ಕಲಬುರಗಿ: ನಗರದ ನೂರ್‌ಬಾಗ್ ಕಾಲೊನಿಯ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಜಿಲ್ಲಾ ಕಾಂಗ್ರೆಸ್‌ನ ಅಲ್ಪಸಂಖ್ಯಾತರ ವಿಭಾಗದ ಮಾಜಿ ಅಧ್ಯಕ್ಷ ವಾಹೇದ್ ಅಲಿ ಫಾತೆಖಾನಿ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು ಶನಿವಾರ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಿದರು.
ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಮನೆಯಲ್ಲಿ ತಪಾಸಣೆ ನಡೆಸಿದ ಐಟಿ ಅಧಿಕಾರಿಗಳು, ದಾಖಲಾತಿಗಳು, ಬ್ಯಾಂಕ್ ಪಾಸ್‌ಬುಕ್ ತಪಾಸಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ವಶಕ್ಕೆ ಪಡೆದ ಸ್ವತ್ತು, ಆಸ್ತಿಯ ಪ್ರಮಾಣ ಬಹಿರಂಗ ಪಡಿಸಿಲ್ಲ.
ವಾಹೇದ್ ಅಲಿ ಅವರು ಮಾಜಿ ಸಚಿವ ದಿ. ಖಮರುಲ್ ಇಸ್ಲಾಂ ಅವರ ಆಪ್ತರಾಗಿದ್ದು, ಅವರ ಹಣಕಾಸಿನ ವ್ಯವಹಾರ, ಚುನಾವಣೆ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕಿ ಕನೀಜ್ ಫಾತೀಮ್ ಅವರ ಗೆಲುವಿನಲ್ಲಿ ವಾಹೇದ್ ಅಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಮೂಲಗಳು ತಿಳಿಸಿವೆ. ಅವರು ಗುಲಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್‌ನ ಮಾಜಿ ಸದ್ಯಸ್ಯರೂ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.