ADVERTISEMENT

ಬಾಕಿ ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಮೇ 2024, 4:55 IST
Last Updated 22 ಮೇ 2024, 4:55 IST
ಕಲಬುರಗಿಯಲ್ಲಿ ಮಂಗಳವಾರ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದರು
ಕಲಬುರಗಿಯಲ್ಲಿ ಮಂಗಳವಾರ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ಮುಖಂಡರು ಪ್ರತಿಭಟನೆ ನಡೆಸಿದರು   

ಕಲಬುರಗಿ: ಬಾಕಿ ಸಂಬಳ ಪಾವತಿ, ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧೀನದ ವಸತಿ ನಿಲಯಗಳು ಹಾಗೂ ವಸತಿ ಶಾಲೆಗಳ ಹೊರಗುತ್ತಿಗೆ ನೌಕರರ ವೇತನವನ್ನು ಹಲವು ತಿಂಗಳಿಂದ ಬಾಕಿ ಉಳಿಸಿಕೊಳ್ಳಲಾಗಿದೆ. ವೇತನಕ್ಕಾಗಿ ಸಂಬಂಧಿಸಿದ ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂದು ಪ್ರತಿಭಟನಕಾರರು ಬೇಸರ ವ್ಯಕ್ತಪಡಿಸಿದರು.

ಶಾರ್ಪ್‌ ಏಜೆನ್ಸಿಯು ಸಮಾಜ ಕಲ್ಯಾಣ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಮೂರು ವರ್ಷಗಳಿಂದ ಕಡಿಮೆ ವೇತನ ಪಾವತಿಸಿದೆ. ಪ್ರತಿ ತಿಂಗಳು ಪ್ರತಿ ನೌಕರರ ₹1,000 ವೇತನ ಕಡಿತ ಮಾಡಿದೆ. 150 ನೌಕರರ ವೇತನದ ಸ್ಟೇಟ್‌ಮೆಂಟ್‌ ಸಮೇತ ಜಂಟಿ ನಿರ್ದೆಶಕರು ಮತ್ತು ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ‘ಕ್ರೈಸ್’ ಅಧೀನದ ಗುತ್ತಿಗೆ ನೌಕರರ ಇಪಿಎಫ್‌, ಇಎಸ್‌ಐ ಹಣವನ್ನು ಪವಾರ್ ಏಜೆನ್ಸ್ ಪಾವತಿಸದೆ ವಂಚಿಸಿದೆ ಎಂದು ಆರೋಪಿಸಿದರು.

ADVERTISEMENT

ಬಾಕಿ ವೇತನ, ಕಡಿತ ಮಾಡಿಕೊಂಡ ಹಣದ ಜತೆಗೆ ಅರಿಯರ್ಸ್ ಸಹ ನೀಡಬೇಕು. ಇಪಿಎಫ್, ಇಎಸ್ಐ ತುಂಬದ ಏಜೆನ್ಸಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಏಜೆನ್ಸಿಯ ಆದೇಶ ರದ್ದು ಪಡಿಸಿ ಮತ್ತೆ ಟೆಂಡರ್ ಕರೆಯಬೇಕು. ಐದು ವರ್ಷಕ್ಕೂ ಹೆಚ್ಚು ದುಡಿದ ನೌಕರರನ್ನು ಕೆಲಸದಿಂದ ತೆಗೆಯಬಾರದು. ಕಾಯಂ ನೌಕರರ ಸ್ಥಳದಲ್ಲಿ ಕಾಯಂ ನೌಕರರ ವರ್ಗಾವಣೆ ಮಾಡಬೇಕು. ವಾರಕ್ಕೊಂದು ರಜೆಯನ್ನು ತಪ್ಪದೇ ಕೊಡಬೇಕು. ‘ಕ್ರೈಸ್’ ಅಧೀನದ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ನೌಕರರ ಮಕ್ಕಳಿಗೂ ಆದ್ಯತೆ ಕೊಡಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷ ಮೇಘರಾಜ ಕಠಾರೆ, ಜಿಲ್ಲಾ ಕಾರ್ಯದರ್ಶಿ ಕಾಶಿನಾಥ ಕಮಕನೂರ, ಮುಖಂಡರಾದ ಬಾಬು ಹೊಸಮನಿ, ಮಾಪಣ್ಣ ಜಾನಕರ್, ನಾಗರತ್ನ ಮದನಕರ್, ರವಿಚಂದ್ರ ಯರಗೋಳ, ಪರಶುರಾಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.