ADVERTISEMENT

ಸಿದ್ಧಸಿರಿ ಎಥನಾಲ್, ಪವರ್ ಘಟಕ ಬಂದ್‌ಗೆ ಹೈಕೋರ್ಟ್‌ ತಡೆಯಾಜ್ಞೆ: ಯತ್ನಾಳ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2024, 13:02 IST
Last Updated 29 ಜನವರಿ 2024, 13:02 IST
ಬಸನಗೌಡ ಪಾಟೀಲ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್   

ಚಿಂಚೋಳಿ: ಪಟ್ಟಣದ ಹೊರ ವಲಯದಲ್ಲಿರುವ ಸಿದ್ಧಸಿರಿ ಎಥನಾಲ್ ಮತ್ತು ಪವರ್ ಘಟಕವನ್ನು ಮುಚ್ಚುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ ಎಂದು ವಿಜಯಪುರ ನಗರ ಶಾಸಕ, ಕಂಪೆನಿಯ ಮಾಲೀಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.

ಈ ಕುರಿತು ಯತ್ನಾಲ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ನಮ್ಮ ಸಿದ್ಧಸಿರಿ ಎಥನಾಲ್ ಮತ್ತು ವಿದ್ಯುತ್ ಘಟಕ‌ ಮುಚ್ಚುವ ಷಡ್ಯಂತ್ರಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಪರಿಸರ ನಿಯಮಾವಳಿ ಉಲ್ಲಂಘಿಸಿ, ವೈಜ್ಞಾನಿಕ ನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಜಲ, ವಾಯು ಮಾಲಿನ್ಯದ ಕಾರಣ ನೀಡಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಖಾನೆ ಮುಚ್ಚುವಂತೆ ನೋಟಿಸ್‌ ನೀಡಿತ್ತು. ಅದರ ಬೆನ್ನಲ್ಲಿಯೇ ಸೇಡಂ ಕಂದಾಯ ಉಪ ವಿಭಾಗದ ಉಪವಿಭಾಗಾಧಿಕಾರಿ ಆಶಪ್ಪ ಪೂಜಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶಾಂತಗೌಡ ಗುಣಕಿ, ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಶಾರದಾ ಅವರು ಶನಿವಾರ ಕಾರ್ಖಾನೆಗೆ ಬಂದು ಕೇನ್ ಯಾರ್ಡಗೆ ಬೀಗ ಹಾಕಿದ್ದರು.

ADVERTISEMENT

ಸರ್ಕಾರದ ಕ್ರಮಕ್ಕೆ ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕಬ್ಬು ಬೆಳೆಗಾರರಲ್ಲಿ ತಲ್ಲಣ ಮೂಡಿಸಿತ್ತು. ಸರ್ಕಾರದ ಕ್ರಮದಿಂದ ಕಬ್ಬು ಬೆಳೆಗಾರರು ಅತಂಕಕ್ಕೆ ಒಳಗಾಗಿದ್ದಲ್ಲದೇ ಸರ್ಕಾರದ ರೈತ ವಿರೋಧಿ ನಿಲುವು ಖಂಡಿಸಿದ್ದರು.

ರಾಜಕೀಯ ದುರುದ್ದೇಶದಿಂದ ಕಂಪೆನಿ ಬಂದ್ ಮಾಡಿಸಿ ರೈತರ ಜೀವನದ ಜತೆಗೆ ಚೆಲ್ಲಾಟವಾಡಿದೆ ಎಂಬ ಆರೋಪ ರೈತರಿಂದ ಕೇಳಿ ಬಂದಿತ್ತು. ಸದ್ಯ, ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರಿಂದ ಚಿಂಚೋಳಿ, ಸೇಡಂ, ಚಿತ್ತಾಪುರ, ಕಾಳಗಿ ಸೇರಿ ಇತರೆ ತಾಲ್ಲೂಕುಗಳ ರೈತರು ನಿರಾಳರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.