ಕಲಬುರಗಿ: ಮೇ ತಿಂಗಳು ಮುಗಿದರೂ, ಮುಂಗಾರು ಪ್ರವೇಶವಾಗಿದ್ದರೂ ಬಿಸಿಲಿನ ಪ್ರತಾಪ ಕಡಿಮೆಯಾಗುತ್ತಿಲ್ಲ. ನಗರದಲ್ಲಿ ಕಳೆದ ಮೂರು ದಿನಗಳಿಂದ 42, 43 ಮತ್ತು 41 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದರಿಂದಾಗಿ ಜನರು ತೀವ್ರ ತೊಂದರೆ ಅನುಭವಿಸಿದರು.
ವಿಪರೀತ ಬಿಸಿಲಿನೊಂದಿಗೆ ಬಿಸಿಗಾಳಿಯೂ ಜನರನ್ನು ಕಂಗೆಡಿಸಿತು. ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿಯಲ್ಲಿ ವ್ಯಾಪಾರಸ್ಥರು, ಕಾರ್ಮಿಕರು, ವಿದ್ಯಾರ್ಥಿಗಳು, ನೌಕರರು ಧಗೆಯಿಂದಾಗಿ ಬಳಲಿದರು. ಮಾರುಕಟ್ಟೆಗಳಲ್ಲಿ ಕೂಲರ್, ಎಸಿಗಳ ಮಾರಾಟವೂ ಜೋರಾಗಿತ್ತು.
‘ವಿಪರೀತ ಶಾಖದಿಂದಾಗಿ ತೊಂದರೆಯಾಯಿತು. ತಲೆಸುತ್ತಿ ಬೀಳುವಂತಾಗಿತ್ತು. ಹೇಗೋ ಸಾವರಿಸಿಕೊಂಡೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಅಲವತ್ತುಕೊಂಡರು.
‘ವಿಪರೀತ ಧಗೆಯಿಂದಾಗಿ ಕುಳಿತು ವ್ಯಾಪಾರ ಮಾಡಲು ಕಷ್ಟವಾಗುತ್ತಿದೆ. ಛತ್ರಿ ಹಾಕಿಕೊಂಡು ಕುಳಿತರೂ ಧಗೆಯಿಂದಾಗಿ ಮೈಯೆಲ್ಲಾ ಬೆವರುಮಯವಾಗುತ್ತಿದೆ‘ ಎಂಬುದು ತರಕಾರಿ ವ್ಯಾಪಾರಿ ಬಸವರಾಜ ಅವರ ಅಭಿಪ್ರಾಯ.
ಜನರು ತಂಪು ಪಾನೀಯ, ಎಳನೀರಿನ ಮೊರೆ ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಈ ಹಿಂದೆ ಎರಡ್ಮೂರು ಸಲ ಮಳೆಯಾಗಿದೆ. ಆದರೆ ವಾತಾವರಣ ತಣ್ಣಗಾಗಿಸಲು ಅಷ್ಟು ಸಾಕಾಗಿಲ್ಲ.
‘ದಕ್ಷಿಣ ಅಮೆರಿಕದ ಪೆರುವಿನಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ ಎರಡು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ. ಅಲ್ಲಿ ಮಳೆ ಬಂದರೂ ಇಲ್ಲಿ ಬಿಸಿಲಿದೆ. ಫೆಸಿಪಿಕ್ ಸಮುದ್ರ ಕಾಯ್ದರೆ ನೀರು ಆವಿಯಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ಅಲ್ಲಿ ಮಳೆ ತರುವ ಲಾ ನಿನೊ ಚಂಡಮಾರುತ ಶೀಘ್ರ ಆಗಮಿಸುವ ಸಂಭವವಿದೆ. ಹಾಗಾದಲ್ಲಿ ಕೆಲವು ದಿನಗಳ ನಂತರ ಉಷ್ಣಾಂಶ ಇಲ್ಲಿಯೂ ಸಹಜ ಸ್ಥಿತಿಗೆ ಬರಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆಯ ಕೃಷಿ ಸಂಶೋಧನಾ ಕೇಂದ್ರ ಬೀದರ್‌ನ ತಾಂತ್ರಿಕ ಅಧಿಕಾರಿ ಬಸವರಾಜ ಬಿರಾದಾರ ತಿಳಿಸಿದರು.
ಮೂರು ಮಹಡಿಗಳ ಕಟ್ಟಡದ ನಿರ್ಮಾಣ ಕೆಲಸ ಮಾಡುತ್ತೇನೆ. ವಿಪರೀತ ಸೆಖೆಯಿಂದಾಗಿ ಮೈಯೆಲ್ಲಾ ತೊಯ್ದು ತೊಪ್ಪೆಯಾಗುತ್ತದೆ
-ಮಹಾಂತ ಸ್ವಾಮಿ ಕೂಲಿ ಕಾರ್ಮಿಕ ಧುದನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.