ADVERTISEMENT

ಕಾಳಗಿ: ವೆಂಟಿಲೇಟರ್ ಇಲ್ಲದ ಐಸೋಲೇಷನ್ ವಾರ್ಡ್

ಕಾಳಗಿ ಸಿ.ಎಚ್.ಸಿ: ಕರ್ತವ್ಯ ಒಂದು ಕಡೆಗೆ, ಸಂಬಳ ಇನ್ನೊಂದು ಕಡೆಗೆ!

ಗುಂಡಪ್ಪ ಕರೆಮನೋರ
Published 8 ಏಪ್ರಿಲ್ 2020, 19:30 IST
Last Updated 8 ಏಪ್ರಿಲ್ 2020, 19:30 IST
ಕಾಳಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ
ಕಾಳಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ   

ಕಾಳಗಿ: ಕಲಬುರ್ಗಿಯಲ್ಲಿ ಕೊರೊನಾ ಸೋಂಕು ಕಾಣಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಂಜಾಗ್ರತಾ ಕ್ರಮವಾಗಿ ಎರಡು ಹಾಸಿಗೆಯುಳ್ಳ ಐಸೋಲೇಷನ್ ವಾರ್ಡ್ ಸ್ಥಾಪಿಸಲಾಗಿದೆ. ಆದರೆ ಈ ವಾರ್ಡ್ ವೆಂಟಿಲೇಟರ್ ಇಲ್ಲದೆ ಕೇವಲ ಆಕ್ಸಿಜನ್ ಸಿಲಿಂಡರ್‌ಗೆ ಸೀಮಿತವಾಗಿದೆ.

ಕಾಳಗಿ ತಾಲ್ಲೂಕಿನಲ್ಲೇ ಅತ್ಯಂತ ದೊಡ್ಡ ಆಸ್ಪತ್ರೆ ಎನ್ನಲಾಗುವ ಇಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ 30 ಹಾಸಿಗೆಗಳಿವೆ. 4 ಕಾಯಂ ಮತ್ತು 1 ಆಯುಷ್ (ನಿಯೋಜನೆ) ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿ ಇದ್ದಾರೆ.

ಕೊರೊನಾ ಹಾವಳಿ ಮುನ್ನ ಪ್ರತಿದಿನ ಕನಿಷ್ಠ 200 ಹೊರರೋಗಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಲಾಕ್ ಡೌನ್ ಪರಿಣಾಮ ಈಗ ಆ ಸಂಖ್ಯೆ ಕಡಿಮೆಯಾಗಿದೆ. ಇನ್ನು ತಾಲ್ಲೂಕಿಗೆ ಹಿಂದಿರುಗಿದ 900ಕ್ಕೂ ಹೆಚ್ಚು ವಲಸೆಗಾರರ ಆರೋಗ್ಯ ಸ್ಥಿರವಾಗಿದ್ದರಿಂದ ಅವರು ಸಹ ಈ ಕಡೆ ಸುಳಿಯುತ್ತಿಲ್ಲ. ಹೀಗಾಗಿ ಏನಿದ್ದರೂ ಹೆರಿಗೆ ಮತ್ತು ವಾಂತಿಭೇದಿ ಪ್ರಕರಣಗಳಷ್ಟೇ ಆಸ್ಪತ್ರೆಗೆ ಬರುತ್ತಿದ್ದು, ಅವೂ ವಿರಳವಾಗಿವೆ. ಹಾಗಾಗಿ ಈ ಆರೋಗ್ಯ ಕೇಂದ್ರ ಕೆಲ ದಿನಗಳಿಂದ ರೋಗಿಗಳಿಲ್ಲದೆ ಭಣಗುಟ್ಟುತ್ತಿದೆ.

ADVERTISEMENT

ಸೌಲಭ್ಯ ಏನೇನಿದೆ: ಆಸ್ಪತ್ರೆಯಲ್ಲಿ ಹೆರಿಗೆ, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ, ನವಜಾತ ಶಿಶು ಆರೈಕೆ, ಎಕ್ಸ್-ರೇ, ಜನರೇಟರ್, ಶುದ್ಧ ಕುಡಿಯುವ ನೀರು, ವೈದ್ಯಕೀಯ ಸಾಮಗ್ರಿ, 108 ಆಂಬುಲೆನ್ಸ್ ಸೇವೆ, ನೇತ್ರ ತಪಾಸಣೆ, ಒಳ ಮತ್ತು ಹೊರ ರೋಗಿಗಳ ಚಿಕಿತ್ಸಾ ವಿಭಾಗ ಇವೆ.

ಹೇಳೋರು ಕೇಳೋರು ಇಲ್ಲವೇ: ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹುದ್ದೆ ಕೇವಲ ಒಂದು ಇದೆ. ಔಷಧ ತಜ್ಞರ 2 ಹುದ್ದೆಗಳಲ್ಲಿ ಒಂದು ಖಾಲಿ ಇದೆ. ಹೀಗಿರುವಾಗ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮತ್ತು ಔಷಧ ತಜ್ಞರು ಬೇರೆಡೆಗೆ ನಿಯೋಜನೆ ಆಗಿದ್ದು, ಇಲ್ಲಿ ಯಾರೂ ಇಲ್ಲದಂತಾಗಿದೆ.

2007ರ ಮುಂಚೆ ಈ ಪ್ರದೇಶದಲ್ಲಿ ಇದೊಂದೇ ಆಸ್ಪತ್ರೆ ಇತ್ತು. ಇಲ್ಲಿ ಸಾಕಷ್ಟು ವೈದ್ಯಕೀಯ ಸಿಬ್ಬಂದಿ ಇದ್ದರು. ಬಳಿಕ ಸುತ್ತಲಿನ ಹಲವೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸ್ಥಾಪನೆಯಾಗಿವೆ. ಆಗ ಇಲ್ಲಿರುವ ಕಿರಿಯ ಆರೋಗ್ಯ ಸಹಾಯಕ ಮತ್ತು ಸಹಾಯಕಿಯರನ್ನು ಆ ಎಲ್ಲ ಆರೋಗ್ಯ ಕೇಂದ್ರಗಳಿಗೆ ವರ್ಗಾವಣೆ ಮಾಡಲಾಗಿದೆ. ಆದರೆ ಸಂಬಳ ಬಟವಾಡೆಗೆ ಸರ್ಕಾರ ಇದುವರೆಗೂ ಕ್ರಮ ಕೈಗೊಳ್ಳದ ಕಾರಣ ಅವರೆಲ್ಲ ಎಲ್ಲೇ ಕರ್ತವ್ಯ ನಿರ್ವಹಿಸಿದರೂ ಸಂಬಳ ಪಡೆಯಲು ಇಲ್ಲಿಗೆ ಬರುತ್ತಾರೆ.

ಇನ್ನು ಏನಾಗಬೇಕು: ವಾಹನಗಳಿಗೆ ಪಾರ್ಕಿಂಗ್, ಹಂದಿ ಓಡಾಟಕ್ಕೆ ನಿಯಂತ್ರಣ, ಕಿರು ನೀರು ಸರಬರಾಜು, ಇಸಿಜಿ ವ್ಯವಸ್ಥೆ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.