ADVERTISEMENT

ಪಿಎಸ್ಐ ಪರೀಕ್ಷೆ ಅಕ್ರಮ: ನಸುಕಿನಲ್ಲಿ ಕಲಬುರಗಿಗೆ ರುದ್ರಗೌಡ ಕರೆತಂದ ಸಿಐಡಿ ತಂಡ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2022, 4:30 IST
Last Updated 24 ಏಪ್ರಿಲ್ 2022, 4:30 IST
ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಪಟ್ಟಂತೆ ರುದ್ರಗೌಡ ಡಿ. ಪಾಟೀಲ (ನೀಲಿ ಅಂಗಿ) ಹಾಗೂ ಮಂಜುನಾಥ (ಬಿಳಿ ಅಂಗಿ- ಬಲಬದಿ) ಅವರನ್ನು ಸಿಐಡಿ ಪೊಲೀಸರು ಭಾನುವಾರ ನಸುಕಿನ 3ಕ್ಕೆ ಕಲಬುರಗಿಗೆ ಕರೆತಂದರು.
ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಪಟ್ಟಂತೆ ರುದ್ರಗೌಡ ಡಿ. ಪಾಟೀಲ (ನೀಲಿ ಅಂಗಿ) ಹಾಗೂ ಮಂಜುನಾಥ (ಬಿಳಿ ಅಂಗಿ- ಬಲಬದಿ) ಅವರನ್ನು ಸಿಐಡಿ ಪೊಲೀಸರು ಭಾನುವಾರ ನಸುಕಿನ 3ಕ್ಕೆ ಕಲಬುರಗಿಗೆ ಕರೆತಂದರು.   

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ, ರುದ್ರಗೌಡ ಡಿ. ಪಾಟೀಲ ಹಾಗೂ ಅವರ ಇನ್ನೊಬ್ಬ ಸಹಚರನನ್ನು ಸಿಐಡಿ ಪೊಲೀಸರು ಭಾನುವಾರ ನಸುಕಿನ 3ಕ್ಕೆ ನಗರಕ್ಕೆ ಕರೆತಂದರು.

ಶನಿವಾರ ಮಹಾರಾಷ್ಟ್ರದ ಪುಣೆಯ ಬಳಿ ರುದ್ರಗೌಡ ಅವರ ಮೊಬೈಲ್ ಲೊಕೇಶನ್ ಪತ್ತೆ ಮಾಡಿದ ಅಧಿಕಾರಿಗಳು, ವಿಶೇಷ ತಂಡ ರಚಿಸಿಕೊಂಡು ಅಲ್ಲಿಗೆ ಹೋಗಿ ವಶಕ್ಕೆ ಪಡೆದರು. ರುದ್ರಗೌಡ ಜೊತೆಗೇ ಇದ್ದ, ಅಕ್ರಮಕ್ಕೆ ಸಹಕರಿಸಿದ ಇನ್ನೊಬ್ಬ ಆರೋಪಿ ಮಂಜುನಾಥ ಎನ್ನುವವರನ್ನೂ ಸೆರೆ ಹಿಡಿಯಲಾಗಿದೆ.

ಪರೀಕ್ಷೆ ಕೇಂದ್ರದೊಳಗಿದ್ದ ಕೆಲವು ಅಭ್ಯರ್ಥಿಗಳಿಗೆ ರುದ್ರಗೌಡ ಬ್ಲೂಟೂತ್ ಮೂಲಕ ಉತ್ತರ ರವಾನಿಸಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರುದ್ರಗೌಡ ಅವರ ಅಣ್ಣ ಮಹಾಂತೇಶ, ಅಭ್ಯರ್ಥಿಗಳಾದ ವಿಶಾಲ್ ಶಿರೂರ, ಹಯ್ಯಾಳಿ ದೇಸಾಯಿ, ಮೊಬೈಲ್ ಕೊಟ್ಟು ಸಹಕರಿಸಿದ ಶರಣಬಸಪ್ಪ, ಕಾನ್ ಸ್ಟೆಬಲ್ ರುದ್ರಗೌ ಪಾಟೀಲ ಎನ್ನುವವರನ್ನು ಬಂಧಿಸಲಾಗಿದೆ. ಇವರೆಲ್ಲ ಬ್ಲೂಟೂತ್ ಬಳಸಿ ಅಕ್ರಮ ಎಸಗಿದ ಆರೋಪದಡಿ ಮಾತ್ರ ಬಂಧಿಸಿದರು. ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರುದ್ರಗೌಡ ಡಿ. ಪಾಟೀಲ ಈಗ ಸಿಕ್ಕಿಬಿದ್ದಿದ್ದಾರೆ.

ADVERTISEMENT

ನಸುಕಿನಲ್ಲಿ ಇಬ್ಬರನ್ನೂ ಸಿಐಡಿ ಪೊಲೀಸರು ಇಲ್ಲಿನ ಐವಾನ್ ಇ ಶಾಹಿ ಪ್ರದೇಶದ ಗೆಸ್ಟ್ ಹೌಸಿಗೆ ಕರೆತಂದರು. ಆಗ ಸ್ಥಳದಲ್ಲಿದ್ದ ಮಾಧ್ಯಮದವರನ್ನು ನೋಡಿದ ರುದ್ರಗೌಡ 'ಹೈ' ಎನ್ನುವಂತೆ ಕೈಬೀಸಿ ನಗುತ್ತ ಒಳಗೆ ಹೋದರು.

ರುದ್ರಗೌಡ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಸೊನ್ನ ಗ್ರಾಮದವರು. ಸ್ನೇಹಿತ ಮಂಜುನಾಥ ಬಿದನೂರು ನಿವಾಸಿ.

ಇಬ್ಬರನ್ನೂ ಭಾನುವಾರ ಜ್ಞಾನಜ್ಯೋತಿ ಆಂಗ್ಲಮಾಧ್ಯಮ ಶಾಲೆಯೂ ಸೇರಿದಂತೆ ಅಕ್ರಮ ನಡೆದ‌ ಸ್ಥಳಗಳಿಗೆ ಕರೆದೊಯ್ದು ಮಹಜರು ಮಾಡಲಾಗುವುದು ಎಂದು ಸಿಐಡಿ ಮೂಲಗಳು "ಪ್ರಜಾವಾಣಿ"ಗೆ ಮಾಹಿತಿ ನೀಡಿವೆ.

ಇವರೊಂದಿಗೆ ಇಡೀ ಪ್ರಕರಣದಲ್ಲಿ ಸೆರೆ ಸಿಕ್ಕವರ ಸಂಖ್ಯೆ 16ಕ್ಕೆ ಏರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.