ಕಲಬುರಗಿ: ಇಲ್ಲಿನ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗುರುವಾರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬ್ರಿಟಿಷರು ಭಾರತದಿಂದ ಕಾಲ್ಕಿತ್ತ ನಂತರ ದೇಶ ಹೇಗೆ ಅಭಿವೃದ್ಧಿ ಪಥದತ್ತ ಸಾಗಿತು, ಮಹಿಳಾ ಸಬಲೀಕರಣ ಹೇಗೆ ಸಾಧ್ಯವಾಯಿತು ಎಂಬುದನ್ನು ವಿವರಿಸಿದರು.
ಆ ಮೂಲಕ ಕಾಂಗ್ರೆಸ್ ಸರ್ಕಾರ ಸ್ವಾತಂತ್ರ್ಯಾನಂತರದ ಬಳಿಕ ಏನನ್ನೂ ಮಾಡಿಲ್ಲ ಎಂಬ ಪ್ರಮುಖ ವಿರೋಧ ಪಕ್ಷ ಬಿಜೆಪಿಯ ಸದಾಕಾಲದ ಟೀಕೆಯನ್ನು ಅಂಕಿ–ಅಂಶಗಳ ಮೂಲಕ ಎದುರಿಸಿದರು.
‘ಬ್ರಿಟಿಷರು ಭಾರತ ಬಿಟ್ಟ ಬಳಿಕ ದೇಶದ ಜಿಡಿಪಿ ತೀವ್ರವಾಗಿ ಕುಸಿದಿತ್ತು. ಮೊದಲಿಗೆ ತೀವ್ರ ಸ್ವರೂಪದ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ಜವಾಹರಲಾಲ್ ನೆಹರೂ ನೇತೃತ್ವದ ಸರ್ಕಾರವು ಕೃಷಿ, ಕೈಗಾರಿಕೆ, ಮೂಲಸೌಕರ್ಯಗಳ ಅಭಿವೃದ್ಧಿಗೆ ದಿಟ್ಟ ಕ್ರಮ ಕೈಗೊಳ್ಳುವ ಮೂಲಕ ಜಿಡಿಪಿ ಕುಸಿತವನ್ನು ತಡೆಗಟ್ಟಿತು’ ಎಂದು ಪ್ರತಿಪಾದಿಸಿದರು.
‘ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಹಲವು ದೇಶಗಳಲ್ಲಿ ಮಹಿಳೆಯರಿಗೆ ತಕ್ಷಣಕ್ಕೇ ಮತದಾನದ ಹಕ್ಕು ಸಿಕ್ಕಿರಲಿಲ್ಲ. ಆದರೆ, ಭಾರತದಲ್ಲಿ ಇದಕ್ಕೆ ವ್ಯತಿರಿಕ್ತವೆಂಬಂತೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಅಂಗೀಕಾರಗೊಳ್ಳುತ್ತಿದ್ದಂತೆ ಮೊದಲ ಚುನಾವಣೆಯಲ್ಲಿಯೇ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿತು. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ನೀಡಿದ ನಂತರ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿ, ಪ್ರತಿಭಾ ಪಾಟೀಲ ಅವರು ರಾಷ್ಟ್ರಪತಿಯಾಗಿ, ಮೀರಾ ಕುಮಾರ್ ಅವರು ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಲು ಸಾಧ್ಯವಾಯಿತು’ ಎಂದರು.
ಮಹಿಳಾ ಸಬಲೀಕರಣದ ಬಗ್ಗೆ ಪ್ರಸ್ತಾಪಿಸುತ್ತಿದ್ದ ಸಚಿವ ಪ್ರಿಯಾಂಕ್ ಅವರು ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಪ್ರಸ್ತಾಪಿಸಲಿಲ್ಲ.
‘ಶಕ್ತಿ’ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್ 5ರವರೆಗೆ 7.65 ಕೋಟಿ ಬಾರಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಬೆಳೆಸಿದ್ದಾರೆ. ‘ಅನ್ನ ಭಾಗ್ಯ’ ಯೋಜನೆಯಡಿ ಜಿಲ್ಲೆಯ 5,70,256 ಪಡಿತರ ಚೀಟಿಯ 19.63 ಲಕ್ಷ ಸದಸ್ಯರಿಗೆ 5 ಕೆ.ಜಿ. ಉಚಿತ ಪಡಿತರ ನೀಡಿದ್ದಲ್ಲದೇ, ಜೂನ್ ತಿಂಗಳವರೆಗೆ 5,00,324 ಪಡಿತರ ಚೀಟಿಯ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ₹ 280.39 ಕೋಟಿ ನೇರ ಪಾವತಿ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ‘ಗೃಹ ಜ್ಯೋತಿ’ ಯೋಜನೆಯಡಿ ಜಿಲ್ಲೆಯಲ್ಲಿ 5,46,636 ಜನ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುತ್ತಿದ್ದು, ‘ಗೃಹ ಲಕ್ಷ್ಮಿ’ ಯೋಜನೆಯಡಿ ಜಿಲ್ಲೆಯ 5,59,299 ಮಹಿಳೆಯರಿಗೆ ಮಾಸಿಕ ₹ 2 ಸಾವಿರದಂತೆ ₹ 957.66 ಕೋಟಿ ಪಾವತಿ ಮಾಡಲಾಗಿದೆ. ‘ಯುವ ನಿಧಿ’ ಯೋಜನೆಯಡಿ ಜಿಲ್ಲೆಯಲ್ಲಿ 11,845 ಜನ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಅರ್ಹರಿಗೆ ಜೂನ್‌ವರೆಗೆ ಅಂದಾಜು ₹ 5.80 ಕೋಟಿ ನಿರುದ್ಯೋಗ ಭತ್ಯೆ ನೀಡಲಾಗಿದೆ’ ಎಂದರು.
