ADVERTISEMENT

ಕಲಬುರಗಿ: ಜೈಲಿನಲ್ಲಿ ಕುಳಿತು ಕೈದಿಗಳಿಗೆ ಹನಿಟ್ರ್ಯಾಪ್?

ವಿಡಿಯೊ ಕಾಲ್‌ ನೆಪದಲ್ಲಿ ಅಶ್ಲೀಲ ದೃಶ್ಯಗಳ ಸ್ಕ್ರೀನ್ ರೆಕಾರ್ಡ್; ಕೈದಿ ಫೋನ್‌ ಕರೆಯಿಂದ ಬಹಿರಂಗ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 0:05 IST
Last Updated 18 ಅಕ್ಟೋಬರ್ 2024, 0:05 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕಲಬುರಗಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿನ ವಿಚಾರಣಾಧೀನ ಕೈದಿಗಳಿಬ್ಬರು ಕೆಲ ಕೈದಿಗಳನ್ನು ವಿಡಿಯೊ ಕಾಲ್‌ ನೆಪದಲ್ಲಿ ಹನಿ ಟ್ರ್ಯಾಪ್‌ಗೆ ಕೆಡವಿ, ಅವರಿಗೆ ಹಣದ ಬೇಡಿಕೆ ಇರಿಸುತ್ತಿದ್ದಾರೆ. ಕೈದಿಗಳಿಂದ ಹಣ ಪಡೆದ ಕೆಲ ಜೈಲು ಸಿಬ್ಬಂದಿಯ ದೃಶ್ಯಗಳನ್ನೂ ವಿಡಿಯೊ ಮಾಡಿಕೊಂಡು ಅವರಿಗೂ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾದ ಜೈಲಿನ ಕೈದಿಯೊಬ್ಬರ ಫೋನ್‌ ಕರೆಯ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಭಯೋತ್ಪಾದನೆ ಪ್ರಕರಣದ ವಿಚಾರಣಾಧೀನ ಕೈದಿ ಜುಲ್ಫಿಕರ್ ಹಾಗೂ ಶಿವಮೊಗ್ಗದ ರೌಡಿ ಶೀಟರ್ ಬಚ್ಚನ್ ಬೆದರಿಕೆ ಹಾಕಿದವರು. ಕೊಲೆ ಪ್ರಕರಣದ ಸಜಾ ಕೈದಿ ಸಾಗರ ಶಿವಪ್ಪ ತನ್ನ ಸ್ನೇಹಿತ ಅಯ್ಯಪ್ಪ ಜತೆಗೆ ಪೋನ್‌ನಲ್ಲಿ ಮಾತನಾಡಿದ 4.50 ನಿಮಿಷಗಳ ಆಡಿಯೊದಿಂದ ಈ ವಿಷಯ ತಿಳಿದುಬಂದಿದೆ.

ADVERTISEMENT

ಕಾಲ್‌ ಸಂಭಾಷಣೆಯಲ್ಲಿ ಏನಿದೆ?: ‘ಬಚ್ಚನ್ ಮತ್ತು ಜುಲ್ಫಿಕರ್ ಬಳಿ ನಾಲ್ಕೈದು ಮೊಬೈಲ್‌ಗಳಿವೆ. ಮೊನ್ನೆ ನನ್ನನ್ನು ಅವರ ಸೆಲ್‌ಗೆ ಕರೆಸಿಕೊಂಡು, ಆಂಟಿ ಜತೆಗೆ ವಿಡಿಯೊ ಕಾಲ್‌ನಲ್ಲಿ ಮಾತಾಡುವಂತೆ ಮೊಬೈಲ್ ಕೊಟ್ಟರು. ಇಬ್ಬರನ್ನೂ ಬೆತ್ತಲೆಯೂ ಮಾಡಿಸಿದ್ದರು. ನನ್ನ ಗಮನಕ್ಕೆ ಬಾರದಂತೆ ಮೊಬೈಲ್ ಸ್ಕ್ರೀನ್‌ ರೆಕಾರ್ಡಿಂಗ್ ಸಹ ಮಾಡಿಕೊಂಡಿದ್ದರು’ ಎಂದು ಸಾಗರ ಹೇಳಿರುವುದು ಆಡಿಯೊದಲ್ಲಿದೆ.

‘ಅಶ್ಲೀಲ ವಿಡಿಯೊ ಮುಂದಿಟ್ಟುಕೊಂಡು ಈಗ ₹ 50 ಸಾವಿರಕ್ಕೆ ಬೇಡಿಕೆ ಇರಿಸಿದ್ದಾರೆ. ವಿಡಿಯೊ ಕಾಲ್‌ ಪ್ರಕರಣದಲ್ಲಿ ನಾನು ಕೊಟ್ಟ ಹೇಳಿಕೆಯನ್ನೂ ಹಿಂಪಡೆಯಬೇಕು. ಇಲ್ಲದಿದ್ದರೆ ಅಶ್ಲೀಲ ವಿಡಿಯೊವನ್ನು ಹೈಕೋರ್ಟ್‌, ಮಾಧ್ಯಮದವರಿಗೆ ಕೊಡುವ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಹೇಳಿದ್ದು ಆಡಿಯೊದಲ್ಲಿದೆ.

‘ಜೈಲಿನ 60–70 ಸಿಬ್ಬಂದಿ ಕೈದಿಗಳಿಂದ ಹಣ ಪಡೆದಿರುವ ದೃಶ್ಯಗಳ ವಿಡಿಯೊ ಮಾಡಿಕೊಂಡಿದ್ದಾರೆ. ತಮ್ಮ ಕೃತ್ಯಕ್ಕೆ ಅಡ್ಡಿಪಡಿಸಿದರೆ ಆ ವಿಡಿಯೊಗಳನ್ನು ಹರಿಬಿಡುವುದಾಗಿ ಅವರಿಗೂ ಬ್ಲ್ಯಾಕ್‌ ಮೇಲ್ ಮಾಡುತ್ತಿದ್ದಾರೆ. ಸಿಬ್ಬಂದಿ ಸಹ ಅವರಿಗೆ ಸಾಥ್ ಕೊಡುತ್ತಿದ್ದಾರೆ. ಜುಲ್ಫಿಕರ್‌ಗೆ ಪಾಕಿಸ್ತಾನದ ಉಗ್ರರ ಜತೆಗೆ ನಂಟಿದ್ದು, ಮುಸ್ಲಿಂ ಆಗುವಂತೆ ಜೈಲಿನಲ್ಲಿ ಇದ್ದವರಿಗೆ ಹುರಿದುಂಬಿಸುತ್ತಾನೆ. ಸಕಲ ರೀತಿಯ ಸೌಕರ್ಯ ಪಡೆದಿದ್ದಾನೆ’ ಎಂದು ಸಾಗರ ಫೋನ್‌ ಸಂಭಾಷಣೆಯಲ್ಲಿ ಆರೋಪಿಸಿದ್ದಾನೆ.

ಕೈದಿ, ಸಿಬ್ಬಂದಿಯ ವಿಚಾರಣೆ: ‘ಪೋನ್‌ ಕಾಲ್ ಸಂಭಾಷಣೆಯ ಸತ್ಯಾಸತ್ಯತೆ ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೂ ತರಲಾಗಿದೆ. ಬೆದರಿಕೆ ಹಾಕಿದ, ಫೋನ್‌ನಲ್ಲಿ ಮಾತನಾಡಿದ ಕೈದಿಗಳ ಜತೆಗೆ ಸಿಬ್ಬಂದಿಯನ್ನೂ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾರಾಗೃಹದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.