ADVERTISEMENT

ಕಲಬುರಗಿ: ಬಾಗಿಲು ತೆರೆಯದ ಬಡವರ ‘ಅನ್ನದ ಬಟ್ಟಲು’

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ವರುಷ; ಕಲಬುರಗಿಯಲ್ಲಿ ಇಂದಿರಾ ಕ್ಯಾಂಟೀನ್‌ ಮರು ಪ್ರಾರಂಭಿಸಲು ಮೀನಮೇಷ

​ಪ್ರಜಾವಾಣಿ ವಾರ್ತೆ
Published 10 ಜೂನ್ 2024, 6:41 IST
Last Updated 10 ಜೂನ್ 2024, 6:41 IST
ಅಫಜಲಪುರದಲ್ಲಿರುವ ನಿರ್ಮಾಣದ ಹಂತದ ಇಂದಿರಾ ಕ್ಯಾಂಟೀನ್‌ ಕಟ್ಟಡ
ಅಫಜಲಪುರದಲ್ಲಿರುವ ನಿರ್ಮಾಣದ ಹಂತದ ಇಂದಿರಾ ಕ್ಯಾಂಟೀನ್‌ ಕಟ್ಟಡ   

ಕಲಬುರಗಿ: ಬಡಜನರು, ಅಸಂಘಟಿತ ವಲಯದ ಕಾರ್ಮಿಕರು, ಬಡ ವಿದ್ಯಾರ್ಥಿಗಳಿಗೆ ಅಲ್ಪಮೊತ್ತದಲ್ಲಿ ಪೌಷ್ಟಿಕಾಂಶಯುತ ಆಹಾರ ಒದಗಿಸುವ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್‌ ಯೋಜನೆಗೆ ಜಿಲ್ಲಾ ಕೇಂದ್ರ ಕಲಬುರಗಿಯಲ್ಲೇ ಗ್ರಹಣ ಹಿಡಿದಿದೆ.

ಕೆಲವೇ ರೂಪಾಯಿಗಳಲ್ಲಿ ಹಸಿವು ತಣಿಸುತ್ತಿದ್ದ ‘ಅನ್ನದ ಬಟ್ಟಲು’ ಬಾಗಿಲು ತೆರೆಯದ ಕಾರಣ ಬಡವರು, ಕಾರ್ಮಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ವಗ್ಗರಣೆಯ ಘಮ ಆವರಿಸಬೇಕಿದ್ದ ತಾಣದಲ್ಲಿ ದೂಳು ಆವರಿಸಿದೆ. ಹಸಿವು ನೀಗಿ ತೃಪ್ತಿಯ ಮುಗುಳ್ನಗೆ ಕಾರಣವಾಗಬೇಕಿದ್ದ ಕ್ಯಾಂಟೀನ್‌ಗಳತ್ತ ಬಡ ಕಾರ್ಮಿಕರು ಯಾವಾಗ ಬಾಗಿಲು ತೆರೆಯಬಹುದೆಂಬ ನಿರೀಕ್ಷೆಯೊಂದಿಗೆ ನಿತ್ಯ ಕಣ್ಣು ಹಾಯಿಸುವಂತಾಗಿದೆ.

ADVERTISEMENT

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್‌ಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದವು. ಕಲಬುರಗಿಯಲ್ಲಿರುವ ಕ್ಯಾಂಟೀನ್‌ಗಳು ಬಾಗಿಲು ಮುಚ್ಚಿದ್ದವು. ಕಳೆದ ವರ್ಷ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಈ ಕ್ಯಾಂಟೀನ್‌ಗಳಿಗೆ ಮರುಜೀವ ಸಿಗಲಿದೆ ಎಂದು ಜನ ನಿರೀಕ್ಷಿಸಿದ್ದರು. ಆದರೆ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದರೂ, ಜಿಲ್ಲಾ ಕೇಂದ್ರದಲ್ಲೇ ಇನ್ನೂ ಇಂದಿರಾ ಕ್ಯಾಂಟೀನ್‌ಗಳು ಬಾಗಿಲು ತೆರೆದಿಲ್ಲ.

ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಹಾನಗರ ಪಾಲಿಕೆ, ಎಪಿಎಂಸಿ, ಸೂಪರ್‌ ಮಾರ್ಕೆಟ್‌, ಆಳಂದ ಚೆಕ್‌ಪೋಸ್ಟ್‌ಗಳಲ್ಲಿರುವ ಇಂದಿರಾ ಕ್ಯಾಂಟೀನ್‌ಗಳು ಪಾಳುಬಿದ್ದಿವೆ.

ಕಲಬುರಗಿಯಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು ಜಿಮ್ಸ್‌ ಆವರಣದಲ್ಲಿ ನಿರ್ಮಿಸಿದ್ದ ‘ಮಾಸ್ಟರ್‌ ಕಿಚನ್‌’ ಹಾಳು ಬಿದ್ದಿದೆ. ಸಿಸಿಟಿವಿ ಕ್ಯಾಮೆರಾ, ಕಿಚನ್‌ ಬಾಗಿಲು, ಶೌಚಾಲಯ ಬಾಗಿಲು ಮುರಿದಿವೆ. ಕನಿಷ್ಠ ಬಾಗಿಲುಗಳನ್ನೂ ಸರಿಯಾಗಿ ಮುಚ್ಚದಿರುವುದು ನಿರ್ಲಕ್ಷ್ಯಕ್ಕೆ ಕನ್ನಡ ಹಿಡಿಯುತ್ತವೆ.

ನಿರ್ಮಾಣವೇ ಆಗಿಲ್ಲ:

ಜಿಲ್ಲೆಯ ಕಾಳಗಿ, ಯಡ್ರಾಮಿ ಸೇರಿದಂತೆ ಕೆಲ ತಾಲ್ಲೂಕುಗಳಲ್ಲಿ ಈತನಕ ಇಂದಿರಾ ಕ್ಯಾಂಟೀನ್‌ ಗಗನ ಕುಸುಮವಾಗಿದೆ. ಇನ್ನು, ಶಹಾಬಾದ್, ಸೇಡಂ, ಜೇವರ್ಗಿಗೆ ಇಂದಿರಾ ಕ್ಯಾಂಟೀನ್‌ ಮಂಜೂರಾಗಿದ್ದು, ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದೆ.

‘ರಾಜ್ಯ ಸರ್ಕಾರದ ಆದೇಶದ ಮೇರೆಗೆ ಶಹಾಬಾದ್‌ನಲ್ಲಿ ಇಂದಿರಾ ಕ್ಯಾಂಟೀನ್ ಕೆಲಸ ಪ್ರಾರಂಭವಾಗಿದೆ. 20 ದಿನಗಳಲ್ಲಿ ಕ್ಯಾಂಟೀನ್ ನಿರ್ಮಾಣವಾಗಲಿದೆ. ಕ್ಯಾಂಟೀನ್‌ಗೆ ಆರಂಭದಲ್ಲಿ ಜಾಗದ ಸಮಸ್ಯೆಯಾಗಿತ್ತು. ಇದೀಗ ನಗರಸಭೆ ಎದುರಿನ ಸರ್ಕಾರಿ ಆಸ್ಪತ್ರೆ ಪಕ್ಕದ ಜಾಗವನ್ನು ಕ್ಯಾಂಟೀನ್‌ ಸ್ಥಾಪನೆಗೆ ಗುರುತಿಸಲಾಗಿದ್ದು, ಕೆಲಸವೂ ಪ್ರಾರಂಭಿಸಿದ್ದೇವೆ’ ಎಂದು ಶಹಾಬಾದ್‌ ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ತಿಳಿಸಿದ್ದಾರೆ.

‘ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಜೇವರ್ಗಿ ಪಟ್ಟಣದ ಹಳೇ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ಈಗಾಗಲೇ ಸ್ಥಳ ಗುರುತಿಸಲಾಗಿದೆ. ಶೀಘ್ರವೇ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ’ ಎಂದು ಜೇವರ್ಗಿ ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಹೇಳಿದ್ದಾರೆ.

ಮುಗಿಯುವ ಹಂತದಲ್ಲಿ ಕ್ಯಾಂಟೀನ್‌:

ಅಂದಾಜು ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಅಫಜಲಪುರ ಪಟ್ಟಣದ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಇದೀಗ ಅಂತಿಮ ಘಟ್ಟ ತಲುಪಿದೆ. ‘ಒಂದು ತಿಂಗಳಲ್ಲಿ ಕಟ್ಟಡ ಸಂಪೂರ್ಣ ಮುಗಿಯಲಿದ್ದು, ಬಳಿಕ ಇಂದಿರಾ ಕ್ಯಾಂಟೀನ್ ಬಡ ಜನರ ಹಸಿವು ನೀಗಿಸಲಿದೆ’ ಎನ್ನುತ್ತಾರೆ ಅಫಜಲಪುರ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಮಠದ.

