ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿಪಕ್ಷದ ನಾಯಕ, ಶಾಸಕ ಜನಾರ್ದನ ರೆಡ್ಡಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಬೇಕು ಎಂದು ಅಮಿತ್ ಶಾ ಅವರಿಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ದೆಹಲಿಗೆ ಹೋಗಿದ್ದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜನಾರ್ದನ ರೆಡ್ಡಿ ಅವರ ಕುರಿತಾಗಿ ನನ್ನೊಂದಿಗೆ ಚರ್ಚಿಸಿದರು. ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದು ನಾನು ನನ್ನ ಅಭಿಪ್ರಾಯ ತಿಳಿಸಿದ್ದೇನೆ. ರೆಡ್ಡಿ ಈ ಭಾಗದಲ್ಲಿ ಶಕ್ತಿ ಇರುವ ನಾಯಕ. ಅವರು ಪಕ್ಷಕ್ಕೆ ಬಂದರೆ ಬಿಜೆಪಿಗೆ ಒಳ್ಳೆಯದಾಗಲಿದೆ' ಎಂದರು.
'ಬಿ.ಎಸ್ ಯಡಿಯೂರಪ್ಪ, ವಿಜಯೇಂದ್ರ ಅವರಿಗೂ ಇದೇ ಅಭಿಪ್ರಾಯ ನೀಡಿದ್ದೇನೆ' ಎಂದು ಅವರು ವಿವರಿಸಿದರು.
'ನಮ್ಮಿಬ್ಬರ ವೈಮನಸ್ಸು ಏನೇ ಇರಬಹುದು. ಬೇರೆ ಬೇರೆ ಕಾರಣಕ್ಕೆ ದೂರವಿರಬಹುದು. ಆದರೆ ಅವರು ಪಕ್ಷಕ್ಕೆ ಬಂದರೆ ಒಟ್ಟಾಗಿ ಕೆಲಸ ಮಾಡುತ್ತೇವೆ. ಪಕ್ಷದ ವಿಚಾರವಾಗಿ ಒಗ್ಗೂಟ್ಟಾಗಿರುತ್ತೇವೆ' ಎಂದರು.
ರಾಜ್ಯಸಭಾ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರು ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ಅದು ಅವರ ಪಕ್ಷದ ನಿರ್ಧಾರ. ಅದರ ಬಗ್ಗೆ ನಾನು ಮಾತನಾಡಲಾರೆ' ಎಂದರು.
ದೇವೇಂದ್ರಪ್ಪಗೇ ಟಿಕೆಟ್ ಕೊಟ್ಟರೆ ಅಭ್ಯಂತರವಿಲ್ಲ: ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಹಾಲಿ ಸಂಸದ ದೇವೇಂದ್ರಪ್ಪ ಅವರಿಗೇ ಕೊಟ್ಟರೆ ಅಭ್ಯಂತರವಿಲ್ಲ. ಅವರ ಪರವಾಗಿ ನಾವೆಲ್ಲ ದುಡಿಯುತ್ತೇವೆ. ಒಂದು ವೇಳೆ ನನಗೆ ನೀಡಿದರೂ ಸ್ಪರ್ಧಿಸುತ್ತೇನೆ ಎಂದು ಶ್ರೀರಾಮುಲು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.