ADVERTISEMENT

ಕಲಬುರಗಿ | ನರೇಗಾ ಕೂಲಿ ಹಣ ₹ 1 ಲಕ್ಷ ಠೇವಣಿ ಇಟ್ಟ ವೃದ್ಧೆ

ಕಷ್ಟಕಾಲದಲ್ಲಿ ಖರ್ಚು ಮಾಡಲು ಹಣ ಕೂಡಿಟ್ಟ ಮಲಿಕಾಬಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 6:49 IST
Last Updated 6 ಜುಲೈ 2024, 6:49 IST
₹ 1 ಲಕ್ಷ ಠೇವಣಿ ಇಟ್ಟ ಪ್ರಮಾಣಪತ್ರದೊಂದಿಗೆ ಮಲಕಾಬಿ. ನರೇಗಾ ಕ್ಷೇತ್ರ ಸಹಾಯಕ ಸದಾಶಿವ ಇದ್ದಾರೆ
₹ 1 ಲಕ್ಷ ಠೇವಣಿ ಇಟ್ಟ ಪ್ರಮಾಣಪತ್ರದೊಂದಿಗೆ ಮಲಕಾಬಿ. ನರೇಗಾ ಕ್ಷೇತ್ರ ಸಹಾಯಕ ಸದಾಶಿವ ಇದ್ದಾರೆ   

ಕಲಬುರಗಿ: ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದ 74 ವರ್ಷದ ವೃದ್ಧೆ ಮಲಿಕಾಬಿ ಅವರು ತಮ್ಮ ಇಳಿ ವಯಸ್ಸಿನಲ್ಲಿಯೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಕೆಲಸ ಮಾಡಿ ಕೂಡಿಟ್ಟ ₹ 1 ಲಕ್ಷ ಕೂಲಿ ಹಣವನ್ನು ತಮ್ಮ ಭವಿಷ್ಯಕ್ಕಾಗಿ ಬ್ಯಾಂಕಿನಲ್ಲಿ 399 ದಿನಗಳ ಅವಧಿಗೆ ಠೇವಣಿ ಇಟ್ಟಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯು ಕುಟುಂಬದಲ್ಲಿ ಸದಸ್ಯರಿಲ್ಲದೇ ಒಬ್ಬಂಟಿಯಾಗಿರುವ ಮಲಿಕಾಬಿಯಂತಹ ವೃದ್ಧೆಯರ ಜೀವನ ಸಂಧ್ಯಾಕಾಲದಲ್ಲಿಯೂ ನೆಮ್ಮದಿಯಿಂದ ಇರಿಸಲು ಕಾರಣವಾಗಿದೆ.

ಪತಿ ಹಾಗೂ ಕುಟುಂಬದ ಸದಸ್ಯರು ಮೃತಪಟ್ಟಿದ್ದು, ಮಲಿಕಾಬಿ ಒಬ್ಬರೇ ಮನೆಯಲ್ಲಿ ವಾಸವಾಗಿದ್ದಾರೆ. 2013–14ನೇ ಸಾಲಿನಿಂದಲೇ ನರೇಗಾ ಜಾಬ್ ಕಾರ್ಡ್ ಮಾಡಿಸಿಕೊಂಡು ಕೂಲಿ ಕೆಲಸ ಮಾಡುತ್ತಾ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. 2014ರಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಬೈಕ್‌ ಮೇಲಿಂದ ಬಿದ್ದು ಕಾಲಿನ ಮೂಳೆ ಮುರಿದಿತ್ತು. ಆ ಸಂದರ್ಭದಲ್ಲಿ ನರೇಗಾ ಕ್ಷೇತ್ರ ಸಹಾಯಕರಾಗಿರುವ ಸದಾಶಿವ ಹೈದ್ರಾ ಅವರೇ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯ ಖರ್ಚನ್ನೂ ಭರಿಸಿದ್ದರು. ಇದು ಮಲಿಕಾಬಿ ಅವರ ಮೇಲೆ ಪರಿಣಾಮ ಬೀರಿತು. ಆ ಬಳಿಕ ಮುಂದೆ ಬರುವ ಆರೋಗ್ಯ ಮತ್ತಿತರ ಸಮಸ್ಯೆಗಳ ಖರ್ಚುಗಳನ್ನು ನಿಭಾಯಿಸಲು ಕೂಲಿ ಹಣವನ್ನು ಕೂಡಿಡಬೇಕು ಎಂದು ತೀರ್ಮಾನಿಸಿದರು. ಅದರಂತೆ ಗ್ರಾಮಸ್ಥರ ನೆರವಿನಿಂದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಇತ್ತೀಚೆಗೆ ₹ 1 ಲಕ್ಷ ಠೇವಣಿ ಇಟ್ಟಿದ್ದಾರೆ.