ಹಲವರಿಗೆ ಸನ್ಮಾನ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆ ಮಾಡಿ ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ಯಲ್ಲಿ ಹೆಚ್ಚಿನ ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಭಾರತ ಚುನಾವಣಾ ಆಯೋಗದಿಂದ ಏರ್ಪಡಿಸಿದ ಸ್ವೀಪ್ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಪಡೆದ ‘ವಿಜಯ ಕರ್ನಾಟಕ’ ಪತ್ರಿಕೆಯ ಛಾಯಾಗ್ರಾಹಕ ಶಿವಶರಣಪ್ಪ ಬೆಣ್ಣೂರು ಅವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಡಿಎಆರ್ ಪಿ.ಐ. ಚನ್ನಬಸವ ನೇತೃತ್ವದಲ್ಲಿ 18 ವಿವಿಧ ತುಕಡಿಗಳಿಂದ ಸಚಿವರಿಗೆ ಗೌರವ ವಂದನೆ ಸಲ್ಲಿಸಲಾಯಿತು. ವಿಶೇಷವಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಘನತ್ಯಾಜ್ಯ ನಿರ್ವಹಣೆಗೆ ನೇಮಿಸಿರುವ ಎನ್‌ಅರ್‌ಎಲ್‌ಎಂ ಯೋಜನೆಯ ನಾರಿ ಶಕ್ತಿ ಸ್ವಚ್ಛತಾ ಕಾರ್ಮಿಕರು ಮತ್ತು ಸ್ವಚ್ಛ ವಾಹಿನಿಗಳು ಮೊದಲ ಬಾರಿಗೆ ಪಥಸಂಚಲನದಲ್ಲಿ ಭಾಗಿಯಾಗಿ ಸಚಿವರಿಗೆ ಗೌರವ ವಂದನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಮೀನಾಕ್ಷ್ಮಿ ಭಗವಾನ್ ನೇತೃತ್ವದ 47 ಕಾರ್ಮಿಕರನ್ನು ಒಳಗೊಂಡ ಸ್ವಚ್ಛ ವಾಹಿನಿ ಮತ್ತು ಮಹಿಳಾ ಕಾರ್ಮಿಕರ ತುಕಡಿ ಭಾಗವಹಿಸಿತ್ತು.
ಇದೇ ಸಂದರ್ಭದಲ್ಲಿ 50 ನೂತನ ಸಾರಿಗೆ ಬಸ್ ಹಾಗೂ 12 ಟ್ರಕ್ಕುಗಳನ್ನು ಸಚಿವರು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ ಇಲಾಖೆ, ಕೃಷಿ ಇಲಾಖೆ, ಜೆಸ್ಕಾಂ, ಸಂಚಾರ ಪೊಲೀಸ್, ತೋಟಗಾರಿಕೆ ಹಾಗೂ ಆರೋಗ್ಯ ಇಲಾಖೆಯಿಂದ ಆಕರ್ಷಿಕ ಸ್ತಬ್ದಚಿತ್ರಗಳ ಪ್ರದರ್ಶನ ನಡೆಯಿತು. ಶಾಲಾ–ಮಕ್ಕಳಿಂದ ದೇಶಭಕ್ತಿ ಗೀತೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವೆಂದ್ರಪ್ಪ ಮರತೂರು, ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಯಲ್ಲಪ್ಪ ನಾಯ್ಕೋಡಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಪ್ರಾದೇಶಿಕ ಆಯುಕ್ತ ಹಾಗೂ ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಐಜಿಪಿ ಅಜಯ್ ಹಿಲೋರಿ, ಜಿಲ್ಲಾ ಪಂಚಾಯತ್ ಸಿಇಒ ಭಂವರ್ ಸಿಂಗ್ ಮೀನಾ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಆಕಾಶ ಶಂಕರ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಡಿಸಿಎಫ್ ಸುಮಿತ್ ಪಾಟೀಲ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಇತರರು ಭಾಗವಹಿಸಿದ್ದರು.
