ADVERTISEMENT

ಕಲಬುರಗಿ: ಮದ್ಯಪ್ರಿಯರ ‘ಹಿಮ್ಮತ್ ಕಾ ಸಿರಫ್’!

ನಸುಕಿನ 5.30ರಿಂದಲೇ ‘ವ್ಯಾಪಾರ’; ಪ್ರಯಾಣಿಕರು, ಕಾರ್ಮಿಕರೇ ಟಾರ್ಗೆಟ್

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 5:24 IST
Last Updated 18 ಜುಲೈ 2024, 5:24 IST
ಕಲಬುರಗಿ ನಗರದ ರೈಲುನಿಲ್ದಾಣ ರಸ್ತೆಯಲ್ಲಿರುವ ಅಂಚೆ ಕಚೇರಿ ‍ಪಕ್ಕದಲ್ಲಿ ನಸುಕಿನ 5.45ಕ್ಕೆ ಅಕ್ರಮವಾಗಿ ಮದ್ಯ ಮಾರುತ್ತಿರುವುದು.
ಕಲಬುರಗಿ ನಗರದ ರೈಲುನಿಲ್ದಾಣ ರಸ್ತೆಯಲ್ಲಿರುವ ಅಂಚೆ ಕಚೇರಿ ‍ಪಕ್ಕದಲ್ಲಿ ನಸುಕಿನ 5.45ಕ್ಕೆ ಅಕ್ರಮವಾಗಿ ಮದ್ಯ ಮಾರುತ್ತಿರುವುದು.   

ಕಲಬುರಗಿ: ‘ಆವೋ ಬಾಯ್ ಆವೋ... ಸಿರ್ಫ್ ಸಾಠ್‌ ರೂಪಾಯಿ ಮೇ ಹಿಮ್ಮತ್ ಕಾ ಸಿರಫ್...’ ಇದು ಯಾವುದೋ ರಸ್ತೆ ಬದಿಯಲ್ಲಿ ಆಯುರ್ವೇದ ಔಷಧ ಮಾರುವ ಟೆಂಟ್‌ನ ಮೈಕ್‌ನಿಂದ ಕೇಳಿಬಂದ ಧ್ವನಿ ಎಂದುಕೊಂಡಿದ್ದರೆ ನಿಮ್ಮ ಊಹೆ ನೂರಕ್ಕೆ ನೂರು ತಪ್ಪು. 

ನಿತ್ಯ ಬೆಳಿಗ್ಗೆ ನಗರದ ರೈಲುನಿಲ್ದಾಣ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವವರು ಮದ್ಯಪ್ರಿಯರನ್ನು ಸೆಳೆಯುವ, ಆಹ್ವಾನಿಸುವ ಪರಿ ಇದು. ಸ್ಟೇಶನ್‌ ಬಜಾರ್ ಪೊಲೀಸ್‌ ಠಾಣೆಯ ಕೂಗಳತೆ, ಕಣ್ಣಳತೆ ದೂರದಲ್ಲೇ ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಬೆಳ್ಳಿಗ್ಗೆ ರೈಲಿಗೆ ಬಂದು ನಗರದಲ್ಲಿ ಇಳಿಯುವ ಪ್ರಯಾಣಿಕರು, ಕಾರ್ಮಿಕರೇ ಮದ್ಯ ಅಕ್ರಮ ಮಾರಾಟಗಾರರ ಪ್ರಮುಖ ಗಿರಾಕಿಗಳು.

ನಸುಕಿನಲ್ಲೇ ಹತ್ತಾರು ಸಾವಿರ ರೂಪಾಯಿ ವ್ಯಾಪಾರ: ನಸುಕಿನ 5.30ರಿಂದಲೇ ಮದ್ಯದ ಪ್ಯಾಕ್‌ಗಳು ತುಂಬಿದ ಚೀಲವನ್ನು ಪಕ್ಕದಲ್ಲಿಟ್ಟುಕೊಂಡು ತಳ್ಳುಗಾಡಿ ಮೇಲೆ ಕುಳಿತುಕೊಳ್ಳುವ ವ್ಯಾಪಾರಿ ನೋಡಲು ಪ್ರಯಾಣಿಕರಂತೆ ಕಾಣುತ್ತಾರೆ. ಹತ್ತಿರ ಬರುತ್ತಿದ್ದಂತೆ ‘ಹಿಮ್ಮತ್ ಕಾ ಸಿರಫ್’ ಖರೀದಿಗೆ ಆಹ್ವಾನ ಕೊಡುತ್ತಾರೆ. ಒಬ್ಬ ಹಣ ಪಡೆದು ಚಿಲ್ಲರೆ ಕೊಟ್ಟರೆ ಇನ್ನೊಬ್ಬ ಮದ್ಯದ ಪ್ಯಾಕೆಟ್‌ ಕೊಡುತ್ತಾನೆ.