ADVERTISEMENT

‘2019–20ರಿಂದ ಇತ್ತೀಚಿನವರೆಗೆ ದುಡಿದ ಹಣವನ್ನು ಸಂಗ್ರಹಿಸಿ ಅದನ್ನು ಬ್ಯಾಂಕಿನಲ್ಲಿ ಇರಿಸಿದ್ದೇನೆ. ಮನೆಯ ಖರ್ಚಿಗೆ ತಿಂಗಳಿಗೆ ₹ 800 ವೃದ್ಧಾಪ್ಯ ವೇತನ ಬರುತ್ತದೆ. ಈಗಲೂ ನರೇಗಾ ಕೆಲಸಕ್ಕೆ ಹೋಗುತ್ತಿರುವುದರಿಂದ ಅದರ ಕೂಲಿಯೂ ಬರುತ್ತದೆ’ ಎಂದು ಮಲಿಕಾಬಿ ‘ಪ್ರಜಾವಾಣಿ’ಗೆ ತಿಳಿಸಿದರು.

ನರೇಗಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಹೊನ್ನಕಿರಣಗಿ ಮುಂಚೂಣಿಯಲ್ಲಿದೆ. ಮೆಗಾ ಟೆಕ್ಸ್‌ಟೈಲ್ ಪಾರ್ಕ್ ಬರಲಿರುವ ಸಾವಿರ ಎಕರೆ ಜಾಗದಲ್ಲಿ 65 ಸಾವಿರಕ್ಕೂ ಅಧಿಕ ಮರಗಳನ್ನು ನರೇಗಾ ಯೋಜನೆಯಡಿ ಬೆಳೆಸಲಾಗಿದೆ.

ಯಾರು ಉದ್ಯೋಗ ಬಯಸುತ್ತಾರೋ ಅವರಿಗೆಲ್ಲ ಗ್ರಾ.ಪ‍ಂ. ವತಿಯಿಂದ ತಕ್ಷಣವೇ ಜಾಬ್ ಕಾರ್ಡ್ ನೀಡಲಾಗುತ್ತಿದೆ. ಹೀಗಾಗಿ ಗ್ರಾಮದಲ್ಲಿ 726 ಜಾಬ್‌ ಕಾರ್ಡ್‌ಗಳಿದ್ದು, ಅದರಲ್ಲಿ 440 ಜನ ಸಕ್ರಿಯವಾಗಿ ನರೇಗಾದಡಿ ಕೆಲಸ ಮಾಡುತ್ತಿದ್ದಾರೆ ಎಂದು ನರೇಗಾ ಕ್ಷೆತ್ರ ಸಹಾಯಕ ಸದಾಶಿವ ಹೈದ್ರಾ ಮಾಹಿತಿ ನೀಡಿದರು.

ಕಷ್ಟಕಾಲದಲ್ಲಿ ಯಾರ ಮುಂದೆಯೂ ಕೈಯೊಡ್ಡುವುದು ಬೇಡ ಎಂದು ಹಣವನ್ನು ಠೇವಣಿ ಇಟ್ಟಿದ್ದೇನೆ. ಸ್ವಾವಲಂಬಿ ಜೀವನ ನಡೆಸಲು ನರೇಗಾ ಯೋಜನೆ ಸಹಕಾರಿಯಾಗಿದೆ.

-ಮಲಕಾಬಿ ಹೊನ್ನಕಿರಣಗಿ ಗ್ರಾಮಸ್ಥೆ

127 ದಿನ ಕೂಲಿ ಕೆಲಸ ಮಾಡಿದ ವೃದ್ಧೆ 2021ರಲ್ಲಿ ಬರಗಾಲ ಬಂದಿದ್ದ ಸಂದರ್ಭದಲ್ಲಿ ಸರ್ಕಾರ ನರೇಗಾ ಕೂಲಿ ದಿನಗಳನ್ನು ಒಬ್ಬರಿಗೆ 100ರ ಬದಲಾಗಿ 150 ದಿನಗಳಿಗೆ ಹೆಚ್ಚಿಸಿತ್ತು. ಆಗ ಮಲಕಾಬಿ ತಮ್ಮ ವಯಸ್ಸನ್ನೂ ಲೆಕ್ಕಿಸದೇ 127 ದಿನ ಕೂಲಿ ಕೆಲಸ ಮಾಡಿದ್ದರು.  ವೃದ್ಧರು ಅಂಗವಿಕಲರಿಗೆ ನರೇಗಾ ಕೆಲಸ ನಡೆಯುತ್ತಿರುವ ಜಾಗದಲ್ಲಿ ಮಕ್ಕಳನ್ನು ನೋಡಿಕೊಳ್ಳುವುದು ನೀರು ತಂದುಕೊಡುವಂತಹ ಹಗುರ ಕೆಲಸವನ್ನು ನಿಯೋಜಿಸಲಾಗುತ್ತದೆ. ಮಲಕಾಬಿ ಈ ಕೆಲಸ ಮಾಡುತ್ತಿದ್ದರು. ಜೊತೆಗೆ ಕೃಷಿ ತೋಟಗಾರಿಕೆ ಇಲಾಖೆಯಿಂದ ಕೈಗೊಂಡ ಕಾಮಗಾರಿಗಳಲ್ಲಿ ನೆಲ ಅಗೆಯುವ ಸಸಿ ನೆಡುವ ಕೆಲಸವನ್ನೂ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.