ADVERTISEMENT

ಕಮಲಾಪುರ: ಶಾಲೆ ಕಟ್ಟಡದಲ್ಲಿ ಅಕ್ರಮ ಚಟುವಟಿಕೆ

ಕಲಮೂಡ ಸರ್ಕಾರಿ ಪ್ರಾಥಮಿಕ ಶಾಲೆ

ಪ್ರಜಾವಾಣಿ ವಿಶೇಷ
Published 31 ಜುಲೈ 2024, 6:43 IST
Last Updated 31 ಜುಲೈ 2024, 6:43 IST
ಕಮಲಾಪುರ ತಾಲ್ಲೂಕಿನ ಕಲಮೂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತರಗತಿ ಹಿಂದೆ ಹಾಗೂ ಶೌಚಾಲಯಗಳ ಎದುರು ಬೆಳೆದಿರುವ ಕಳೆ
ಕಮಲಾಪುರ ತಾಲ್ಲೂಕಿನ ಕಲಮೂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತರಗತಿ ಹಿಂದೆ ಹಾಗೂ ಶೌಚಾಲಯಗಳ ಎದುರು ಬೆಳೆದಿರುವ ಕಳೆ   

ಕಮಲಾಪುರ: ಶಾಲೆ ಕಟ್ಟಡದ ಸುತ್ತ ಬೆಳೆದಿರುವ ಹುಲ್ಲು, ಮುಳ್ಳು ಕಂಟಿ, ಮುರಿದ ಬಾಗಿಲು, ಕಿಟಕಿ ಇಲ್ಲದ ಕೋಣೆಗಳು, ಕಳಚಿ ಬೀಳುತ್ತಿರುವ ಚಾವಣಿಯ ಸಿಮೆಂಟ್‌ ಕಾಂಕ್ರೀಟ್‌, ತೇವಗೊಂಡ ಗೋಡೆ, ಶಾಲೆ ಆವರಣದಲ್ಲಿ ಮದ್ಯದ ಬಾಟಲಿಗಳು, ಇಸ್ಪೀಟ್‌ ಕಾರ್ಡ್‌ಗಳು, ಪಾಳು ಬಿದ್ದ ಶೌಚಾಲಯ...ಇದು ತಾಲ್ಲೂಕಿನ ಕಲಮೂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣ. ಅಕ್ಷರ, ಅನ್ನ, ಅರಿವು ನೀಡಿ ಮಕ್ಕಳ ಭವಿಷ್ಯ ರೂಪಿಸಬೇಕಿರುವ ಶಾಲೆಯು ಅಕ್ರಮ ಚಟುವಟಿಕೆಗಳ ತಾಣವಾಗಿದೆ.

8ನೇ ತರಗತಿ ವರೆಗಿನ ಶಾಲೆಯಲ್ಲಿ 75 ಮಕ್ಕಳ ದಾಖಲಾತಿ ಇದೆ. ಮೂವರು ಶಿಕ್ಷಕರಿದ್ದಾರೆ. 12  ಕೊಠಡಿಗಳಿದ್ದು, ಅದರಲ್ಲಿ 10 ಕೋಠಡಿಗಳು ಸೋರುತ್ತವೆ. 4 ಕೊಠಡಿಗಳಿಗೆ ಕಿಟಕಿ ಬಾಗಿಲುಗಳಿಲ್ಲ. ಇನ್ನಳಿದವು ಮಳೆ ಬಂದರೆ ತೇವಗೊಂಡು ಛಾವಣಿ ಪದರು ಕಳಚಿ ಬೀಳುತ್ತವೆ. ಕಚೇರಿ ಹಾಗೂ ನಲಿಕಲಿ ಕೊಣೆ ಮಾತ್ರ ಸುಸ್ಥಿಯಲ್ಲಿವೆ ಎಂದು ಗ್ರಾಮಸ್ಥರಾದ ಸುಭಾಷ ಬಿರಾದಾರ, ಅಭಿಷೇಕ ರೆಡ್ಡಿ ಬೇಸರ ವ್ಯಕ್ತಪಡಿಸಿದರು.

ಶಾಲೆ ಆವರಣದಲ್ಲಿ ಶೌಚಾಲಯಗಳಿದ್ದರೂ, ಸುತ್ತಲೂ ಹುಲ್ಲು, ಮುಳ್ಳುಕಂಟಿ ಬೆಳೆದಿದೆ. ಶಾಚಾಲಯಕ್ಕೆ ತೆರಳಲು ದಾರಿಯಿಲ್ಲ.

