ಕಲಬುರಗಿ: ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಚಿಂಚೋಳಿ, ಕಾಳಗಿ, ಚಿತ್ತಾಪುರ, ಕಮಲಾಪುರ ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ವ್ಯಾಪಕವಾಗಿ ಮಳೆಯಾಗಿದೆ.
ಚಿಂಚೋಳಿ ತಾಲ್ಲೂಕಿನಲ್ಲಿ ಮುಲ್ಲಾಮಾರಿ ನದಿ ಮತ್ತೆ ಉಕ್ಕೇರಿದೆ. ಇದರಿಂದ ನದಿ ಪಾತ್ರದ ಹೊಲಗಳು ಹಾಗೂ ಗ್ರಾಮಗಳ ಹಲವಾರು ಮನೆಗಳು ಜಲಾವೃತವಾಗಿವೆ. ತಾಲ್ಲೂಕಿನಲ್ಲಿ ನಾಗರಾಳ ಮತ್ತು ಚಂದ್ರಂಪಳ್ಳಿ ಜಲಾಶಯಗಳಿಗೆ ಒಳ ಹರಿವು ಹೆಚ್ಚಾಗಿದ್ದರಿಂದ ನೀರು ನದಿಗೆ ಬಿಡಲಾಗಿದೆ. ದೇಗಲಮಡಿಯಲ್ಲಿ ಪ್ರವಾಹದಿಂದ ಜನರು ಮನೆ ತೊರೆದು 25ಕ್ಕೂ ಹೆಚ್ಚು ಕುಟುಂಬಗಳು ಬೇರೆಯವರ ಮನೆಯಲ್ಲಿ ಆಶ್ರಯ ಪಡೆದಿದ್ದು ಬೆಳಿಗ್ಗೆ ಪ್ರವಾಹ ತಗ್ಗಿದೆ. ಆದರೆ ಮುಲ್ಲಾಮಾರಿ ಪ್ರವಾಹ ತಗ್ಗಿಲ್ಲ.
ಇದರಿಂದ ಚಿಂಚೋಳಿ ರುಕ್ಮೋದ್ದಿನ್ ದರ್ಗಾ ಬಳಿ ಅಂಗನವಾಡಿ ಕಟ್ಟಡ ಭಾಗಶಃ ಮುಳುಗಿದರೆ 4 ಮನೆಗಳಿಗೆ ನೀರು ನುಗ್ಗಿವೆ, ಛೋಟಿ ದರ್ಗಾ ಬಳಿ ಶೌಚಾಲಯ ಮುಳುಗಿದ್ದು, ಹಳೆ ಸುಲೇಪೇಟ ರಸ್ತೆ ಮುಳುಗಿದೆ.
ಚಿಂಚೋಳಿಯ ಬೀದರ್ ಕ್ರಾಸ್ ಸಮೀಪದ ಪರಿಶಿಷ್ಟರ ಬಡಾವಣೆಯ ಕೆಲ ಮನೆಗಳಿಗೆ ಹಾಗೂ ಅಣವಾರ ಗ್ರಾಮದಲ್ಲಿ ಒಂದಿಷ್ಟು ಮನೆಗಳಿಗೆ ನೀರು ನುಗ್ಗಿದ್ದು ನದಿ ಪಾತ್ರದ ಹೊಲಗಳಲ್ಲಿನ ಬೆಳೆ ಹಾಗೂ ನದಿ ಪಕ್ಕದ ಗ್ರಾಮಗಳ ಮನೆಗಳು ಜಲಾವೃತವಾಗಿವೆ.
ಮತ್ತೆ ಮುಳುಗಿದ ಸೇತುವೆ ಚಿಂಚೋಳಿ ತಾಲ್ಲೂಕಿನ ಕಲ್ಲೂರು ಸುಲೇಪೇಟ ಮಾರ್ಗದ ಭಕ್ತಂಪಳ್ಳಿ ಗರಕಪಳ್ಳಿ ಮಧ್ಯೆ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಮುಳುಗಿದ್ದು, ಸೇತುವೆಯ ಮೇಲೆ 4 ಅಡಿಗಿಂತಲೂ ಅಧಿಕ ನೀರು ಹರಿಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದರಿಂದ ರೈತರ ಹೊಲಗಳಲ್ಲಿನ ಬೆಳೆಗಳು ಜಲಾವ್ರತವಾಗಿವೆ.
ನಾಗರಾಳ ಜಲಾಶಯಕ್ಕೆ 7700 ಕ್ಯುಸೆಕ್ ಒಳಹರಿವಿದ್ದು, 5500 ಕ್ಯುಸೆಕ್ ನೀರು ಮುಲ್ಲಾಮಾರಿ ನದಿಗೆ ಬಿಡಲಾಗುತ್ತಿದೆ.
ಚಂದ್ರಂಪಳ್ಳಿ ಜಲಾಶಯಕ್ಕೆ 500 ಕ್ಯುಸೆಕ್ ಒಳ ಹರೊವಿದ್ದು, 4300 ಕ್ಯುಸೆಕ್ ನೀರು ಸರನಾಲಾ ನದಿಗೆ ಬಿಡಲಾಗುತ್ತಿದೆ. ಸರನಾಲ ಮುಲ್ಲಾಮಾರಿಯ ಉಪ ನದಿಯಾದರೆ, ಮುಲ್ಲಾಮಾರಿ ಕಾಗಿಣಾ ನದಿಯ ಉಪ ನದಿಯಾಗಿದೆ. ಹೀಗಾಗಿ ಈ ನೀರು ಜಟ್ಟೂರು ಬಳಿ ಕಾಗಿಣಾ ನದಿ ಸೇರುತ್ತದೆ.
ರಜೆ ಘೋಷಣೆ
ಮಳೆ ನಿಮಿತ್ತ ಚಿತ್ತಾಪುರ ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.