ಚಿಂಚೋಳಿಯ ಬಸ್ ನಿಲ್ದಾಣದ ಎದುರಿನ ಇಂದಿರಾ ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳು ಹಸಿವು ತಣಿಸಿಕೊಂಡರು

ಸ್ಥಳ ಬದಲಾವಣೆಗೆ ಆಗ್ರಹ:

ಇನ್ನು, ‘ಕಾರ್ಮಿಕ ನಗರಿ’ ವಾಡಿಗೆ ಇಂದಿರಾ ಕ್ಯಾಂಟೀನ್ ಈ ವರ್ಷವಷ್ಟೇ ಮಂಜೂರಾಗಿದೆ. ಆದರೆ, ಇಂದಿರಾ ಕ್ಯಾಂಟೀನ್ ಪಟ್ಟಣದಲ್ಲಿ ನಿರ್ಮಿಸುವ ಬದಲು 2 ಕಿ.ಮೀ ದೂರದ ಬಳಿರಾಮ್ ಚೌಕ್‌ನಲ್ಲಿ ನಿರ್ಮಿಸಲಾಗುತ್ತಿದೆ. ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

‘ಬಳಿರಾಮ್ ಚೌಕ್‌ನಲ್ಲಿ ಕ್ಯಾಂಟೀನ್‌ ನಿರ್ಮಿಸಿದರೆ ಕೂಲಿ ಕಾರ್ಮಿಕರಿಗೆ ಅನುಕೂಲ ಆಗಲ್ಲ. ವಾಡಿ ಪಟ್ಟಣದ ಶ್ರೀನಿವಾಸ್ ಗುಡಿ ಚೌಕ ವೃತ್ತದಲ್ಲಿ ಕ್ಯಾಂಟೀನ್ ಆರಂಭಿಸಬೇಕು’ ಎಂಬುದು ಜನರ ಆಗ್ರಹ.

ಚಿತ್ತಾಪುರದ ಇಂದಿರಾ ಕ್ಯಾಂಟೀನ್‌ನಲ್ಲಿ ವ್ಯಕ್ತಿಯೊಬ್ಬರು ಊಟ ಮಾಡಿದರು

ಪೂರಕ ಮಾಹಿತಿ: ಜಗನ್ನಾಥ ಶೇರಿಕಾರ, ಮಲ್ಲಿಕಾರ್ಜುನ ಎಚ್.ಎಂ., ವೆಂಕಟೇಶ ಹರವಾಳ, ಶಿವಾನಂದ ಹಸರಗುಂಡಗಿ, ಸಿದ್ದರಾಜ ಎಸ್.ಮಲಕಂಡಿ, ನಿಂಗಣ್ಣ ಜಂಬಗಿ, ಮಂಜುನಾಥ ದೊಡಮನಿ, ಗುಂಡಪ್ಪ ಕರೆಮನೋರ, ಅವಿನಾಶ ಬೋರಂಚಿ

