ADVERTISEMENT

ಚಿಂಚೋಳಿ ತಾಲ್ಲೂಕು 24 ಕಡೆಗಳಲ್ಲಿ ಅಕ್ರಮ ಗಣಿಗಾರಿಕೆ

ಸವಳು ಮಣ್ಣಿನ 2 ಗಣಿಗಳು ಮಾತ್ರ ಅಧಿಕೃತ!

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2024, 15:50 IST
Last Updated 12 ನವೆಂಬರ್ 2024, 15:50 IST
ಚಿಂಚೋಳಿಯ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆದ ಗಣಿಗಾರಿಕೆಯ ಕಾರ್ಯಪಡೆಯ ಸಭೆಯಲ್ಲಿ ಉಪವಿಭಾಗಾಧಿಕಾರಿಗಳ ಪ್ರಭುರಡ್ಡಿ ಮಾತನಾಡಿದರು
ಚಿಂಚೋಳಿಯ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಮಂಗಳವಾರ ನಡೆದ ಗಣಿಗಾರಿಕೆಯ ಕಾರ್ಯಪಡೆಯ ಸಭೆಯಲ್ಲಿ ಉಪವಿಭಾಗಾಧಿಕಾರಿಗಳ ಪ್ರಭುರಡ್ಡಿ ಮಾತನಾಡಿದರು   

ಚಿಂಚೋಳಿ: ತಾಲ್ಲೂಕಿನ 24 ಕಡೆಗಳಲ್ಲಿ ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿರುವುದು ಅಧಿಕಾರಿಗಳು ಗುರುತಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೇಡಂ ಉಪವಿಭಾಗಾಧಿಕಾರಿ ಪ್ರಭುರಡ್ಡಿ ಅವರು ಅಧಿಕಾರಿಗಳಿಗೆ ತಿಳಿಸಿದರು.

ಇಲ್ಲಿನ ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಗಣಿಗಾರಿಕೆ ಸಂಬಂಧಿತ ಚಟುವಟಿಕೆಗಳ ಕಾರ್ಯಪಡೆಯ ಸಭೆಯ ಅಧ್ಯಕ್ಷತೆವಹಿಸಿ ಮಂಗಳವಾರ ಮಾತನಾಡಿ,‘ತಹಶೀಲ್ದಾರರು ಅಕ್ರಮ ಗಣಿಗಾರಿಕೆಯ ಪಟ್ಟಿಯನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೆಶಕರಿಗೆ ಸಲ್ಲಿಸಿದ್ದಾರೆ ಎಂದರು.

‘ತಾಲ್ಲೂಕಿನಲ್ಲಿ ಕೆಂಪು ಮಣ್ಣಿನ ಲಾರಿಗಳ ಅತಿಭಾರ ಮತ್ತು ಅತಿವೇಗದಲ್ಲಿ ಸಂಚರಿಸುತ್ತಿರುವುದರಿಂದ ರಸ್ತೆಗಳು ಹಾಳಾಗುವುದು ಒಂದೆಡೆಯಾದರೆ ಪ್ರತಿವಾರ ಇಲ್ಲಿನ ಕುಂಚಾವರಂ ವನ್ಯಜೀವಿಧಾಮದಲ್ಲಿ ಅಪಘಾತಕ್ಕೀಡಾಗುತ್ತಿವೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗುತ್ತಿದೆ ಎಂಬ ಸಮಸ್ಯೆ ಉಪವಿಭಾಗಾಧಿಕಾರಿಗಳ ಗಮನಕ್ಕೆ ಬಂದಾಗ ಪರಿಶೀಲಿಸಲು ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಅಕ್ರಮ ಗಣಿಗಾರಿಕೆಯ ಕಂದಾಯ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೆ ನಡೆಸಿದ್ದು, ಗಣಿಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಖಾಸಗಿ ದೂರು ದಾಖಲಿಸಲು (ಪಿಸಿಆರ್) ಇಲಾಖೆಯ ಕಾನೂನು ಸಲಹಾ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. 24 ದೂರು ಅರ್ಜಿಗಳ ಪರಿಶೀಲಿಸಿದ ನಂತರ ಅವರ ಸಲಹೆಯಂತೆ ಏನಾದರೂ ತಿದ್ದುಪಡಿಯಿದ್ದರೆ ಸರಿಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ ಎಂದು ಗಣಿಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಅಬ್ದುಲ್ ಹಾಫೀಜ್ ಶೇಖ್ ಸಭೆಗೆ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ಸವಳು ಮಣ್ಣಿನ ಎರಡು ಘಟಕಗಳು ಮಾತ್ರ ಅಧಿಕೃತವಾಗಿವೆ. 6 ದೂರುಗಳಿಗೆ ಸಂಬಂಧಿಸಿದಂತೆ ಕಾನೂನು ಸಲಹೆ ಬಂದಿದೆ. ಇನ್ನೂ 18 ದೂರುಗಳ ಸಲಹೆ ಬರಬೇಕಿದೆ. ಎಲ್ಲವೂ ಸೇರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಭೂವಿಜ್ಞಾನಿಗಳು ತಿಳಿಸಿದರು.

ಮರಳು ಪಡೆಯುವವರಿಲ್ಲ: ತಾಲ್ಲೂಕಿನ ಹಲಕೋಡಾ ಬಳಿ ಸುಮಾರು 1500 ಮೆಟ್ರಿಕ್ ಟನ್ ಮರಳು ದಾಸ್ತಾನು ಇದೆ. ಹಿಂದಿನ ಗುತ್ತೇದಾರರು ನಿಗದಿತ ಅವಧಿಯಲ್ಲಿ ಎತ್ತುವಳಿ ಮಾಡದ ಕಾರಣ ಇದು ಉಳಿದಿದೆ. ಇದನ್ನು ವಿಲೇವಾರಿ ಮಾಡಬೇಕಾದರೆ ಯಾವುದೇ ಇಲಾಖೆಗಳಿಂದಲೂ ಬೇಡಿಕೆ ಬಂದಿಲ್ಲ. ಈ ಕುರಿತು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಪತ್ರ ಬರೆಯಿರಿ. ಬೇಡಿಕೆ ಸಲ್ಲಿಸಿದರೆ ಅಗತ್ಯ ಕ್ರಮ ಕೈಗೊಳ್ಳಿ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಬಸವರಾಜ ಬೈನೂರು ಅವರಿಗೆ ಸೂಚಿಸಿದರು.

ಸಭೆಯಲ್ಲಿ ತಹಶೀಲ್ದಾರ ವೆಂಕಟೇಶ ದುಗ್ಗನ್, ತಾ.ಪಂ. ಇಒ ಶಂಕರ ರಾಠೋಡ್, ಕೆಳದಂಡೆ ಮುಲ್ಲಾಮಾರಿ ಯೋಜನೆಯ ಎಇಇ ಅಮೃತ ಪವಾರ್, ವಿನಾಯಕ ಚವ್ಹಾಣ, ಸರ್ಕಲ್ ಇನಸ್ಪೆಕ್ಟರ್ ಕಪಿಲದೇವ, ಎಸ್‌ಐ ಗಂಗಮ್ಮ ಜಿನಿಕೇರಿ, ಕಂದಾಯ ನಿರೀಕ್ಷಕರಾದ ಕೇಶವ ಕುಲಕರ್ಣಿ, ಮಹಮದ್ ಆರೀಫ್, ರವಿಕುಮಾರ ಪಾಟೀಲ, ವಿಷಯ ನಿರ್ವಾಹಕ ಗೌತಮ ಮಚಕುರೆ ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.