ADVERTISEMENT

ಕಾಳಗಿ | ಪಿಯು ಕಾಲೇಜು ಐದು; ಸಮಸ್ಯೆ ಹತ್ತು–ಹಲವು

ಕಾಳಜಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾಯಂ ಉಪನ್ಯಾಸಕರ ಕೊರತೆ, ಕಲಿಕೆಗೆ ಹಿನ್ನಡೆ

ಗುಂಡಪ್ಪ ಕರೆಮನೋರ
Published 30 ಜೂನ್ 2024, 6:56 IST
Last Updated 30 ಜೂನ್ 2024, 6:56 IST
ಕಾಳಗಿಯಲ್ಲಿ ಹಾಳುಬಿದ್ದಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡ
ಕಾಳಗಿಯಲ್ಲಿ ಹಾಳುಬಿದ್ದಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೊಸ ಕಟ್ಟಡ   

ಕಾಳಗಿ: ತಾಲ್ಲೂಕಿನಲ್ಲಿ ಒಟ್ಟು ಒಂಬತ್ತು ಪದವಿಪೂರ್ವ ಕಾಲೇಜುಗಳಿದ್ದು, ಈ ಪೈಕಿ ಐದು ಸರ್ಕಾರಿ ಕಾಲೇಜುಗಳಿವೆ. ಅವುಗಳಲ್ಲಿ ಕಾಳಗಿ, ಶ್ರೀಕ್ಷೇತ್ರ ರೇವಗ್ಗಿಗುಡ್ಡ ಮತ್ತು ತೆಂಗಳಿ ಕಾಲೇಜು ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೆ ಬಂದರೆ, ಹೆಬ್ಬಾಳ ಮತ್ತು ಮಾಡಬೂಳ ಕಾಲೇಜು ಚಿತ್ತಾಪುರ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿವೆ.

ಈ ಎಲ್ಲಾ ಕಾಲೇಜುಗಳು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿವೆ. ಮತ್ತೊಂದೆಡೆ, ತಾಲ್ಲೂಕಿನ ಕೋಡ್ಲಿ ಮತ್ತು ಕೊಡದೂರ ಗ್ರಾಮಸ್ಥರ ಬಹುದಿನಗಳ ಕಾಲೇಜು ಬೇಡಿಕೆ ಇನ್ನೂ ಈಡೇರಿಲ್ಲ.

ಕಾಳಗಿಯಲ್ಲಿ ನಾಲ್ಕು ದಶಕಗಳ ಹಿಂದಿನಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿದೆ. ಪಿಯು ಕಾಲೇಜು ಹಾಗೂ ಸರ್ಕಾರಿ ಪ್ರೌಢಶಾಲೆ ಒಂದೇ ಸೂರಿನಲ್ಲಿವೆ. ಈಚೆಗೆ ಕಟ್ಟಿಸಿದ ಕಾಲೇಜಿನ ಸ್ವತಂತ್ರ ಕಟ್ಟಡ ಕೋರ್ಟ್ ಸ್ಥಾಪನೆ ನೆಪದಲ್ಲಿ ಉದ್ಘಾಟನೆಯಾಗದೆ ಹಾಳು ಬಿದ್ದಿದೆ.

ADVERTISEMENT

ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದಲ್ಲಿ ಸುಮಾರು 480 ವಿದ್ಯಾರ್ಥಿಗಳಿದ್ದಾರೆ. ಕನ್ನಡ, ಅರ್ಥಶಾಸ್ತ್ರಕ್ಕೆ ಕಾಯಂ ಬೋಧಕರಿಲ್ಲ. ಎಫ್‌ಡಿಎ, ಸೇವಕ, ಗ್ರಂಥಪಾಲಕ ಹುದ್ದೆ ಮರೀಚಿಕೆಯಾಗಿವೆ. ‘ರಾತ್ರಿ ಕಿಡಿಗೇಡಿಗಳ ದುರಾಚಾರದಿಂದ ಸುರಕ್ಷತೆಗೆ ಅಪಾಯದ ಎದುರಾಗಿದೆ. ಏನೇ ಪ್ರಯತ್ನ ಮಾಡಿದರೂ ತಡೆಯಲು ಸಾಧ್ಯವಾಗುತ್ತಿಲ್ಲ’ ಎಂಬುದು ಸಿಬ್ಬಂದಿಯ ಅಸಹಾಯಕತೆ.

