ಕಾಳಗಿ: ಪಟ್ಟಣದ ಲಾಲ್ ಅಹ್ಮದ್ ಮುತ್ಯಾನ ಗೋರಿ ಎದೆ ಬಡಿತದ ಘಟನೆಗೆ ಸಂಬಂಧಿಸಿ ವ್ಯಕ್ತಿಯೊಬ್ಬರ ಸವಾರಿ ಹೇಳಿಕೆಯಂತೆ ಸ್ಥಳೀಯರು ಭಾನುವಾರ ಗೋರಿಗೆ ವಿಶೇಷ ಪೂಜೆ, ನೈವೇದ್ಯ ಸಲ್ಲಿಸಿ ತಾವೂ ಪ್ರಸಾದ ಸ್ವೀಕರಿಸುವ ಮೂಲಕ ಮುತ್ಯಾಗೆ ಶಾಂತಿ ಮಾಡಿದರು.
ದೀಪಾವಳಿ ಅಮಾವಾಸ್ಯೆಯಿಂದ ಒಂದು ವಾರದವರೆಗೆ ರಾತ್ರಿ ಆಗಾಗ ಕಂಡುಬಂದ ಗೋರಿಯ ಮೇಲ್ಭಾಗದ ಬಡಿತದ ಘಟನೆಗೆ ಜನರು ಹೌಹಾರಿದ್ದರು. ಹೈದಾರ್ ಗಾಡಿವಾನ್ ಎಂಬುವವರ ಮೈಯಲ್ಲಿ ಮುತ್ಯಾ ಸವಾರಿ ಬಂದು ಊರ ದೇವರಿಗೆ ಶಾಂತಿ ಮಾಡುವಂತೆ ಹೇಳಿದ್ದಾರೆ. ಅದರಂತೆ ಎಲ್ಲರೂ ನಡೆದುಕೊಳ್ಳಬೇಕೆಂದು ಊರಜನರು ಸಭೆ ಸೇರಿ ಮುಖಂಡರು ದೇಣಿಗೆ ಸಂಗ್ರಹಿಸಿದ್ದರು.
ಆದರೆ ಸತ್ಯಾಸತ್ಯತೆ ಅರಿಯಲು ಮುಂದಾಗದ ಜನರು ಸವಾರಿ ಹೇಳಿಕೆ ಮತ್ತು ಸಭೆಯ ನಿರ್ಣಯದಂತೆ ನ.14ರಂದು ಮಲಘಾಣ ಸಮೀಪದ ಶಹಾ ಹುಸೇನ್ ಸಾಬ ಮುತ್ಯಾ, ಲಕ್ಷ್ಮಣನಾಯಕ್ ತಾಂಡಾದ ಬಾಬಾಸಾಬ ಮುತ್ಯಾ, ನೀಲಕಂಠ ಕಾಳೇಶ್ವರ ಮತ್ತು ಹನುಮಾನ ದೇವರಿಗೆ ವಿಶೇಷ ಪೂಜೆ, ನೈವೇದ್ಯ ಸಲ್ಲಿಸಿದರು.
ಆಮೇಲೆ ಲಾಲ್ ಅಹ್ಮದ್ ಮುತ್ಯಾ, ಮರಗಮ್ಮ ದೇವಿ ಸೇರಿದಂತೆ ಊರೊಳಗಿನ ಎಲ್ಲ ದೇವತೆಗಳಿಗೆ ಭಾನುವಾರ ವಿಶೇಷ ಪೂಜೆ, ನೈವೇದ್ಯ ಅರ್ಪಿಸಿ ಸವಾರಿ ವ್ಯಕ್ತಿಯ ಇಚ್ಛೆ ಈಡೇರಿಸಿದರು. ದಿನವಿಡೀ ಲಾಲ್ ಅಹ್ಮದ್ ಮುತ್ಯಾನ ದರ್ಗಾಕ್ಕೆ ಹರಿದುಬಂದ ಭಕ್ತರು ಕಾಯಿಕರ್ಪೂರ ಸಲ್ಲಿಸಿ ನಮಿಸಿದರು.
ಬಳಿಕ ಗೋಧಿ ಹುಗ್ಗಿ, ಅನ್ನ, ಸಾಂಬಾರ್ ಪ್ರಸಾದ ಸ್ವೀಕರಿಸಿ ಲಾಲ್ ಅಹ್ಮದ್ ಮುತ್ಯಾಗೆ ಶಾಂತಿ ಮಾಡಿದರು. ಅರಣಕಲ್ ಜಿಲ್ಲಾ ಪಂಚಾಯಿತಿ ಸದಸ್ಯ ರಾಜೇಶ ಗುತ್ತೇದಾರ, ತಾಲ್ಲೂಕು ಪಂಚಾಯಿತಿ ಸದಸ್ಯೆ ರತ್ನಮ್ಮ ಗುತ್ತೇದಾರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ಸಲಗೂರ ಒಳಗೊಂಡಂತೆ ನೂರಾರು ಜನರು ದರ್ಗಾಕ್ಕೆ ಆಗಮಿಸಿ ದರ್ಶನ ಪಡೆದರು.
ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಗೌಡ ಪಾಟೀಲ, ವಾಸವಿ ಕ್ಲಬ್ ಅಧ್ಯಕ್ಷ ವಿಶ್ವನಾಥ ವನಮಾಲಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ರಾಘವೇಂದ್ರ ಗುತ್ತೇದಾರ, ಮುಖಂಡ ಚಂದ್ರಕಾಂತ ವನಮಾಲಿ, ಪ್ರಕಾಶ ಸೇಗಾಂವಕರ್, ಶಾಮರಾವ ಕಡಬೂರ, ಜಾವೋದ್ದಿನ ಸೌದಾಗರ, ಅಸ್ಲಂಬೇಗ ಬಿಜಾಪುರ, ಸಾದಿಕಮಿಯಾ ಗಾಡಿವಾನ, ಅವಿನಾಶ ಸೇಗೂರ, ವೀರಭದ್ರಪ್ಪ ಸಲಗೂರ ಅನೇಕರು ದರ್ಗಾದಲ್ಲೇ ಬಿಡಾರ ಹೂಡಿ ವ್ಯವಸ್ಥೆ ನೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.