ಭೀಮರಾಯ ಕಂದಳ್ಳಿ
ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ
ಜೇವರ್ಗಿ ಬಸ್ ನಿಲ್ದಾಣದಿಂದ ಮಿನಿ ವಿಧಾನಸೌಧದವರೆಗೆ ಯಾವುದಾದರೊಂದು ಕಡೆ ಇಂದಿರಾ ಕ್ಯಾಂಟೀನ್ ನಿರ್ಮಿಸಬೇಕು. ಬೇಗ ಆರಂಭಿಸಿದರೆ ಬಡವರು ಕಾರ್ಮಿಕರು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ
ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ ಜೇವರ್ಗಿ ಮುಖಂಡ
ಶಿವು ಹೊಟಕರ
ಜಿಲ್ಲೆಯ ಬೇರೆ ತಾಲ್ಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭವಾಗಿ ಎರಡ್ಮೂರು ವರ್ಷವಾಯಿತು. ಅಫಜಲಪುರದಲ್ಲಿ ಕೂಡಲೇ ಕ್ಯಾಂಟೀನ್‌ ಆರಂಭಿಸಿದರೆ ಕಾರ್ಮಿಕ ವರ್ಗಕ್ಕೆ ನೆರವಾಗುತ್ತದೆ
ಶಿವು ಹೊಟಕರ ಅಧ್ಯಕ್ಷ ತಾಲ್ಲೂಕು ಕಟ್ಟಡ ಕಾರ್ಮಿಕ ಸಂಘ ಅಫಜಲಪುರ
‘ಶೀಘ್ರವೇ ಸಭೆ ನಡೆಸಿ ಕ್ರಮವಹಿಸುವೆ’
‘ಹಿಂದಿನ ಸರ್ಕಾರದ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರು–ಪಾಲಿಕೆ ನಡುವಣ ಲೆಕ್ಕದ ವ್ಯತ್ಯಾಸದಿಂದಾಗಿ ಕಲಬುರಗಿಯಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭ ವಿಳಂಬವಾಗಿದೆ. ಕಳೆದ ಮೂರು ತಿಂಗಳು ಚುನಾವಣೆಯಿಂದಾಗಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಅದು ಇದೀಗ ಮುಗಿದಿದೆ. ಹೊಸ ಸ್ವರೂಪದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಸಿದ್ಧತೆ ನಡೆದಿದೆ. ಇಂದಿರಾ ಕ್ಯಾಂಟೀನ್‌ ಆರಂಭದ ಕುರಿತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ನಡೆಸಿ ತ್ವರಿತವಾಗಿ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಇನ್ನೆರಡು ಹೊಸ ಕ್ಯಾಂಟೀನ್‌ಗೆ ಪ್ರಸ್ತಾವ’

‘ಕಲಬುರಗಿಯಲ್ಲಿ ಈಗಿರುವ ಏಳು ಕ್ಯಾಂಟೀನ್‌ಗಳ ಜೊತೆಗೆ ಇನ್ನೆರಡು ಹೊಸ ಇಂದಿರಾ ಕ್ಯಾಂಟೀನ್‌ಗಳ ಆರಂಭಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕ್ಯಾಂಟೀನ್‌ಗಳ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ನಡೆಸುತ್ತಿರುವ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ’ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ಪಾಲಿಕೆ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ ನಿರ್ವಹಣೆಯಿಂದ ಪಾಲಿಕೆಗೆ ಆರ್ಥಿಕ ಹೊರೆಯಿದೆ. ಈ ಹಿಂದೆ ಕ್ಯಾಂಟೀನ್‌ ನಿರ್ವಹಿಸುತ್ತಿದ್ದ ಗುತ್ತಿಗೆದಾರರಿಗೆ ₹ 6 ಕೋಟಿಗಳಷ್ಟು ಮೊತ್ತ ಪಾವತಿಸಬೇಕಿತ್ತು. ಅದರಲ್ಲಿ ಈಗಾಗಲೇ ಶೇ 50ರಷ್ಟು ಪಾವತಿಸಲಾಗಿದೆ. ಇನ್ನುಳಿದ ಮೊತ್ತವನ್ನೂ ಶೀಘ್ರವೇ ಪಾವತಿಸಿ ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ಮರು ಆರಂಭಕ್ಕೆ ಕ್ರಮವಹಿಸಲಾಗುವುದು’ ಎಂದರು.

ಕೂಡಲೇ ಕ್ಯಾಂಟೀನ್‌ ತೆರೆಯಿರಿ!

