ಕಲಬುರಗಿ: ಮೋಡ ಮುಸುಕಿದ ವಾತಾವರಣ. ಸೂರ್ಯ ಆಗಷ್ಟೇ ಭೂಮಿಯತ್ತ ಇಣುಕುವಂಥ ಕ್ಷಣಗಳವು. ಮಹಾತ್ಮ ಗಾಂಧಿ, ಡಾ.ಅಂಬೇಡ್ಕರ್ ಭಾವಚಿತ್ರ ಪೂಜೆಗೆ ಲಗುಬಗೆ ತಯಾರಿ. ತ್ರಿವರ್ಣಧ್ವಜ ಅದಾಗಲೇ ಮುಗಿಲೆತ್ತರದ ಕಂಬಗಳ ತುದಿಗೆ ಅಲಂಕರಿಸಿತ್ತು. ಗಣ್ಯರು ಹಗ್ಗ ಎಳೆದು ತ್ರಿವರ್ಣ ಧ್ವಜ ಹಾರಿಸಿದರು. ನೆರೆದಿದ್ದವರೆಲ್ಲ ಶಿಸ್ತಿನಿಂದ ಸೆಲ್ಯೂಟ್ ಹೊಡೆದು ‘ಜನ, ಗಣ, ಮನ’ ಮೊಳಗಿಸಿದರು. ಮರುಕ್ಷಣವೇ ದೇಶ ಭಕ್ತಿ ಅನಾವರಣಗೊಂಡಿತು...
ಇಲ್ಲಿನ ಹೈರ್ಕೋಟ್‌ನ ಕಲಬುರಗಿ ಪೀಠ, ಗುಲಬರ್ಗಾ ವಿಶ್ವವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಎಚ್‌ಕೆಇ ಸೊಸೈಟಿಯ ಶಿಕ್ಷಣ ಸಂಸ್ಥೆಗಳು, ಜಿಮ್ಸ್, ಜೆಸ್ಕಾಂ, ಕೆಬಿಎನ್ ವಿವಿ ಸೇರಿದಂತೆ ನಗರದ ವಿವಿಧೆಡೆ ಗುರುವಾರ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗುರುವಾರ ಬೆಳಿಗ್ಗೆ ಇಂಥ ಸಂಭ್ರಮ, ಸಡಗರ, ತ್ರಿವರ್ಣ ಧ್ವಜಾರೋಹಣದ ಪುಳಕ ಕಂಡು ಬಂತು.
‘ವಿದ್ಯುತ್ ಅವಘಡ ತಪ್ಪಿಸಿ’:
‘ಜೆಸ್ಕಾಂ ಸಿಬ್ಬಂದಿ, ರೈತರು ಸೇರಿದಂತೆ ಜನಸಾಮಾನ್ಯರು ವಿದ್ಯುತ್ ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಅದನ್ನು ತಡೆಯಲು ಜೆಸ್ಕಾಂ ಅಧಿಕಾರಿಗಳು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ ಹೇಳಿದರು.
ನಗರದಲ್ಲಿರುವ ಜೆಸ್ಕಾಂ ಕಾರ್ಪೊರೇಟ್ ಕಚೇರಿ ಆವರಣದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಕೃಷಿ ಪಂಪ್‌ಸೆಟ್‌ಗಳ ಖಾತೆಗೆ ಗ್ರಾಹಕರ ಆಧಾರ್ ಜೋಡಣೆ ಮಾಡುವುದರಲ್ಲಿ ಸೆಸ್ಕ್ ನಂತರ ಜೆಸ್ಕಾಂ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಆಧಾರ್ ಜೋಡಣಾ ಕಾರ್ಯವು ಈಗಾಗಲೆ ಶೇ 86ರಷ್ಟು ಮುಗಿದಿದ್ದು, ಶೀಘ್ರದಲ್ಲೇ ಇದನ್ನು ಪೂರ್ಣಗೊಳಿಸಲಾಗುವುದು’ ಎಂದರು.