ಶ್ರೀಕ್ಷೇತ್ರ ರೇವಗ್ಗಿ ರೇವಣಸಿದ್ದೇಶ್ವರ ಗುಡ್ಡದಲ್ಲಿ ಕಾಲೇಜು ಕಟ್ಟಡಕ್ಕೇನೂ ಬರವಿಲ್ಲ. ಆದರೆ, ಕಾಯಂ ಉಪನ್ಯಾಸಕರ ಕೊರತೆ ಇದೆ. ಪ್ರಾಚಾರ್ಯ ಸೇರಿ ಐವರು ಸಿಬ್ಬಂದಿ ಮಾತ್ರ ಕಾಯಂ ಇದ್ದಾರೆ. ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಭೌತ ವಿಜ್ಞಾನ, ರಸಾಯನ ವಿಜ್ಞಾನ, ಗಣಿತ ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕರ ಮತ್ತು ಸಿಪಾಯಿ, ಕ್ಲರ್ಕ್ ಹುದ್ದೆ ಖಾಲಿ ಇವೆ. 6 ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದು, ಒಟ್ಟು 101 ವಿದ್ಯಾರ್ಥಿಗಳು ಓದುತ್ತಿದ್ದಾರೆ.

‘ವಾಣಿಜ್ಯಶಾಸ್ತ್ರ ಉಪನ್ಯಾಸಕ ಹುದ್ದೆ ಮಂಜೂರಾಗಬೇಕು. ವಿಜ್ಞಾನ ವಿಭಾಗ ಇರುವುದರಿಂದ ಪೂರ್ಣಪ್ರಮಾಣದ ಸಿಬ್ಬಂದಿ ಅಗತ್ಯವಿದೆ. ಈ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆ ಬಂದಿದ್ದರಿಂದ ವಿದ್ಯಾರ್ಥಿಗಳ ಕೊರತೆಯಾಗಿದೆ’ ಎನ್ನುತ್ತಾರೆ ಪ್ರಾಚಾರ್ಯ ರಾಜು ಗಂಗಾಧರ.

ತೆಂಗಳಿ ಗ್ರಾಮದಲ್ಲಿ ಒಂದೇ ಸರ್ಕಾರಿ ಪ್ರೌಢ ಶಾಲೆಯಿದೆ. ಈ ಶಾಲೆಯ ವಿದ್ಯಾರ್ಥಿಗಳೆಲ್ಲಾ ಹರಿದುಹಂಚಿ ಕಾಳಗಿ, ಚಿತ್ತಾಪುರ, ಕಲಬುರಗಿ, ಸೇಡಂನತ್ತ ಹೋಗುತ್ತಾರೆ. ಉಳಿದ ಬೆರಳೆಣಿಕೆಯ ವಿದ್ಯಾರ್ಥಿಗಳು ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಏಕೈಕ ಕಲಾ ವಿಭಾಗಕ್ಕೆ ಪ್ರವೇಶ ಪಡೆಯುತ್ತಾರೆ. ಹೀಗಾಗಿ ಇಲ್ಲಿ ಪ್ರಥಮ, ದ್ವಿತೀಯ ಪಿಯುಸಿ ಸೇರಿ ಕೇವಲ 32 ವಿದ್ಯಾರ್ಥಿಗಳಿದ್ದಾರೆ. ಕಟ್ಟಡ ದೊಡ್ಡದಿದೆ. ಕಾಂಪೌಂಡ್‌ ಇಲ್ಲ.

