ADVERTISEMENT

ನಾವೆಲ್ಲರೂ ಪ್ರಜಾ ಧರ್ಮಕ್ಕೆ ಬದ್ಧರಾಗಿರಬೇಕು: ಹಿರಿಯ ನ್ಯಾಯಮೂರ್ತಿ ಮುದಗಲ್

ಹೈಕೋರ್ಟ್‌ನಲ್ಲಿ ಧ್ವಜಾರೋಹಣ ನೆರವೇರಿಸಿದ ಹಿರಿಯ ನ್ಯಾಯಮೂರ್ತಿ ಮುದಗಲ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 12:05 IST
Last Updated 15 ಆಗಸ್ಟ್ 2021, 12:05 IST
ಕಲಬುರ್ಗಿ ಹೈಕೋರ್ಟ್‌ ಪೀಠದ ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಹಿರಿಯ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮಾತನಾಡಿದರು
ಕಲಬುರ್ಗಿ ಹೈಕೋರ್ಟ್‌ ಪೀಠದ ಆವರಣದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಹಿರಿಯ ನ್ಯಾಯಮೂರ್ತಿ ಕೆ.ಎಸ್. ಮುದಗಲ್ ಮಾತನಾಡಿದರು   

ಕಲಬುರ್ಗಿ: ಭಾರತೀಯ ಪ್ರಜೆಗಳಾದ ನಾವೆಲ್ಲರೂ ಸ್ವಾತಂತ್ರ‍್ಯವನ್ನು ರಕ್ಷಿಸಿಕೊಂಡು ದೇಶವನ್ನು ಶಾಂತಿ, ಪ್ರಗತಿ ಹಾಗೂ ಸಮೃದ್ಧಿಯಾಗಿ ನಡೆಸಿಕೊಂಡು ಹೋಗುವ ಪ್ರಜಾ ಧರ್ಮಕ್ಕೆ ಬದ್ಧರಾಗಿರಬೇಕು ಎಂದು ಹೈಕೋರ್ಟ್ ಕಲಬುರ್ಗಿ ಪೀಠದ ಹಿರಿಯ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಅವರು ಹೇಳಿದರು.

ಹೈಕೋರ್ಟ್ ಪೀಠದ ಆವರಣದಲ್ಲಿ ಭಾನುವಾರ ಸ್ವಾತಂತ್ರ‍್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಧರ್ಮವೆಂದರೆ ಜಾತಿ ಅಥವಾ ಮತವಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿ ಸನ್ನಿವೇಶಕ್ಕೆ ಅನುಗುಣವಾಗಿ ವಿಧಿಸಲ್ಪಟ್ಟ ನಿಯಮವದು. ದೇಶ ಕಾಯುವವರಿಗೆ ಯೋಧ ಧರ್ಮ, ರೈತರಿಗೆ ಕೃಷಿ ಧರ್ಮ, ಆಳುವವರಿಗೆ ರಾಜ ಧರ್ಮ, ಗುರುವಿಗೆ ಮಾರ್ಗದರ್ಶನ ನೀಡುವ ಧರ್ಮ, ವಿದ್ಯಾರ್ಥಿಗೆ ವಿಧೇಯ ಧರ್ಮವಿರುತ್ತದೆ’ ಎಂದರು.

‘ಭಾರತ ಮೂಲತಃ ಕಲೆ, ಧರ್ಮ, ಸಂಸ್ಕೃತಿ ಹಾಗೂ ಸಂಸ್ಕಾರಗಳಿಂದ ಕೂಡಿದ ಸಂಪದ್ಭರಿತ ರಾಷ್ಟ್ರವಾಗಿದ್ದರೂ ನಮ್ಮಲ್ಲಿನ ಭ್ರಾತೃತ್ವ, ಏಕತೆ ಮತ್ತು ರಾಷ್ಟ್ರೀಯ ಭಾವನೆ ಕೊರತೆ, ಸ್ವಾರ್ಥಪರ ಆಂತರಿಕ ಕಚ್ಚಾಟದ ಕಾರಣಕ್ಕೆ ಪರಕೀಯರು ನಮ್ಮನ್ನು ಆಳಿದರು’ ಎಂದು ಹೇಳಿದರು.

