನುಮಸಾಗರ: ಕುರಿಗಳು ಲಕ್ಷ್ಮಿಯ ಅವತಾರವೆಂದು ನಂಬಿರುವ ಕುರಿಗಾರರು ಮಂಗಳವಾರ ಬೆಳಿಗ್ಗೆ ತಮ್ಮ ಹಟ್ಟಿಯ ಮುಂದೆ ಬಾಳೆದಿಂಡು, ಹೂವುಗಳೊಂದಿಗೆ ಹಟ್ಟಿಲಕ್ಷ್ಮಿಯನ್ನು ರಚಿಸಿ, ದೇವಿಗೆ ನೈವೇದ್ಯ ನೀಡಿ ಕುರಿಗಳಿಗೆ ಆರತಿ ಮಾಡುವುದರ ಮೂಲಕ ದೀಪಾವಳಿ ಪಾಡ್ಯ ಸಂಭ್ರಮದಿಂದ ಆಚರಿಸಿದರು.

ಗ್ರಹಣದ ನಿಮಿತ್ತ ಬಹುತೇಕರು ದೀಪಾವಳಿ ಪಾಡ್ಯ ಬುಧವಾರ ಆಚರಿಸುತ್ತಿದ್ದರೆ, ಅಡವಿಯಲ್ಲಿರುವ ಕೆಲ ಕುರಿಗಾರರು ನಮಗೆ ಸದಾ ಶುಭಕಾಲ, ಇವ್ಯಾವು ನಮ್ಮ ಹಬ್ಬಕ್ಕೆ ಅಡ್ಡಿಯಾಗುವುದಿಲ್ಲ ಎಂದು ಹೊಸಹಳ್ಳಿಯಲ್ಲಿ ವಾಸ್ತವ್ಯ ಹೂಡಿರುವ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಸೌಂದಲಗ ಗ್ರಾಮದ ಸಂಚಾರ ಕುರಿಗಾರರು ತಿಳಿಸಿದರು.

ಕಾಡು–ಮೇಡು ಸುತ್ತಿ ಕುರಿ ಕಾಯುವ ಈ ಕುರುಬ ಸಮುದಾಯದ ಜನ ದೀಪಾವಳಿ ಪಾಡ್ಯವನ್ನು ಕುರಿ ದೊಡ್ಡಿಯಲ್ಲಿ ಆಚರಿಸುವುದು ಹಿಂದಿನಿಂದ ನಡೆದುಬಂದ ಸಂಪ್ರದಾಯ. ಕುರಿಗಳ ಹಿಂಡಿನೊಂದಿಗೆ ಬೀಗರನ್ನೂ ಆಹ್ವಾನಿಸಿ, ವಿಶೇಷ ಪೂಜೆ ಸಲ್ಲಿಸುವುದರ ಮೂಲಕ ದೀಪಾವಳಿ ಆಚರಿಸುತ್ತಾರೆ.

ADVERTISEMENT

ಕುರಿಗಾರ ರಾಯಣ್ಣ ಬೋರಗುಂಡಿ ಮಾಹಿತಿ ನೀಡಿ, ‘ಕುರಿ ಸಂತತಿ ವೃದ್ಧಿಸುತ್ತದೆ ಎನ್ನುವ ನಂಬಿಕೆಯಿಂದ ನಮ್ಮ ಸಮುದಾಯದ ಜನ ಹಟ್ಟಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ದೀಪಾವಳಿ ಪಾಡ್ಯ ದಿನ ಬೆಳಿಗ್ಗೆ ಹಟ್ಟಿ ಸ್ವಚ್ಛಗೊಳಿಸಿ, ಕುರಿ ಹಿಕ್ಕೆ ಸಂಗ್ರಹಿಸಿ ಗುಡ್ಡೆ ಹಾಕಿ, ಅದರ ಸುತ್ತ ಸುಣ್ಣದ ಪಟ್ಟಿ ಹಾಕುತ್ತೇವೆ. ನಂತರ ಕುರಿ ದೊಡ್ಡಿಯ ಮುಂದೆ ಬಾಳೆ ದಿಂಡು, ತೆಂಗಿನ ಗರಿ, ಕಬ್ಬಿನ ಗಳಗಳಿಂದ ಅಲಂಕರಿಸಲಾಗುತ್ತದೆ. ಕುರಿ ಹಿಕ್ಕೆಯ ಮಧ್ಯೆ ತುಂಬಿದ ಕೊಡ ಇಟ್ಟು ಅದನ್ನೇ ಲಕ್ಷ್ಮಿ ಎಂದು ಭಾವಿಸಿ ಸೀರೆ ಉಡಿಸಿ ಹಸಿರು ಬಳೆ, ಖಣ, ಮಂಗಳಸೂತ್ರ, ಮೂಗುತಿ ಹಾಕಿ, ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸುತ್ತೇವೆ’ ಎಂದು ಹೇಳಿದರು.

