ADVERTISEMENT

ಪಿಎಸ್ಐ ಅಕ್ರಮ ನೇಮಕ; ಆಡಿಯೊ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2022, 8:05 IST
Last Updated 23 ಏಪ್ರಿಲ್ 2022, 8:05 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಕಲಬುರಗಿ: 545 ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮದ ಬಗ್ಗೆ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಮುಂದೆ ನಡೆಯಲಿರುವ 402 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವಾಗಿ ಆಯ್ಕೆಯಾಗುವ ಬಗ್ಗೆ ಇಬ್ಬರು ಮಾತನಾಡಿರುವ ಆಡಿಯೊವನ್ನು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ನಗರದಲ್ಲಿ ಬಿಡುಗಡೆ ಮಾಡಿದರು.

545 ಹುದ್ದೆಗಳಲ್ಲಿ 300ಕ್ಕೂ ಅಧಿಕ ಹುದ್ದೆಗಳನ್ನು ದುಡ್ಡಿಗಾಗಿ ಅಕ್ರಮವಾಗಿ ಒಎಂಆರ್ ಶೀಟ್ ತಿದ್ದಿ ಆಯ್ಕೆಯಾದ ಬಗ್ಗೆ ತನಿಖೆ ನಡೆಯುತ್ತಿದೆ. ಅಂತಹ ಸಂದರ್ಭದಲ್ಲೇ ಮುಂದೆ ನಡೆಯುವ ನೇಮಕಾತಿಯಲ್ಲಿ ಅಕ್ರಮ ಎಸಗಿ ಹುದ್ದೆಗಳನ್ನು ಕೊಡಿಸಲು 'ಬಕ್ರಾ'ಗಳನ್ನು ಹುಡುಕುವ ಜವಾಬ್ದಾರಿಯನ್ನು ಅಕ್ರಮ ಎಸಗಿ ತಾತ್ಕಾಲಿಕ ಪಟ್ಟಿಯಲ್ಲಿ ಹೆಸರು ಬಂದಿರುವ ವ್ಯಕ್ತಿಗೆ ವಹಿಸುವ ಮಾತುಗಳು ಆಡಿಯೊದಲ್ಲಿವೆ ಎಂದರು.

ಅಕ್ರಮ ಎಸಗಲು ನೆರವಾಗುವ ಪರೀಕ್ಷಾ ಕೇಂದ್ರ ಸಿಗಬೇಕು ಎಂದರೆ ಅರ್ಜಿ ಸಂಖ್ಯೆಯನ್ನು ಅರ್ಜಿಯ ಜೊತೆಗೆ ನೀಡಲಾದ ಮೊಬೈಲ್ ಸಂಖ್ಯೆ ಹೊರತುಪಡಿಸಿ ಬೇರೆ ಸಂಖ್ಯೆಯಿಂದ ಕೊಡುವಂತೆ ಆ ವ್ಯಕ್ತಿ ಮಾತನಾಡಿದ್ದಾನೆ. ವಿಜಯಪುರ ಜಿಲ್ಲೆಯ ಸಿಂದಗಿ ಕಡೆಯವರು ಈ ಮಾತುಕತೆ ನಡೆಸಿರುವ ಸಾಧ್ಯತೆ ಇದೆ. 371 (ಜೆ) ಮೀಸಲಾತಿ ಪಡೆಯುವರು ಪ್ರತಿ ಬಾರಿ‌ ಕೋರ್ಟಿಗೆ ಹೋಗುತ್ತಾರೆ. ಪ್ರತಿ ಬಾರಿ ಅವರ ಗೋಳು ಇದ್ದದ್ದೇ‌. ಆದರೂ ಏನೂ ಆಗುವುದಿಲ್ಲ ಎಂದಿದ್ದಾರೆ. ಈ ಆಡಿಯೊ ನ್ಯಾಯಾಲಯದಲ್ಲಿ ಪುರಾವೆ ಆಗುವುದಿಲ್ಲವಾದರೂ ಇದರ ಅಧಾರದ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ ಸತ್ಯಾಂಶ ಹೊರಗೆಳೆಯಬೇಕು ಎಂದು ಪ್ರಿಯಾಂಕ್ ಒತ್ತಾಯಿಸಿದರು.

ADVERTISEMENT

ಕಲಬುರಗಿ ಡಿಡಿಪಿಐ ಅವರು ಪಿಎಸ್ಐ ನೇಮಕ ಪರೀಕ್ಷೆಗೆ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮುಖ್ಯಸ್ಥೆ ಆಗಿರುವ ಜ್ಞಾನ ಜ್ಯೋತಿ ಶಿಕ್ಷಣ ಸಂಸ್ಥೆ ಅಗತ್ಯ ಮಾನದಂಡ ಹೊಂದಿಲ್ಲ ಎಂದು ತಿರಸ್ಕರಿಸಿದ್ದರು. ಅದನ್ನು ಮೀರಿ ಆ ಸಂಸ್ಥೆ ಪರೀಕ್ಷಾ ಕೇಂದ್ರವಾಗಲು ಯಾರು ಶಿಫಾರಸು ಪತ್ರ ನೀಡಿದ್ದರು ಎಂಬುದು ಬಯಲಾಗಬೇಕು ಎಂದರು‌.

ನೇಮಕಾತಿ ಎಡಿಜಿಪಿ ವರ್ಗಾಯಿಸಿ: ಪಿಎಸ್ಐ ಅಕ್ರಮ ನೇಮಕದ ಬಗ್ಗೆ ತನಿಖೆ ನಡೆಯುತ್ತಿದ್ದರೂ ನೇಮಕಾತಿ ವಿಭಾಗದ ಎಡಿಜಿಪಿ ಅವರನ್ನು ವರ್ಗಾವಣೆ ಮಾಡಿಲ್ಲ. ಅವರು ತನಿಖೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದ್ದು, ಕೂಡಲೇ ಅವರನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀನಾಮೆ: ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಂಧಿತರಾಗಿರುವ ಅಫಜಲಪುರದ ಕಾಂಗ್ರೆಸ್ ಮುಖಂಡ ಮಹಾಂತೇಶ ಪಾಟೀಲ 2019ರಲ್ಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. ಮೊದಲು ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದು ನಿಜ. ನನ್ನ ಪಕ್ಕದಲ್ಲಿಯೂ ಕುಳಿತಿದ್ದರು. ಹಾಗಂತ ನಾನು ಅವರ ಪರ ಮಾತನಾಡುವುದಿಲ್ಲ. ಯಾವ ಪಕ್ಷದವರೇ ಆಗಿರಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.

ಕಾಂಗ್ರೆಸ್ ಮುಖಂಡ ಅಲ್ಲಮಪ್ರಭು ಪಾಟೀಲ ಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.