ಜೈಲು(ಸಾಂದರ್ಭಿಕ ಚಿತ್ರ)
ಕಲಬುರಗಿ: ಮಹಿಳೆಗೆ ಮಾನಸಿಕ ಕಿರುಕುಳ ನೀಡಿ ಆಕೆಯ ಆತ್ಮಹತ್ಯೆಗೆ ಕಾರಣರಾಗಿದ್ದು ಸಾಬೀತಾಗಿದ್ದರಿಂದ ಪತಿ ಹಾಗೂ ಅತ್ತೆಗೆ ಮಂಗಳವಾರ ಇಲ್ಲಿನ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿದೆ.
ಕಲಬುರಗಿ ತಾಲ್ಲೂಕಿನ ಹರಸೂರ ಗ್ರಾಮದ ಕೃಷ್ಣ (30) ಹಾಗೂ ಸುನೀತಾಬಾಯಿ (60) ಶಿಕ್ಷೆಗೆ ಗುರಿಯಾದವರು.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ವಿಶೇಷ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರಿಗೂ ಏಳು ವರ್ಷ ಸಾದಾ ಶಿಕ್ಷೆ ಹಾಗೂ ತಲಾ ₹ 25 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ವಿವರ: 2017ರ ನವೆಂಬರ್ 7ರಂದು ಹರಸೂರ ಗ್ರಾಮದಲ್ಲಿ ಮಹಿಳೆಯು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಮ್ಮ ಮಗಳಿಗೆ ವರದಕ್ಷಿಣೆ ತರುವಂತೆ ಮಾನಸಿಕ ಕಿರುಕುಳ ನೀಡಿದ್ದು, ಆಕೆಯ ಸಾವಿಗೆ ಆತನ ಪತಿ ಕೃಷ್ಣ ಮತ್ತು ಆಕೆಯ ಅತ್ತೆ ಸುನೀತಾಬಾಯಿ ಅವರೇ ಕಾರಣ ಎಂದು ಮೃತಳ ತಂದೆ ದೂರು ನೀಡಿದ್ದು, ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾಧಿಕಾರಿಗಳಾದ ಪ್ರದೀಪ ಬಿಸೆ, ಎ.ವಾಜಿದ್ ಪಟೇಲ್ ಹಾಗೂ ಎಸ್.ಎಸ್.ಹುಲ್ಲೂರು ಅವರು ಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಕಲಬುರಗಿ ತಹಶೀಲ್ದಾರ್ ಅಶೋಕ ಅವರು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೃತಳ ಹೇಳಿಕೆ ಪ್ರಕರಣದಲ್ಲಿ ಮಹತ್ವದ ಅಂಶವಾಗಿತ್ತು. ರಾಜ್ಯ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಹಯಾಳಪ್ಪ ಎನ್.ಬಳಬಟ್ಟಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.