ಇದೇ ವೇಳೆ, ದೇಶ ಭಕ್ತಿಗೀತೆಗಳ ಗಾಯನ ಮತ್ತು ನಾಟ್ಯ ರೂಪಕ ಪ್ರಸ್ತುತ ಪಡಿಸಿದ ಅಧಿಕಾರಿಗಳು ಮತ್ತು ನೌಕರರನ್ನು ಸನ್ಮಾನಿಸಲಾಯಿತು. ತಾಂತ್ರಿಕ ನಿರ್ದೇಶಕ ಎನ್.ಆರ್.ಎಂ. ನಾಗರಾಜನ್, ಪ್ರಧಾನ ವ್ಯವಸ್ಥಾಪಕ ಆಶಪ್ಪ, ಮುಖ್ಯ ಎಂಜಿನಿಯರ್ ವೆಂಕಟೇಶ ಪ್ರಸಾದ್, ಪೊಲೀಸ್ ಅಧೀಕ್ಷಕ ಕರುಣಾಕರ ಶೆಟ್ಟಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಿರಿಯ ಆಪ್ತ ಕಾರ್ಯದರ್ಶಿ ಮಹ್ಮದ್ ಮಿನ್ವಾಜುದ್ದೀನ್ ಕಾರ್ಯಕ್ರಮ ನಿರೂಪಿಸಿದರು.
ಆರ್.ಟಿ.ಐ. ಪೀಠ:
ನಗರದ ಮಹಲ್–ಎ–ಶಾಹಿ ಅತಿಥಿ ಗೃಹದಲ್ಲಿರುವ ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠ ಕಚೇರಿಯಲ್ಲಿ ಗುರುವಾರ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಕಲಬುರಗಿ ಪೀಠದ ಆಯುಕ್ತ ರವೀಂದ್ರ ಡಾಕಪ್ಪ ರಾಷ್ಟ್ರ ಧ್ವಜಾರೋಹಣ ನಡೆಸಿದರು. ಇದೇ ವೇಳೆ ಸಸಿ ನೆಟ್ಟು ಪರಿಸರ ಕಾಳಜಿ ಮೆರೆಯಲಾಯಿತು.
ಜಿಲ್ಲಾಧಿಕಾರಿ ಕಚೇರಿ:
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ ಸೇರಿದಂತೆ ಡಿ.ಸಿ. ಕಚೇರಿ ಹಾಗೂ ಮಿನಿ ವಿಧಾನಸೌಧದಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿ–ಸಿಬ್ಬಂದಿ ಪಾಲ್ಗೊಂಡಿದ್ದರು.
ಗುಲಬರ್ಗಾ ವಿವಿ:
‘ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಮಹಾನ್ ನಾಯಕರ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳನ್ನು ಯುವಕರು ಮರೆಯಬಾರದು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ದಯಾನಂದ ಅಗಸರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧದ ಮುಂಭಾಗ ಆಯೋಜಿಸಿದ್ದ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯದಂತೆ ದೇಶ ಪ್ರಬಲ ಶಕ್ತಿಯಾಗಿ ಬೆಳೆದಿದೆ. ಸಾಮಾಜಿಕ ಉನ್ನತಿ ಸಾಧನೆಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಾಮರಸ್ಯದ ಜೀವನ ಪ್ರತಿಯೊಬ್ಬರ ಕನಸಾಗಬೇಕು. ಯುವಕರು ಕುವೆಂಪು ಅವರ ವಿಶ್ವಮಾನವ ಸಂದೇಶ, ಬಸವಣ್ಣನವರ ಚಿಂತನೆಗಳ ಮಾರ್ಗದಲ್ಲಿ ನಡೆಯಬೇಕು’ ಎಂದರು.