ADVERTISEMENT

ಸಾರ್ವಜನಿಕರು ‘ಪ್ರಜಾವಾಣಿ’ಗೆ ಕಳುಹಿಸಿದ ವಿಡಿಯೊದಲ್ಲಿ ಈ ದೃಶ್ಯದಲ್ಲಿ ಸೆರೆಯಾಗಿದೆ. ಅಕ್ರಮವಾಗಿ ಮದ್ಯ ಮಾರುತ್ತಿರುವ ಸಮಯದಲ್ಲೇ ಪೊಲೀಸ್‌ ವಾಹನವೊಂದು ಹೋಗುವ ದೃಶ್ಯವೂ ವಿಡಿಯೊದಲ್ಲಿದೆ.

ಹಿಂದಿನ ಚಹಾ ಅಂಗಡಿಯಲ್ಲಿ ಗ್ಲಾಸ್ ಮತ್ತು ನೀರಿನ ಪ್ಯಾಕೆಟ್‌ಗಳು ಸಿಗುವುದರಿಂದ ಅನೇಕರು ರಸ್ತೆ ಬದಿಯೇ ಕುಳಿತು ಕುಡಿದು ಪ್ಯಾಕೆಟ್‌, ಗ್ಲಾಸ್‌ಗಳನ್ನು ಅಲ್ಲೇ ಬಿಸಾಕಿ ಹೋಗುತ್ತಾರೆ.

ಪರವಾನಗಿ ಪಡೆದು ಅಧಿಕೃತವಾಗಿ ಮದ್ಯ ಮಾರಾಟ ಮಾಡುವ ಮಳಿಗೆಗಳು ಸಾಮಾನ್ಯವಾಗಿ 10 ಗಂಟೆ ಮೇಲೆಯೇ ತೆರೆಯುತ್ತವೆ. ಅಷ್ಟು ಹೊತ್ತಿಗಾಗಲೇ ಅಕ್ರಮವಾಗಿ ಮಾರಾಟ ಮಾಡುವವರು ಹತ್ತಾರು ಸಾವಿರ ರೂಪಾಯಿ ವ್ಯಾಪಾರ ಮಾಡಿ ಮನೆ ಕಡೆ ಮುಖ ಮಾಡಿರುತ್ತಾರೆ.

ಇವರು ಒರಿಜಿನಲ್‌ ಚಾಯ್ಸ್‌ ಒಂದೇ ಬ್ರಾಂಡ್‌ನ (90 ಎಂಎಲ್‌) ಪ್ಯಾಕೆಟ್‌ ಮಾತ್ರ ಮಾರಾಟ ಮಾಡುತ್ತಾರೆ. ಇದರ ಎಂಆರ್‌ಪಿ ₹39.97 ಇದ್ದರೆ ಇವರು ₹60ನಂತೆ ಮಾರಾಟ ಮಾಡುತ್ತಿದ್ದಾರೆ. ಪರವಾನಗಿ ಪಡೆದ ಮದ್ಯದ ಅಂಗಡಿಗಳಲ್ಲಿ ಇದರ ಬೆಲೆ ₹45 ಇದೆ.

‘ನಮಗೆ ಇದರ ಬಗ್ಗೆ ಮಾಹಿತಿ ಇರಲಿಲ್ಲ. ಬೆಳಿಗ್ಗೆ 10 ಗಂಟೆವರೆಗೂ ಬಾರ್‌ ತರೆಯಲು ಅವಕಾಶವಿಲ್ಲ. ದಾಳಿ ಮಾಡಿಸುತ್ತೇವೆ’ ಎಂದು ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸ್ ವಾಹನ ಪಕ್ಕದಲ್ಲೇ ಹೋದರೂ ಭಯವಿಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು
ಚಹಾ ಅಂಗಡಿ ತೆರೆಯದ ಹೊತ್ತಲ್ಲಿ ಮದ್ಯ ಮಾರಾಟ ರಸ್ತೆ ಪಕ್ಕದಲ್ಲಿ ರಾಜಾರೋಷವಾಗಿ ದಂಧೆ ಪೊಲೀಸ್‌ ಠಾಣೆಯ ಕಣ್ಣಳತೆ ದೂರದಲ್ಲೇ ಅಕ್ರಮ
ಈ ಬಗ್ಗೆ ಮಾಹಿತಿ ಇರಲಿಲ್ಲ. ಇಂಥ ದೂರುಗಳ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಲೇ ಬಂದಿದ್ದೇವೆ. ಇದರ ಬಗ್ಗೆಯೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ.
ಸೈಯಿದಾ ಅಜ್ಮತ್ ಆಫ್ರೀನ್ ಅಬಕಾರಿ ಉಪ ಆಯುಕ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.