‘ಕಲ್ಯಾಣ ಪಥ: ಮುಂದಿನ ತಿಂಗಳಿನಿಂದ ಸಮೀಕ್ಷೆ’
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ‘ಕಲ್ಯಾಣ ಪಥ’ ಯೋಜನೆಯಡಿ ಕಲ್ಯಾಣ ಕರ್ನಾಟಕದಲ್ಲಿ 1150 ಕಿ.ಮೀ. ರಸ್ತೆಗಳನ್ನು ₹ 1 ಸಾವಿರ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು ಇದಕ್ಕಾಗಿ ಸಮೀಕ್ಷೆ ಕಾರ್ಯ ಮುಂದಿನ ತಿಂಗಳಿನಿಂದ ನಡೆಯಲಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಇದಲ್ಲದೆ ಇಲಾಖೆಯಿಂದ ರಾಜ್ಯದಾದ್ಯಂತ ‘ಪ್ರಗತಿ ಪಥ’ ಯೋಜನೆಯಡಿ ₹ 5180 ಕೋಟಿ ವೆಚ್ಚದಲ್ಲಿ 7110 ಕಿ.ಮೀ. ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ ಎಂದರು.
ಅನಾವರಣಗೊಂಡ ಮಕ್ಕಳ ಪ್ರತಿಭೆ
ಸ್ವಾತಂತ್ರ್ಯೋತ್ಸವದ ಅಂಗವಾಗಿ ಪೊಲೀಸ್ ಪರೇಡ್ ಮೈದಾನದಲ್ಲಿ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಲೋಕ ಅನಾವರಣಗೊಂಡಿತು. ದೇಶದ ಸೈನಿಕರ ತ್ಯಾಗ ದೇಶದಲ್ಲಿ ಹಾಸುಹೊಕ್ಕಾಗಿರುವ ವಿವಿಧ ಭಾಷೆ ಸಂಸ್ಕೃತಿಗಳು ಜಾತ್ಯತೀತ ಮನೋಭಾವ ದೇಶ ಸಾಧಿಸಿದ ವೈಜ್ಞಾನಿಕ ಬೆಳವಣಿಗೆ ಕುರಿತು ನೃತ್ಯದ ಮೂಲಕ ಪ್ರದರ್ಶಿಸಿದರು. ಸೇಂಟ್ ಮೇರಿ ಶಾಲೆಯ ಮಕ್ಕಳು ದೇಶ ಭಕ್ತಿಯ ನೃತ್ಯಕ್ಕೆ ಹೆಜ್ಜೆ ಹಾಕಿದರು. ಸಂಗಮ ವಿದ್ಯಾ ಮಂದಿರದ ಇಂಗ್ಲಿಷ್ ಮಾಧ್ಯಮ ಶಾಲೆಯ ಮಕ್ಕಳು ಹಿಂದಿ ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ಎಸ್‌ಬಿಆರ್ ವಸತಿ ಪಬ್ಲಿಕ್ ಶಾಲೆಯ ಮಕ್ಕಳು ಸರ್ವ ಧರ್ಮ ಸಮನ್ವಯದ ದೇಶ ಭಕ್ತಿ ಗೀತೆ ಪ್ರದರ್ಶಿಸಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು!
ಕಲಬುರಗಿಯ ಪೊಲೀಸ್ ಪರೇಡ್ ಮೈದಾನದ ಮುಖ್ಯ ವೇದಿಕೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಶಿಷ್ಟಾಚಾರ ಉಲ್ಲಂಘಿಸಿ ಕುಳಿತಿದ್ದರು. ಮಾಜಿ ಸಚಿವ ರೇವೂ ನಾಯಕ ಬೆಳಮಗಿ ವಿಧಾನಪರಿಷತ್ ಸದಸ್ಯ ಜಗದೇವ ಗುತ್ತೇದಾರ ಪುತ್ರ ರಾಜೇಶ ಗುತ್ತೇದಾರ ಶಾಸಕಿ ಕನೀಜ್ ಫಾತಿಮಾ ಪುತ್ರ ಫರಾಜ್ ಉಲ್ ಇಸ್ಲಾಂ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದರು. ಶಿಷ್ಟಾಚಾರದ ಪ್ರಕಾರ ಸಚಿವರು ಸಂಸದರು ಚುನಾಯಿತ ಶಾಸಕರು ನಿಗಮ ಮಂಡಳಿಗಳ ಅಧ್ಯಕ್ಷರು ವೇದಿಕೆಯಲ್ಲಿ ಕುಳಿತುಕೊಳ್ಳಬಹುದು. ಆದರೆ ಯಾವುದೇ ಶಾಸನಾತ್ಮಕ ಹುದ್ದೆ ಹೊಂದಿಲ್ಲದೇ ಇರುವವರೂ ವೇದಿಕೆಯಲ್ಲಿದ್ದರು. ಇದನ್ನು ತಡೆಯಬೇಕಿದ್ದ ಜಿಲ್ಲಾಡಳಿತದ ಅಧಿಕಾರಿಗಳು ಪೊಲೀಸರು ಕಂಡೂ ಕಾಣದಂತೆ ಸುಮ್ಮನಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.