ಬೆಳಿಗ್ಗೆ ಹಟ್ಟಿಯಲ್ಲಿರುವ ಎಲ್ಲ ಕುರಿ ಕೊಂಬುಗಳಿಗೆ ಬಣ್ಣ ಹಚ್ಚಿ ಅವುಗಳ ಕೊರಳಿಗೆ ಅರಿಷಿಣ-ಕುಂಕುಮಗಳಿಂದ ಅದ್ದಿ ತೆಗೆದ ದಾರ ಹಾಕಿ ಅಲಂಕರಿಸಲಾಗಿತ್ತು. ನಂತರ ಹಟ್ಟಿಯ ಮುಂದೆ ಕಬ್ಬುಗಳಿಂದ ಮಂಟಪ ಮಾಡಿ, ಟಗರು ಮತ್ತು ಕುರಿಯ ಕೊರಳಿಗೆ ಹಾರ ಹಾಕಿ ಶೃಂಗರಿಸಲಾಗಿತ್ತು.

ಧಾರ್ಮಿಕ ಕಾರ್ಯ ಮುಗಿದ ನಂತರ ಸಿಹಿ ತಿನಿಸುಗಳನ್ನು ದೇವಿಗೆ ನೈವೇದ್ಯ ಮಾಡಿ, ಕುರಿಗಳ ಮೇಲೆ ಭಂಡಾರ ಎರಚಿ ವರ್ಷವಿಡೀ ಕುರಿ ಹಿಂಡುಗಳ ಸಂತತಿ ಹೆಚ್ಚಾಗಲಿ ಎಂದು ಪ್ರಾರ್ಥಿಸಿದರು. ತಮ್ಮ ಆಯುಧಗಳಾದ ಕೊಡಲಿ, ಉಣ್ಣೆ ಕತ್ತರಿಸುವ ಕತ್ತರಿ, ಬಗಲಿಗೆ ಹಾಕಿಕೊಳ್ಳುವ ಹೊಟ್ಟೆ ಚೀಲ ಇಟ್ಟು ಪೂಜೆ ಸಲ್ಲಿಸಿದರು. ಅಲ್ಲದೆ ಆಗ ತಾನೇ ಹೆಣ್ಣುಮರಿಗೆ ಜನ್ಮ ನೀಡಿದ ಕುರಿ ಹಾಗೂ ಒಂದು ಟಗರನ್ನು ನಿಲ್ಲಿಸಿ ತೆಂಗಿನಕಾಯಿ ಒಡೆದು, ದೇವಿಗೆ ನೈವೇದ್ಯ ಮಾಡಿದ ಹೋಳಿಗೆ, ಶಾವಿಗೆ, ಅನ್ನವನ್ನು ತಿನ್ನಿಸಿ ಸಂಭ್ರಮಿಸಿದರು. ಹಬ್ಬ ಆಚರಿಸಿದ ಬಳಿಕ ಎಂದಿನಂತೆ ಕುರಿಗಳೊಂದಿಗೆ ಅಡವಿಯತ್ತ ನಡೆದರು.

ಕುಟುಂಬದ ಹಿರಿಯರಾದ ಅಣ್ಣಪ್ಪ ಬೋರಗುಂಡೆ, ಬಾಳಪ್ಪ, ಭೀಮಣ್ಣ, ರಾಹುಸಾಹೇಬ, ಹಾಲಪ್ಪ, ಸಂತೋಷ ತಮ್ಮತಮ್ಮ ಹಟ್ಟಿಯಲ್ಲಿ ಹಬ್ಬ ಆಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.