ಕಲಬುರಗಿ: ನಗರದ ಇಎಸ್‌ಐ ಆಸ್ಪತ್ರೆಯ ಯುಎಸ್‌ಜಿ (ಅಲ್ಟ್ರಾಸೌಂಡ್ ಸೋನೋಗ್ರಫಿ) ವಿಭಾಗದಲ್ಲಿ ರೇಡಿಯಾಲಜಿಸ್ಟ್‌ಗಳ ಕೊರತೆಯಿಂದ ಹೊರರೋಗಿಗಳು ಸ್ಕ್ಯಾನಿಂಗ್ ಮಾಡಿಸಲು ತಿಂಗಳುಗಟ್ಟಲೇ ಕಾಯುವಂತಾಗಿದೆ.
ಗರ್ಭಾವಸ್ಥೆ, ಅಂಗಗಳ ಪರೀಕ್ಷೆ, ರಕ್ತನಾಳ, ಥೈರಾಯ್ಡ್, ಕಿಡ್ನಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಸ್ಕ್ಯಾನಿಂಗ್ ಮಾಡಿಸಲು ತೆರಳುವ ರೋಗಿಗಳು ಅಲ್ಲಿನ ಸಿಬ್ಬಂದಿಯ ‘ಸ್ಕ್ಯಾನಿಂಗ್ ಆಗಲ್ಲರೀ’ ಎನ್ನುವ ಮಾತು ಕೇಳಿ ಬೇಸರದಿಂದಲೇ ಮರಳುತ್ತಾರೆ.
‘ವೈದ್ಯರ ತಪಾಸಣೆ ನಂತರ ಸ್ಕ್ಯಾನಿಂಗ್ ಶಿಫಾರಸು ಚೀಟಿಯೊಂದಿಗೆ ಯುಎಸ್‌ಜಿ ಮಾಡಿಸಲು ತೆರಳಿದರೆ ಅಲ್ಲಿನ ಸಿಬ್ಬಂದಿ ರೇಡಿಯಾಲಜಿಸ್ಟ್‌ಗಳಿಲ್ಲ. ನವೆಂಬರ್ 9ರವರೆಗೆ ಜನ ಈಗಾಗಲೇ ಹೆಸರು ಬರೆಸಿದ್ದಾರೆ ಎಂದು ಹೇಳುತ್ತಿದ್ದಾರೆ’ ಎಂದು ರೋಗಿಗಳ ಸಂಬಂಧಿಕರು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.
‘ಕಳೆದ ಐದಾರು ತಿಂಗಳ ಹಿಂದೆ ರೇಡಿಯಾಲಜಿಸ್ಟ್‌ಗಳ ಕೊರತೆ ಇರಲಿಲ್ಲ. ರೋಗಿಗಳು ಬಂದ ದಿನವೇ ಸ್ಕ್ಯಾನ್ ಮಾಡಲಾಗುತ್ತಿತ್ತು. ಕೆಲವರ ಹೊರಗುತ್ತಿಗೆ ಅವಧಿ ಈಗಾಗಲೇ ಮುಗಿದಿದ್ದು, ಕೆಲಸ ಬಿಟ್ಟು ಹೋಗಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ 9 ರೇಡಿಯಾಲಜಿಸ್ಟ್‌ಗಳ ನೇಮಕಾತಿಗಾಗಿ ಕಳೆದ ಐದಾರು ದಿನಗಳ ಹಿಂದೆ ಸಂದರ್ಶನ ಕರೆಯಲಾಗಿತ್ತು. ಆದರೆ, ಅರ್ಹರು ಯಾರೂ ಕೆಲಸಕ್ಕೆ ಬರುತ್ತಿಲ್ಲ’ ಎಂಬುದು ಆಸ್ಪತ್ರೆಯ ವೈದ್ಯಾಧಿಕಾರಿಗಳ ಮಾಹಿತಿ.
ಯುಎಸ್‌ಜಿ ವಿಭಾಗದಲ್ಲಿ ಈಗಿರುವ ಇಬ್ಬರು ರೇಡಿಯಾಲಜಿಸ್ಟ್‌ಗಳ ಹೊರಗುತ್ತಿಗೆ ಅವಧಿ ಮುಂದಿನ ನವೆಂಬರ್ ತಿಂಗಳಲ್ಲಿ ಮುಗಿಯಲಿದ್ದು, ಹೊಸದಾಗಿ ಯಾರೂ ಬರದಿದ್ದಲ್ಲಿ ರೋಗಿಗಳ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ.
ಇಎಸ್‌ಐ ಕಾರ್ಡ್ ಇಲ್ಲದಿದ್ದರೂ ರಿಯಾಯಿತಿ ದರದಲ್ಲಿ ಗುಣಮಟ್ಟದ ಚಿಕಿತ್ಸೆ ಮತ್ತು ಔಷಧ ದೊರೆಯುತ್ತದೆ ಎಂದು ಹೆಚ್ಚಿನ ರೋಗಿಗಳು ಇಎಸ್‌ಐ ಆಸ್ಪತ್ರೆಗೆ ಬರುತ್ತಾರೆ. ಪ್ರತಿದಿನ ಇಎಸ್‌ಐ ಕಾರ್ಡ್ ಹೊಂದಿದ ಮತ್ತು ಹೊಂದಿಲ್ಲದ ಸುಮಾರು 1,200 ರೋಗಿಗಳು ಭೇಟಿ ನೀಡುತ್ತಾರೆ. ಸೋಮವಾರವಾದರೆ ಈ ಸಂಖ್ಯೆ ಇನ್ನೂ ಹೆಚ್ಚುತ್ತದೆ. ಯುಎಸ್‌ಜಿ ವಿಭಾಗದಲ್ಲಿ ಪ್ರತಿದಿನ 60–70 ರೋಗಿಗಳನ್ನು ಸ್ಕ್ಯಾನ್ ಮಾಡಲಾಗುತ್ತಿದೆ. ಇದಕ್ಕಾಗಿ ನವೆಂಬರ್ ಎರಡನೇ ವಾರದವರೆಗೂ ರೋಗಿಗಳು ನೋಂದಾಯಿಸಿದ್ದು, ನ.9ಕ್ಕೆ ಈಗಾಗಲೇ 11 ರೋಗಿಗಳು ಹೆಸರು ಬರೆಸಿದ್ದಾರೆ!