ಕುಲಸಚಿವ ಪ್ರೊ.ರಾಜನಾಳ್ಕರ್ ಲಕ್ಷ್ಮಣ, ಕುಲಸಚಿವೆ ಪ್ರೊ.ಮೇಧಾವಿನಿ ಕಟ್ಟಿ, ವಿತ್ತಾಧಿಕಾರಿ ಗಾಯತ್ರಿ, ಆಡಳಿತ ವಿಶೇಷಾಧಿಕಾರಿ ಪ್ರೊ.ಚಂದ್ರಕಾಂತ ಕೆಳಮನಿ, ಕಲಾ ನಿಕಾಯದ ಡೀನ್ ಪ್ರೊ.ರಬ್ ಉಸ್ತಾದ್, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಶ್ರೀರಾಮುಲು, ಶಿಕ್ಷಣ ನಿಕಾಯದ ಡೀನ್ ಪ್ರೊ.ಹೂವಿನಬಾವಿ ಬಾಬಣ್ಣ, ಕಾನೂನು ನಿಕಾಯದ ಡೀನ್ ಪ್ರೊ.ದೇವಿದಾಸ ಮಾಲೆ, ಗ್ರಂಥಪಾಲಕ ಸುರೇಶ್ ಜಂಗೆ, ಪ್ರೊ.ಎಚ್.ಟಿ.ಪೋತೆ, ಪ್ರೊ.ಜಿ.ಎಂ.ವಿದ್ಯಾಸಾಗರ, ಪ್ರೊ.ಕೆರೂರು, ಪ್ರೊ.ರಮೇಶ್ ರಾಥೋಡ್, ಪ್ರೊ.ಎನ್.ಜಿ. ಕಣ್ಣೂರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
‘ಹರ್ ಘರ್ ತಿರಂಗಾ’ ಅಂಗವಾಗಿ ವಿಶ್ವವಿದ್ಯಾಲಯದ ಕಾರ್ಯಸೌಧದಿಂದ ಗ್ರಂಥಾಲಯದವರೆಗೆ ಕುಲಪತಿ ಅಗಸರ ನೇತೃತ್ವದಲ್ಲಿ ವಿದ್ಯಾರ್ಥಿಗಳು ತ್ರಿವರ್ಣ ಧ್ವಜ ಹಿಡಿದು ಸಾಗಿ ದೇಶಭಿಮಾನ ಮೆರೆದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಪ್ರಸ್ತುತಪಡಿಸಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಾಲೆಯ ವಿದ್ಯಾರ್ಥಿಗಳು ದೇಶ ಭಕ್ತಿಗೀತೆ ಪ್ರಸ್ತುತಿಗೆ ನೃತ್ಯ ಪ್ರದರ್ಶಿಸಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ರಮೇಶ್ ಲಂಡನ್‌ಕರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಜಿಮ್ಸ್:
ನಗರದ ಜಿಮ್ಸ್ ಆಸ್ಪತ್ರೆ ಪ್ರಾಂಗಣದಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಜಿಲ್ಲಾ ಶಸ್ತ್ರಜ್ಞ, ಡಾ.ಓಂ ಪ್ರಕಾಶ್ ಅಂಬೂರೆ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ‘ಇಂದಿನ ಯುವಕರು ಕುಡಿತ, ಬೀಡಿ, ಸಿಗರೇಟ್, ಮಾದಕ ವ್ಯಸನಗಳಿಗೆ ಒಳಗಾಗುತ್ತಿದ್ದು, ಜೀವ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಅರಿವು ಮೂಡಿಸಲು ನಮ್ಮ ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರ ನೀಡಬೇಕು’ ಎಂದರು.
‘ನಶೆಮುಕ್ತ ಅಭಿಯಾನ’ದ ಭಾಗವಾಗಿ ಸಹಾಯಕ ಅಧೀಕ್ಷಕ ಸಂಜೀವರಾವ್ ಮಹಿಪತಿ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ವೇಳೆ, ನೂತನ ರಕ್ತ ಶೇಖರಣೆ ಸಾಗಣೆ ವಾಹನವನ್ನು ಡಾ.ಓಂ ಪ್ರಕಾಶ ಅಂಬೂರೆ ಉದ್ಘಾಟಿಸಿದರು. ಜಿಮ್ಸ್ ಆಸ್ಪತ್ರೆ ಪ್ರಾಂಗಣದಲ್ಲಿ ಸಸಿ ನೆಡಲಾಯಿತು.
