ಕಲಬುರ್ಗಿ: ‘ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನಸಂಖ್ಯೆ ಹೆಚ್ಚಾಗಿರುವುದರಿಂದ ಪರಿಶಿಷ್ಟ ಜಾತಿಯವರಿಗೆ ಶೇ 17ರಷ್ಟು ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ 7ರಷ್ಟು ಮೀಸಲಾತಿ ಹೆಚ್ಚಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು’ ಎಂದು ದಲಿತ ಸಂಘಟನೆಗಳ ಮುಖಂಡರು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗದ ಎದುರು ಮಂಗಳವಾರ ಅಹವಾಲು ಸಲ್ಲಿಸಿದರು.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕೇ ಎಂಬುದರ ಕುರಿತು ಚರ್ಚಿಸಲು ಆಯೋಗವು ಕರೆದಿದ್ದ ಸಮಾಲೋಚನಾ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಜಿಲ್ಲೆಯಿಂದ ಬಂದಿದ್ದ ಮುಖಂಡರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
‘ಮಾನವಾಭಿವೃದ್ಧಿ ಸೂಚ್ಯಂಕದಲ್ಲಿ ದಲಿತರ ಪರಿಸ್ಥಿತಿ ಅತ್ಯಂತ ಕೆಳಮಟ್ಟದಲ್ಲಿದೆ. ಕೂಲಿನಾಲಿ ಮಾಡಿಕೊಂಡು ನಿಕೃಷ್ಟ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಉತ್ಪಾದನಾ ವಲಯದಲ್ಲಿಯೂ ಅವರಿಗೆ ಆದ್ಯತೆ ಇಲ್ಲ. ಹೀಗಾಗಿ, ಮೀಸಲಾತಿ ಹೆಚ್ಚಿಸುವುದು ಅನಿವಾರ್ಯ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಮಾರುತಿ ಮಾನ್ಪಡೆ ಹೇಳಿದರು.ಅಸ್ಪೃಶ್ಯತೆ ಇರುವವರೆಗೂ ಮೀಸಲಾತಿ ಮುಂದುವರೆಯಲೇಬೇಕು ಎಂದು ಕೆಲವರು ಒತ್ತಾಯಿಸಿದರು.
ಆಯೋಗದ ಅಧ್ಯಕ್ಷ ನ್ಯಾ.ನಾಗಮೋಹನದಾಸ್ ಮಾತನಾಡಿ, ‘ಮೀಸಲಾತಿ ಎಂಬುದು ಹಿಂದುಳಿದ ಹಾಗೂ ದಲಿತ ಸಮುದಾಯದವರಿಗೆ ನೀಡಿದ ಭಿಕ್ಷೆಯಲ್ಲ. ಅದೊಂದು ಮಾನವ ಹಕ್ಕು. ಮೀಸಲಾತಿ ಇದ್ದುದರಿಂದಲೇ ದಲಿತರು ರಾಷ್ಟ್ರಪತಿ, ಉಪರಾಷ್ಟ್ರಪತಿ, ಉಪಪ್ರಧಾನಿ, ಸಚಿವರು, ಶಾಸಕರಾಗಿ, ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಸಾಧ್ಯವಾಗಿದೆ. ಆಯೋಗವು ಎಲ್ಲ ವಿಭಾಗಗಳಲ್ಲಿ ಸಮಾಲೋಚನಾ ಸಭೆಗಳನ್ನು ನಡೆಸಿ, ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.