ADVERTISEMENT

‘ಆಗಸ್ಟ್ 15 ಎನ್ನುವುದು ಕೇವಲ ಆಂಗ್ಲರ ವಸಹಾತುಶಾಹಿ ದಾಸ್ಯದಿಂದ ದೇಶ ವಿಮೋಚನೆಗೊಂಡ ದಿನ ಮಾತ್ರವಲ್ಲ, ಸಾವಿರ ವರ್ಷಗಳ ಕರಾಳ ಅವಧಿಗೆ ತೆರೆ ಹಾಕಿದ ಸುಸಂದರ್ಭ. ದೇಶ ಸ್ವಾತಂತ್ರ‍್ಯಗೊಳ್ಳಲು ತ್ಯಾಗ ಜೀವಿಗಳು ಅನುಸರಿಸಿದ ಮೌಲ್ಯಗಳನ್ನು ಮತ್ತು ಪಡೆದ ಸ್ವಾತಂತ್ರ‍್ಯವನ್ನು ನಿಭಾಹಿಸಲು ನಮ್ಮ ಜವಾಬ್ದಾರಿ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಗಳಿಗೆ ಇದು’ ಎಂದರು.

ತಮ್ಮ ತ್ಯಾಗ ಹಾಗೂ ಚಳವಳಿ ಮೂಲಕ ದೇಶದ ತರುಣರಲ್ಲಿ ಸ್ವಾತಂತ್ರ‍್ಯದ ಕಿಡಿಯನ್ನು ಹೊತ್ತಿಸುವಲ್ಲಿ ಕ್ರಾಂತಿಕಾರಿಗಳು ಯಶಸ್ವಿಯಾಗಿದ್ದರು. ಅಲ್ಲದೆ, ವಿಮೋಚನಾ ಹೋರಾಟದಲ್ಲಿ ನ್ಯಾಯವಾದಿಗಳಾಗಿ ಮಹಾತ್ಮ ಗಾಂಧೀಜಿ, ಜವಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರಮುಖ ಪಾತ್ರವಹಿಸಿದ್ದರು. ಸ್ವಾತಂತ್ರ‍್ಯವನ್ನು ದುಬಾರಿ ಬೆಲೆ ತೆತ್ತು ನಾವು ಪಡೆದಿದ್ದೇವೆ ಎನ್ನುವುದನ್ನು ಮರೆಯಬಾರದು ಎಂದರು.

ನ್ಯಾಯಮೂರ್ತಿಗಳಾದ ಡಾ.ಎಚ್.ಬಿ.ಪ್ರಭಾಕರ ಶಾಸ್ತ್ರಿ, ನ್ಯಾ.ಮಹ್ಮದ್ ನವಾಜ್, ನ್ಯಾ.ನಟರಾಜ ರಂಗಸ್ವಾಮಿ, ನ್ಯಾ.ಜೆ.ಎಂ.ಖಾಜಿ, ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳಾದ ವೈ.ಎಚ್.ವಿಜಯಕುಮಾರ ಹಾಗೂ ಪ್ರಸನ್ನ ದೇಶಪಾಂಡೆ, ಸಹಾಯಕ ಸಾಲಿಟರ್ ಜನರಲ್ ಸುಧೀರ ಸಿಂಗ್ ವಿಜಯಪುರ, ರಾಜ್ಯ ಬಾರ್ ಕೌನ್ಸಿಲ್ ಸದಸ್ಯ ಕಾಶಿನಾಥ ಮೋತಕಪಲ್ಲಿ, ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ ಎಲಿ, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಎಸ್.ಕಡಗಂಚಿ, ಕರ್ನಾಟಕ ಹೈಕೋರ್ಟ್ ಕಲಬುರ್ಗಿ ಪೀಠದ ಹೆಚ್ಚುವರಿ ರಿಜಿಸ್ಟ್ರಾರ್‌ ಕೆ.ಎಸ್.ವಿಜಯಾ, ಹೆಚ್ಚುವರಿ ರಿಜಿಸ್ಟ್ರಾರ್ (ನ್ಯಾಯಾಂಗ) ಶ್ರೀನಿವಾಸ್ ಸುವರ್ಣ, ವೈದ್ಯಾಧಿಕಾರಿ ಡಾ.ಪ್ರವೀಣಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.