ಕಾಲೇಜಿನ ಹಿಂಭಾಗದಲ್ಲಿ ಜಾಲಿಮುಳ್ಳಿನ ಗಿಡಗಂಟಿ, ಮುಂಭಾಗದಲ್ಲಿ ಹುಲ್ಲು ಬೆಳೆದಿದ್ದು, ವಿಷಜಂತುಗಳಿಗೆ ಆಶ್ರಯ ನೀಡಿದಂತಾಗಿದೆ. ಪ್ರಾಚಾರ್ಯ, ಕ್ಲರ್ಕ್, ಸಿಪಾಯಿ ಹುದ್ದೆ ಖಾಲಿ ಇದ್ದು, ಇತಿಹಾಸದ ಉಪನ್ಯಾಸಕ ಅತಿಥಿಯಾಗಿದ್ದಾರೆ.

ಇನ್ನು, ಚಿತ್ತಾಪುರ ಕ್ಷೇತ್ರದ ಮಾಜಿ ಶಾಸಕ ವಿಶ್ವನಾಥ ಪಾಟೀಲ ತವರು ಹೆಬ್ಬಾಳ ಗ್ರಾಮದಲ್ಲಿ ಎಲ್ಲಾ ಸೌಲಭ್ಯ ಹೊಂದಿರುವ ಕಾಲೇಜಿದೆ. ಆದರೆ, ಪ್ರಾಚಾರ್ಯ ಹುದ್ದೆ ಮಾತ್ರ ಪ್ರಭಾರವಿದೆ. ಭವ್ಯ ಕಟ್ಟಡ, ಕಾಂಪೌಂಡ್ ಗೋಡೆ, ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ ಹೀಗೆ ಏನೆಲ್ಲ ವ್ಯವಸ್ಥೆಯಿದೆ.

ಇದೇ ಪರಿಸರದಲ್ಲಿ ಸರ್ಕಾರಿ ಪ್ರೌಢಶಾಲೆಯೂ ಇದೆ. ಈ ವಿದ್ಯಾರ್ಥಿಗಳಲ್ಲೇ ಎಸ್.ಎಸ್.ಎಲ್.ಸಿ ಮುಗಿಸಿದ ಒಂದಿಷ್ಟು ವಿದ್ಯಾರ್ಥಿಗಳು ಮಾತ್ರ ಇಲ್ಲಿ ಪ್ರವೇಶ ಪಡೆಯುತ್ತಾರೆ. ಕಲಬುರಗಿಗೆ ಹೋಗಿಬರಲು ಅನುಕೂಲ ಇದ್ದಕಾರಣ ಬಹಳಷ್ಟು ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರಕ್ಕೆ ತೆರಳುತ್ತಾರೆ. ಹೀಗಾಗಿ ಇಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದ್ದು 2023-24ರಲ್ಲಿ ಕೇವಲ 22 ವಿದ್ಯಾರ್ಥಿಗಳಿದ್ದರು.

ಮಾಡಬೂಳದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಇದೆ. ಒಂದೇ ಸೂರಿನಡಿ ಎಲ್.ಕೆ.ಜಿಯಿಂದ ದ್ವಿತೀಯ ಪಿಯುಸಿ ಶಿಕ್ಷಣದ ವ್ಯವಸ್ಥೆಯಿದೆ. ಕಾಲೇಜಿಗೆ ಪ್ರತ್ಯೇಕ ಸಿಬ್ಬಂದಿ ಇದ್ದಾರೆ. ಕಲಾ, ವಾಣಿಜ್ಯ ಸೇರಿ 124 ವಿದ್ಯಾರ್ಥಿಗಳಿದ್ದು, ಇಬ್ಬರು ಅತಿಥಿ ಉಪನ್ಯಾಸಕರಿದ್ದಾರೆ. ಶೌಚಾಲಯ, ನೀರಿನ ಸಮಸ್ಯೆ ಬಹಳಷ್ಟಿದೆ. ರಾತ್ರಿ ವೇಳೆ ಬಾಗಿಲು, ಕಿಟಕಿ ಹಾಳು ಮಾಡುವವರ ಸಂಖ್ಯೆ ಹೆಚ್ಚಿದೆ. ವಾಚ್‌ಮನ್ ವ್ಯವಸ್ಥೆ ಆಗಬೇಕಿದೆ. ಅವ್ಯವಸ್ಥೆ ಸುಧಾರಿಸುವ ಬಗ್ಗೆ ಜನಪ್ರತಿನಿಧಿಗಳಿಗೆ ಪತ್ರ ಬರೆದಿದ್ದೇವೆ, ಆದರೆ ಪ್ರಯೋಜನವಾಗಿಲ್ಲ’ ಎಂದು ಪ್ರಾಂಶುಪಾಲೆ ಪ್ರಭಾವತಿ ಪಾಟೀಲ ಅಸಮಾಧಾನ ಹೊರಹಾಕಿದರು.