ಡಾ.ರಾಜಶೇಖರ ಮಾಲಿ, ಡಾ.ರವೀಂದ್ರ ನಾಗಲೀಕರ, ಡಾ.ಮಮತಾ ಪಾಟೀಲ, ಡಾ.ಜಗದೀಶ ಕಟ್ಟಿಮನಿ, ಡಾ.ವಿನೋದಕುಮಾರ, ಡಾ.ರಾಜೇಂದ್ರ ಗುಡ್ಡೆಮನೆ, ಡಾ.ಸಂಯೋಗಿತಾ ಕುಲಕರ್ಣಿ, ಡಾ.ಶಶಿಕಲಾ ಪೂಜಾರ, ಡಾ.ಶೋಭಾ ಪಾಟೀಲ, ಡಾ.ರೂಖಿಯಾ ಆಸನಾ ರಬ್ಬ, ಡಾ.ಎ.ಪಿ.ಝಂಪಾ, ಡೆಂಟಲ್ ಸರ್ಜನ್ ಡಾ.ಸಂಗಮ್ಮ ತಿಪ್ಪಶೆಟ್ಟಿ, ಡಾ.ಶ್ವೇತಾ ದೇವದುರ್ಗ, ವೀರಣ್ಣ ಶಿವಪುರ ಸೇರಿದಂತೆ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೆಬಿಎನ್ ವಿವಿ:
‘ಭಾರತ ದೇಶದ ಪ್ರಗತಿ ಶಿಕ್ಷಣದಿಂದ ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು’ ಎಂದು ಕೆಬಿಎನ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಸಯ್ಯದ ಮುಹಮ್ಮದಅಲಿ ಅಲ್ ಹುಸೇನಿ ಹೇಳಿದರು.
ನಗರದ ಖಾಜಾ ಬಂದಾನವಾಜ್ ವಿವಿಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಆಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘ಇತ್ತೀಚೆಗೆ ಜ್ಞಾನ ಪಡೆಯಲು ಅಂತರ್ಜಾಲದಂಥ ಮಾರ್ಗಗಳಿವೆ. ಪ್ರತಿ ಪ್ರಜೆಯೂ ತಮ್ಮನ್ನು ಅಪ್‌ಡೇಟ್, ಅಪ್‌ಗ್ರೇಡ್ ಮಾಡಿಕೊಳ್ಳಬೇಕು’ ಎಂದರು.
ಉಪಕುಲಪತಿ ಪ್ರೊ.ಅಲಿರಜಾ ಮೂಸ್ವಿ ಮಾತನಾಡಿದರು. ಸಯ್ಯದ್ ಅಕ್ಬರ್ ಹುಸೇನಿ ಶಾಲೆಯ ಎನ್‌ಸಿಸಿ ಘಟಕದ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿದರು. ಸ್ವಾತಂತ್ರೋತ್ಸವದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿವಿಧ ನಿಕಾಯ ಡೀನ್‌ಗಳಾದ ಡಾ.ಸಿದ್ದೇಶ್ ಸಿರವಾರ, ಪ್ರೊ.ಆಜಮ್, ಡಾ. ಸಿದ್ಧಲಿಂಗ ಚೆಂಗಟಿ, ಪ್ರೊ.ನಿಶಾತ್ ಆರೀಫ್ ಹುಸೇನಿ ಸೇರಿದಂತೆ ಡಾ.ಬಷೀರ್, ಡಾ.ರಾಧಿಕಾ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
‘ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಕ’
ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಅಭಿವೃದ್ಧಿಗಾಗಿ 371(ಜೆ) ಕಲಂ ಜಾರಿಗೆ ತರಲಾಯಿತು. ಪ್ರಾದೇಶಿಕ ಅಸಮಾನತೆ ತೆಗೆದು ಹಾಕಲು ಅದು ಸಹಕಾರಿಯಾಗಿದೆ’ ಎಂದು ಹಿರಿಯ ನ್ಯಾಯಮೂರ್ತಿ ಎಸ್. ಸುನೀಲ್ ದತ್ತ್ ಯಾದವ್ ಅಭಿಪ್ರಾಯಪಟ್ಟರು. ಇಲ್ಲಿನ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠದಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ನ್ಯಾಯಾಂಗವು ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಕ. ಎಲ್ಲ ನಾಗರಿಕರ ಹಕ್ಕುಗಳ ರಕ್ಷಣೆ ಸಂವಿಧಾನಿಕ ನಿಬಂಧನೆಗಳು ಕೇವಲ ಪದಗಳಲ್ಲ. ಜನರ ಜೀವನಮಟ್ಟ ಸುಧಾರಿಸುವ ಸ್ಪಷ್ಟವಾದ ಕ್ರಿಯೆಗಳಾಗಿವೆ ಎಂಬುದನ್ನು ಅದು ಖಚಿತಪಡಿಸುತ್ತದೆ. ಸಾರ್ವಜನಿಕ ಜೀವನದಲ್ಲಿ ನಾವೆಲ್ಲರೂ ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಲಾದ ಮೌಲ್ಯಗಳಿಗೆ ನಮ್ಮನ್ನು ನಾವು ಪುನರ್ ಸಮರ್ಪಿಸಿಕೊಳ್ಳಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು. ನ್ಯಾಯಮೂರ್ತಿಗಳಾದ ಅನಂತ ರಾಮನಾಥ್ ಹೆಗಡೆ ರಾಮಚಂದ್ರ ಡಿ. ಹುದ್ದಾರ ಸೇರಿದಂತೆ ಹೆಚ್ಚುವರಿ ಮಹಾಲೇಖನಾಧಿಕಾರಿ ಬಸವರಾಜ್ ಚೇಂಗಟಿ ನ್ಯಾಯಾಂಗದ ಹೆಚ್ಚುವರಿ ಮಹಾ ಲೇಖನಾಧಿಕಾರಿ ದಯಾನಂದ ಹಿರೇಮಠ ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷ ಗುಪ್ತಲಿಂಗ ಪಾಟೀಲ ಉಪಾಧ್ಯಕ್ಷ ಅಶೋಕ ಮುಳಗೆ ಸೇರಿದಂತೆ ಪ್ರಧಾನ ಕಾರ್ಯದರ್ಶಿಗಳು ಪದಾಧಿಕಾರಿಗಳು ಸಂಘದ ಸದಸ್ಯರು ಹಿರಿಯ ಹಾಗೂ ಕಿರಿಯ ವಕೀಲರು ಪಾಲ್ಗೊಂಡಿದ್ದರು.
‘ಆತ್ಮಾವಲೋಕನ ಅಗತ್ಯ’
ಕಲಬುರಗಿ: ‘78ನೇ ಸ್ವಾತಂತ್ರ‍್ಯ ದಿನಾಚರಣೆಯ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳು ದೇಶಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅಭಿಪ್ರಾಯಪಟ್ಟರು. ಇಲ್ಲಿಗೆ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ‘ವಿದೇಶಿ ವಿವಿಗಳು ಏಕೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ನಮ್ಮ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಏಕೆ ಹೋಗುತ್ತಿದ್ದಾರೆ ಎಂಬುದನ್ನು ವಿಶ್ಲೇಷಿಸಬೇಕಿದೆ. ತೆರಿಗೆದಾರರ ಹಣದಲ್ಲಿ ವಿಶ್ವವಿದ್ಯಾಲಯಗಳನ್ನು ನಡೆಸುತ್ತಿದ್ದೇವೆ ಎಂಬುದನ್ನು ಮರೆಯಬಾರದು. ಹಣ ಸಮಯ ಮತ್ತು ಸಂಪನ್ಮೂಲಗಳನ್ನು ಖರ್ಚು ಮಾಡುವ ಮುನ್ನ ನಾವು ಎರಡೆರಡು ಸಲ ಯೋಚಿಸಬೇಕು’ ಎಂದರು. ವಿದ್ಯಾರ್ಥಿಗಳು ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸಿದರು. ಸಂಗೀತ ಮತ್ತು ಲಲಿತಕಲೆಗಳ ಬೋಧಕರು ದೇಶಭಕ್ತಿ ಗೀತೆಗಳನ್ನು ಹಾಡಿದರು. ಕಲಾವಿದ ರವಿಕಿರಣ ನಾಕೋಡ್ ತಬಲಾ ಪ್ರದರ್ಶನ ನೀಡಿದರು. ಪ್ರೊ.ಕುಮಾರ ಮಂಗಲಂ ಮತ್ತು ಪ್ರೊ.ರೇಷ್ಮಾ ನದಾಫ ಕಾರ್ಯಕ್ರಮ ನಿರೂಪಿಸಿದರು. ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್ ಪ್ರೊ.ಚನ್ನವೀರ ಆರ್.ಎಂ. ಡಾ.ಬಸವರಾಜ ಕುಬಕಡ್ಡಿ ಹಣಕಾಸು ಅಧಿಕಾರಿ ಡಿ.ರಾಮದೊರೈ ಡೀನ್‌ರು ಮುಖ್ಯಸ್ಥರು ಅಧ್ಯಾಪಕರು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.