ಕಲಬುರಗಿ: ‘ಕೃಷಿಕರ ಜಮೀನು, ಮಠ–ಮಂದಿರಗಳ ಆಸ್ತಿಗಳ ಪಹಣಿಯಲ್ಲಿನ ವಕ್ಫ್ ಮಂಡಳಿಯ ಹೆಸರನ್ನು ನವೆಂಬರ್ 20ರ ಒಳಗೆ ಶಾಶ್ವತವಾಗಿ ತೆಗೆದುಹಾಕದಿದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡಿ, ವಿಧಾನಸೌಧಕ್ಕೂ ಮುತ್ತಿಗೆ ಹಾಕಬೇಕಾಗುತ್ತದೆ’ ಎಂದು ಬಾಗಲಕೋಟೆಯ ಶ್ರದ್ಧಾನಂದ ಮಠದ ಜಗದೀಶಾನಂದ ಸ್ವಾಮೀಜಿ ಮತ್ತು ಮಕಣಾಪುರ ಮಠದ ಸೋಮೇಶ್ವರ ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಗದೀಶಾನಂದ ಸ್ವಾಮೀಜಿ, ‘ನೋಟಿಸ್ ಹಿಂಪಡೆಯುವುದಾಗಿ ಮುಖ್ಯಮಂತ್ರಿ ಖುದ್ದಾಗಿ ಹೇಳಿದ್ದರೂ ಪಹಣಿಯಲ್ಲಿ ವಕ್ಫ್ ಹೆಸರು ಕಾಣಿಸುತ್ತಿದೆ. ಪ್ರತಿ ಪಹಣಿಯೂ ವಾರಸುದಾರರ ಹೆಸರಿನಲ್ಲಿ ಮಾತ್ರ ಇರಬೇಕು. ಆದಷ್ಟು ಬೇಗನೆ ಇದು ಕಾರ್ಯರೂಪಕ್ಕೆ ಬರಬೇಕು. ರಾಜ್ಯದಾದ್ಯಂತ ಹೋರಾಟಕ್ಕೂ ಸಿದ್ಧತೆ ನಡೆಯುತ್ತಿದೆ’ ಎಂದರು.
‘ಒಂದು ಸಮುದಾಯದವರ ತುಷ್ಟೀಕರಣ ಮಾಡಿ, ಇಡೀ ಸಮಾಜವನ್ನು ಬಲಿಕೊಡುವಂತಹ ಕಾನೂನುಬಾಹಿರ ವ್ಯವಸ್ಥೆಯನ್ನು ಕೂಡಲೇ ಹಿಂಪಡೆಯಬೇಕು. ಆಗಿರುವ ತಪ್ಪನ್ನು ಮುಖ್ಯಮಂತ್ರಿ ಸರಿಪಡಿಸಿಕೊಂಡು, ರೈತರ ಹಾಗೂ ಮಠಾಧೀಶರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.
ಸೋಮೇಶ್ವರ ಸ್ವಾಮೀಜಿ ಮಾತನಾಡಿ, ‘ರೈತರ ಹಾಗೂ ಮಠ–ಮಂದಿರಗಳನ್ನು ಉಳಿಸಲು ಮೂಲ ಬೇರನ್ನೇ (ವಕ್ಫ್ ಮಂಡಳಿ) ಕಿತ್ತೆಸೆಯುವುದು ಒಳ್ಳೆಯದು. ವಕ್ಫ್ ಮಂಡಳಿ ಇರಲೇಬಾರದು. ಅದನ್ನು ರದ್ದು ಮಾಡಬೇಕು’ ಎಂದು ಒತ್ತಾಯಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, ‘ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ವಕ್ಫ್ ಮಂಡಳಿಯು ಆಸ್ತಿಯನ್ನು ಹಿಂದಕ್ಕೆ ಕೊಡದೆ ಇದ್ದರೆ ಸ್ವಾಮೀಜಿಗಳ ನೇತೃತ್ವದಲ್ಲಿ ರಕ್ತಕ್ರಾಂತಿ ಆದೀತು’ ಎಂದು ಎಚ್ಚರಿಸಿದರು.
‘ವಕ್ಫ್ ಆಸ್ತಿಯನ್ನು ಮಲ್ಲಿಕಾರ್ಜುನ ಖರ್ಗೆ, ಖಮರುಲ್ ಇಸ್ಲಾಂ, ಸಿ.ಎಂ. ಇಬ್ರಾಹಿಂ, ರಹೀಂ ಖಾನ್ ಸೇರಿದಂತೆ ಹಲವು ಹಿರಿಯ ರಾಜಕಾರಣಿಗಳು ಲೂಟಿ ಮಾಡಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆಯ ಸಂಸತ್ತಿನ ಜಂಟಿ ಸದನ ಸಮಿತಿಯ ಮುಂದೆ ಅನ್ವರ್ ಮಾಣಿಪ್ಪಾಡಿ ವರದಿ ಇರಿಸಿ ಚರ್ಚಿಸಿದರೆ ಎಲ್ಲರ ವಂಚನೆಯೂ ಹೊರ ಬರುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.