ಕಲಬುರಗಿ: ‘ಹೋಳಿ ಹಬ್ಬ ದೇಶದ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸಂಸದ ಡಾ. ಉಮೇಶ ಜಾಧವ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತರ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡ ಹೋಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಪತ್ರಕರ್ತರೊಂದಿಗೆ ಹಬ್ಬ ಆಚರಿಸಿರುವುದು ಬಾಲ್ಯದ ದಿನಗಳನ್ನು ನೆನಪಿಸಿತು. ವಿವಿಧ ಬಗೆಯ ಬಣ್ಣಗಳನ್ನು ಒಗ್ಗೂಡಿಸುವಂತೆ ನಾವೆಲ್ಲರೂ ಒಂದು ಎಂಬುದನ್ನು ನಿರೂಪಿಸುತ್ತದೆ’ ಎಂದರು.
‘ಹಿಂದೂಗಳೆಲ್ಲರೂ ಸಂಭ್ರಮದಿಂದ ಆಚರಿಸುವ ಹೋಳಿ ಹಬ್ಬದ ದಿನದಂದೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಟ್ಟಿರುವುದು ಸರಿಯಲ್ಲ. ಇದು ಮುಂದಿನ ದಿನಗಳಲ್ಲಿ ಪುನರಾವರ್ತನೆ ಆಗಬಾರದು’ ಎಂದರು.
ಸಂಸದರ ಜೊತೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ ಸೇರಿದಂತೆ ಪತ್ರಕರ್ತರು, ದೃಶ್ಯ ಮಾಧ್ಯಮದವರು, ಛಾಯಾಗ್ರಾಹಕರು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.