ADVERTISEMENT

‘ಕಳೆ ಬೆಳೆದಿರುವುದರಿಂದ ಹಾವು, ಚೇಳು, ಕೀಟ, ಸೊಳ್ಳೆಗಳಿಂದಾಗಿ ಆತಂಕದ ವಾತಾವರಣ ಇದೆ. ಕಿಟಕಿ, ಬಾಗಿಲು ಮುರಿದಿರುವುದರಿಂದ ಕಿಡಿಗೇಡಿಗಳು, ಮಧ್ಯಸೇವನೆ ಮಾಡುವುದು, ಜೂಜಾಟದಂತಹ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಕುಡಿಯುವ ನೀರಿನ ನಲ್ಲಿ ಪೂರ್ತಿ ಪಾಚಿಯಿಂದ ಆವೃತ್ತವಾಗಿದೆ. ಮಕ್ಕಳಿಗೆ ಕುಡಿಯಲು ಶುದ್ಧ ನೀರಿಲ್ಲ. ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ಖಾರ ಸೇರಿದಂತೆ ಅಡುಗೆ ಸಾಮಗ್ರಿ ಖಾಲಿಯಾಗಿದೆ. ಅಳಿದುಳಿದ ದವಸ ಧಾನ್ಯ ಬಳಸಿ ಬಿಸಿಯೂಟ ಸಿದ್ಧಪಡಿಸಲಾಗುತ್ತಿದೆ. ನಾಲ್ಕು ದಿನಗಳಿಂದ ಮಕ್ಕಳಿಗೆ ಸಮರ್ಪಕ ಬಿಸಿಯೂಟಯಿಲ್ಲ. ಶಾಲೆಯ ಈ ದುರವಸ್ಥೆಯಿಂದ ಮಕ್ಕಳ ದಾಖಲಾತಿ ಕೊಂಠಿತಗೊಳ್ಳುತ್ತಿದೆ. ಐದಾರು ವರ್ಷಗಳ ಹಿಂದೆ ಸುಮಾರು 150 ಮಕ್ಕಳಿದ್ದರು. 8 ಜನ ಶಿಕ್ಷಕರಿದ್ದರು. ಆದರೆ ಈಗ ಇಲ್ಲ’ ಎಂದು ಮಹಾಂತೇಶ ಕರಿಕಲ್‌,ಉಮೇಶ ಪರೀಟ, ಮಾಣಿಕ ಚಕ್ರಕರ, ಸೋಮಶೇಖರ, ಬಾಲರೆಡ್ಡಿ, ಸಂಜು ಚಕ್ರಕರ ದೂರಿದರು.

ತರಗತಿ ಕೋಣೆ ಬಾಗಿಲು ಮುರಿದಿರುವುದು
ಮುರಿದ ಕಿಟಕಿ
ಸುಭಾಷ ಬಿರಾದಾರ
ಅಭಿಷೇಕ ರೆಡ್ಡಿ
ಶಾಲೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಶಾಲೆ ಸುಚಿತ್ವ ಹಾಗೂ ದುರಸ್ತಿಗೆ ಶೀಘ್ರ ಕ್ರಮಕೈಗೊಳ್ಳುತ್ತೇನೆ. ಬಿಸಿಯೂಟದ ಸಾಮಗ್ರಿಗಳನ್ನು ಶೀಘ್ರ ಒದಗಿಸಲು ಸೂಚಿಸುತ್ತೇನೆ
–ಸೋಮಶೇಖರ ಹಂಚಿನಾಳ ಕ್ಷೇತ್ರ ಶಿಕ್ಷಣಾಧಿಕಾರಿ
ದುಸ್ಥಿತಿಯಲ್ಲಿರುವ ಶೌಚಾಲಯಗಳನ್ನು ಸರಿಪಡಿಸಬೇಕು. ಶಾಲೆ ಆವರಣದಲ್ಲಿ ಅಕ್ರಮ ಚಟುವಟಿಕೆ ನಡೆಯದಂತೆ ಸೂಕ್ತಕ್ರಮ ಕೈಗೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಯಂತ್ರ ಒದಗಿಸಬೇಕು
– ಅಭಿಷೇಕ ರೆಡ್ಡಿ ಮುಖಂಡ
ಕೊಠಡಿಗಳ ಚಾವಣಿ ಕಿಟಿಕಿ ಬಾಗಿಲುಗಳಿಗೆ ಹೊಸ ಪಟ್ಟುಗಳನ್ನು ಹಾಕಿ ದುರಸ್ತಿಗೊಳಿಸಬೇಕು. ಶಾಲೆ ಆವರಣದಲ್ಲಿ ಶುಚಿತ್ವ ಕಾಪಾಡಬೇಕು
– ಸುಭಾಷ ಬಿರಾದಾರ ಪಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.