ಕಲಬುರಗಿ: ನಗರವೂ ಸೇರಿದಂತೆ ಶಹಾಬಾದ್, ಚಿತ್ತಾಪುರ, ಸೇಡಂ, ಕಾಳಗಿ, ಅಫಜಲಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಧಾರಾಕಾರ ಮಳೆಯಾಗಿದೆ.
ಸುಮಾರು ರಾತ್ರಿ 8 ಗಂಟೆಯಿಂದ ಆರಂಭವಾದ ಮಳೆಯೂ ಧಾರಾಕಾರವಾಗಿ ಸುರಿದಿದೆ. ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು. ಆದರೆ ಕಲಬುರಗಿ ನಗರದಲ್ಲಿ ಬೆಳಿಗ್ಗೆ 11.10ರ ಸುಮಾರಿಗೆ ಆಗಸದಲ್ಲಿ ಮೋಡಗಳು ದಟ್ಟೈಸಿದ್ದವು. ಬೆಳಿಗ್ಗೆ 11.15 ಗಂಟೆ ಹೊತ್ತಿಗೆ ಆರಂಭವಾದ ಮಳೆ ಸುಮಾರು 50 ನಿಮಿಷಕ್ಕೂ ಹೆಚ್ಚು ಕಾಲ ಸುರಿಯಿತು. ಮತ್ತೆ ರಾತ್ರಿಯೂ ಧಾರಾಕಾರ ಮಳೆ ಸುರಿದಿದೆ.
ಬೆಳಿಗ್ಗೆ ಗಾಳಿ, ಬಿರುಸಿನ ಮಳೆಗೆ ವಾತಾವರಣ ತಂಪಾಗಿಸಿತು. ಭರ್ಜರಿ ಮಳೆಗೆ ಚರಂಡಿಗಳು ತುಂಬಿ ಹರಿದವು. ನಗರದ ಅಲ್ಲಲ್ಲಿ ರಸ್ತೆಗಳು ಜಲಾವೃತವಾದವು. ನಗರದ ಎಸ್.ಎಂ. ಪಂಡಿತ್ ರಂಗಮಂದಿರ, ಮಾತೋಶ್ರೀ ತಾರಾದೇವಿ ರಾಂಪುರೆ ಔಷಧಗಳ ಮಹಾವಿದ್ಯಾಲಯದ ರಸ್ತೆಯಲ್ಲಿ ರಭಸದ ಮಳೆ ಹೆಚ್ಚಿನ ನೀರು ಸಂಗ್ರಹವಾಗಿದ್ದರಿಂದ ಸಂಚಾರಕ್ಕೆ ತೊಂದರೆಯಾಯಿತು.
ಅನ್ನಪೂರ್ಣ ಕ್ರಾಸ್, ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಬಳಿಯ ಅಂಡರ್ ಪಾಸ್, ಹಳೇ ಜೇವರ್ಗಿ ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ಮಳೆ ಹಾಗೂ ಚರಂಡಿ ನೀರು ಸಂಗ್ರಹಗೊಂಡು ಸಂಚಾರಕ್ಕೆ ತೊಂದರೆ ಉಂಟಾಯಿತು. ಮಳೆಯಿಂದ ಆಶ್ರಯ ಪಡೆಯಲು ದ್ವಿಚಕ್ರ ವಾಹನಗಳ ಸವಾರರು ವಾಹನ ನಿಲ್ಲಿಸಿ, ರಸ್ತೆ ಬದಿ ನಿಂತಿರುವುದು ಕಂಡು ಬಂತು.
ರಭಸದ ಮಳೆಗೆ ಹೆಚ್ಚಿನ ಪ್ರಮಾಣದ ನೀರು ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಕೆಲ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.