ಕಾಳಗಿ ತಾಲ್ಲೂಕಿನ ತೆಂಗಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ಹಿಂಭಾಗ ಜಾಲಿಮುಳ್ಳು ಬೆಳೆದಿರುವುದು
ಶ್ರೀಶೈಲಪ್ಪ ಬೋನಾಳ
ಮಲ್ಲಪ್ಪ ಚಿಂತಕೋಟಿ
ಮಲಕಣ್ಣಗೌಡ ಪಾಟೀಲ
ಮಹೇಶ ಕೋಣಿನ್

ರಾತ್ರಿ ವೇಳೆಯಲ್ಲಿ ಬಾಗಿಲು ಕಿಟಕಿ ಕೀಲಿ ಮುರಿಯುವರ ಸಂಖ್ಯೆ ಕಡಿಮೆಯಾದರೆ ಕಾಲೇಜು ಇನ್ನೂ ಉತ್ತಮವಾದ ಬೆಳವಣಿಗೆ ಸಾಧ್ಯವಾಗಲಿದೆ

–ಶ್ರೀಶೈಲಪ್ಪ ಬೋನಾಳ ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಕಾಳಗಿ

ನಮ್ಮೂರ ಸುತ್ತಲೂ ಬಹಳಷ್ಟು ಪ್ರೌಢಶಾಲೆಗಳಿವೆ ಇಲ್ಲೊಂದು ಪದವಿಪೂರ್ವ ಕಾಲೇಜು ಸ್ಥಾಪಿಸಬೇಕೆಂಬುದು ಬಹುದಿನಗಳ ಬೇಡಿಕೆ. ಈ ತನಕ ಅದು ಈಡೇರಿಲ್ಲ

–ಮಲ್ಲಪ್ಪ ಚಿಂತಕೋಟಿ ಗ್ರಾ.ಪಂ. ಸದಸ್ಯ ಕೋಡ್ಲಿ

ವೃತ್ತಿಪರ ಕೋರ್ಸ್‌ಗಳ ಕಡೆ ವಿದ್ಯಾರ್ಥಿಗಳು ಹೆಚ್ಚಿನ ಒಲವು ತೋರುತ್ತಿದ್ದು ಕಲಾ ವಿಭಾಗಕ್ಕೆ ದಾಖಲಾತಿ ಕಡಿಮೆಯಾಗುತ್ತಿದೆ.

–ಮಲಕಣ್ಣಗೌಡ ಪಾಟೀಲ ಪ್ರಭಾರ ಪ್ರಾಚಾರ್ಯ ಸರ್ಕಾರಿ ಪಿಯು ಕಾಲೇಜು ಹೆಬ್ಬಾಳ

ನಮ್ಮೂರಿನ ಕಾಲೇಜಿಗೆ ಆಟದ ಮೈದಾನ ಕಾಂಪೌಂಡ್ ನಿರ್ಮಿಸಬೇಕು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುವಂತೆ ಸಿಬ್ಬಂದಿ ಪ್ರಯತ್ನಿಸಬೇಕು

–ಮಹೇಶ ಕೋಣಿನ್ ತೆಂಗಳಿ ಯುವಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.