‘ಸೆಪ್ಟೆಂಬರ್ 14ರಂದು ನನ್ನ ಪತ್ನಿಗೆ ಸ್ಕ್ಯಾನಿಂಗ್ ಮಾಡಿಸಲು ಹೆಸರು ಬರೆಸಿದ್ದೇನೆ. ತಿಂಗಳ ನಂತರ ಪಾಳಿ ಬಂದಿದೆ. ಇಷ್ಟೊಂದು ದಿನ ಕಾಯ್ದರೆ ಬಡರೋಗಿಗಳ ಗತಿ ಏನಾಗಬೇಕು?’ ಎಂದು ಕಮಲಾಪುರ ತಾಲ್ಲೂಕಿನ ಜಯಭೀಮ ಜೀವಣಗಿ ಅಸಮಾಧಾನ ವ್ಯಕ್ತಪಡಿಸಿದರು.
‘ವಿಭಾಗದಲ್ಲಿ ರೇಡಿಯಾಲಜಿಸ್ಟ್‌ಗಳ ಕೊರತೆ ಇದೆ. ಒಳರೋಗಿಗಳಿಗೆ ಆದ್ಯತೆ ನೀಡುತ್ತಿದ್ದು, ಪ್ರತಿದಿನ 20–30 ಒಳರೋಗಿಗಳ ಸ್ಕ್ಯಾನ್ ಮಾಡಲಾಗುತ್ತಿದೆ. ಇಎಸ್‌ಐ ಕಾರ್ಡ್ ಹೊಂದಿದ ಹೊರರೋಗಿಗಳಿಗೆ 2–3 ದಿನ ಬಿಟ್ಟು ಬರುವಂತೆ ದಿನಾಂಕ ಕೊಡಲಾಗುತ್ತಿದೆ’ ಎಂಬುದು ವಿಭಾಗದ ಮುಖ್ಯ ವೈದ್ಯಾಧಿಕಾರಿ ಡಾ.ಸಂತೋಷಕುಮಾರ ಮಾಹಿತಿ.
ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ರೇಡಿಯಾಲಜಿಸ್ಟ್‌ಗಳಿಗೆ ಮುಂದುವರಿಯಿರಿ ಎಂದು ಬಲವಂತ ಮಾಡಲು ಬರುವುದಿಲ್ಲ. ಅವರಿಗೆ ಆಸಕ್ತಿ ಇದ್ದಲ್ಲಿ ಸಂದರ್ಶನಕ್ಕೆ ಹಾಜರಾಗಬಹುದುಡಾ. ಎಸ್.ವಿ. ಕ್ಷಿರಸಾಗರ ಡೀನ್ ಇಎಸ್‌ಐ ಆಸ್ಪತ್ರೆ
‘ಸಂದರ್ಶನಕ್ಕೆ ಯಾರೂ ಬರುತ್ತಿಲ್ಲ’
‘ರೇಡಿಯಾಲಜಿಸ್ಟ್‌ಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಕಳೆದ ಅಕ್ಟೋಬರ್ 15ರಂದು ಸಂದರ್ಶನ ಕರೆಯಲಾಗಿತ್ತು. ಇದಕ್ಕಾಗಿ ಜಾಹೀರಾತು ನೀಡಲಾಗಿತ್ತು. ವೈದ್ಯರ ವಾಟ್ಸ್‌ಆ್ಯಪ್ ಗ್ರೂಪ್ ಸೇರಿದಂತೆ ಬಹಳಷ್ಟು ಪ್ರಚಾರ ಸಹ ನೀಡಲಾಗಿತ್ತು. ಆದರೆ ಸಂದರ್ಶನಕ್ಕೆ ಯಾರೂ ಬರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಆಸ್ಪತ್ರೆ ಡೀನ್ ಡಾ. ಎಸ್.ವಿ. ಕ್ಷಿರಸಾಗರ. ‘ರೇಡಿಯಾಲಜಿಸ್ಟ್‌ಗಳು ಫುಲ್‌ಟೈಮ್ ಕೆಲಸ ಮಾಡಲು ಸಿಗದ ಕಾರಣ ಕೇವಲ 2–3 ಗಂಟೆ ಬಂದು ಕೆಲಸ ಮಾಡುವವರಿಗೆ ಅನುಭವ ಆಧಾರಿತವಾಗಿ ದಿನಕ್ಕೆ ₹ 4 ಸಾವಿರದಿಂದ ₹ 6 ಸಾವಿರದವರೆಗೆ ಕೊಡಲು ಸಿದ್ಧರಿದ್ದೇವೆ. ಆದರೆ ಅರ್ಹರು ಆಸಕ್ತಿ ತೋರುತ್ತಿಲ್ಲ. ನವೆಂಬರ್ 10ರೊಳಗೆ ಮತ್ತೊಮ್ಮೆ ಸಂದರ್ಶನ ಕರೆಯಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.