‘ಇಂದಿರಾ ಕ್ಯಾಂಟೀನ್‌ ಎಲ್ಲ ಕ್ಷೇತ್ರಗಳ ಕಾರ್ಮಿಕರಿಗೆ ಹಸಿವು ನೀಗಿಸುವ ತಾಣ. ಆದರೆ ಜಿಲ್ಲಾ ಕೇಂದ್ರದಲ್ಲಿ ಬಹುತೇಕ ಎರಡು ವರ್ಷಗಳಿಂದ ಅವು ಮುಚ್ಚಿವೆ. ಅವುಗಳನ್ನು ಪುನರಾರಂಭಿಸುವಂತೆ ಜಿಲ್ಲಾಧಿಕಾರಿ ಕಾರ್ಮಿಕ ಇಲಾಖೆ ಅಧಿಕಾರಿಗೆ ಸಂಘದಿಂದ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ. ವಿಧಾನಸಭೆ ಚುನಾವಣೆಗೂ ಮುನ್ನ ಸ್ವತಃ ಕಾಂಗ್ರೆಸ್‌ ನಾಯಕರೂ ‘ಕ್ಯಾಂಟೀನ್‌’ಗೆ ಕಾಯಕಲ್ಪ ನೀಡುವುದಾಗಿ ಹೇಳಿದ್ದರು. ಇದೀಗ ಅವರದೇ ಸರ್ಕಾರ ಅಧಿಕಾರದಲ್ಲಿದ್ದರೂ ಕ್ಯಾಂಟೀನ್‌ ಸ್ಥಿತಿ ಬದಲಾಗಿಲ್ಲ. ಅಲ್ಪ ಮೊತ್ತದಲ್ಲಿ ಬಡವರ ಹಸಿವು ನೀಗುವ ಇಂದಿರಾ ಕ್ಯಾಂಟೀನ್ ಕೂಡಲೇ ಆರಂಭಿಸಬೇಕು’ ಎಂದು ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಭೀಮರಾಯ ಎಂ.ಕಂದಳ್ಳಿ ಆಗ್ರಹಿಸಿದರು.

ತಣಿಸುತ್ತಿದೆ ಹಸಿವು...
ಚಿಂಚೋಳಿಯ ಬಸ್ ನಿಲ್ದಾಣದ ಎದುರಿನ ಇಂದಿರಾ ಕ್ಯಾಂಟೀನ್ ಬಡವರ ಹಸಿವು ನಿರಂತರವಾಗಿ ತಣಿಸುತ್ತಿದೆ. ‘ಸ್ಥಳೀಯ ಆಡಳಿತದಿಂದ ಗುತ್ತಿಗೆದಾರರಿಗೆ ನಿಯಮಿತವಾಗಿ ಬಿಲ್‌ ಬಿಡುಗಡೆಯಾಗುತ್ತಿದೆ. ಇದರಿಂದ ಇಂದಿರಾ ಕ್ಯಾಂಟೀನ್‌ ಕಾರ್ಯನಿರ್ವಹಣೆ ಸುಗಮವಾಗಿ ನಡೆಯುತ್ತಿದ್ದು ನಿತ್ಯ ನೂರಾರು ಮಂದಿ ಕ್ಯಾಂಟೀನ್‌ ಪ್ರಯೋಜನ ಪಡೆಯುತ್ತಿದ್ದಾರೆ. ಬೆಳಿಗ್ಗೆ 250ರಿಂದ 300 ಪ್ಲೇಟ್‌ ಉಪಾಹಾರ ಮಧ್ಯಾಹ್ನ 250 ಪ್ಲೇಟ್‌ ಊಟ ರಾತ್ರಿ 50 ಪ್ಲೇಟ್‌ಗಳಷ್ಟು ಊಟ ಖರ್ಚಾಗುತ್ತಿದೆ’ ಎಂದು ಕ್ಯಾಂಟೀನ್ ಉದ್ಯೋಗಿ ತಿಮ್ಮಣ್ಣ ಭೋವಿ ಹೇಳುತ್ತಾರೆ. ನಿತ್ಯ 100ರಷ್ಟು ಗ್ರಾಹಕರು! ಚಿತ್ತಾಪುರ ಎಪಿಎಂಸಿ ಸಮೀಪದಲ್ಲಿರುವ ಇಂದಿರಾ ಕ್ಯಾಂಟೀನ್‌ ನಿರಂತರವಾಗಿ ಸೇವೆ ನೀಡುತ್ತಿದ್ದರೂ ನಿರೀಕ್ಷೆಯಷ್ಟು ಗ್ರಾಹಕರು ಬರುತ್ತಿಲ್ಲ! ಅಲ್ಪ ಮೊತ್ತದಲ್ಲಿ ಬಡವರ ಹಸಿವು ನೀಗಿಸಲು ಆರಂಭವಾದ ಕ್ಯಾಂಟೀನ್‌ಗೆ ನಿತ್ಯ 50ರಿಂದ 100 ಗ್ರಾಹಕರು ಭೇಟಿ ನೀಡಿ ಹಸಿವು ತಣಿಸಿಕೊಳ್ಳುತ್ತಿದ್ದಾರೆ. ಗ್ರಾಹಕರ ಸಂಖ್ಯೆ ಅಂದಾಜಿಸಿ ಉಪಾಹಾರ ಊಟ ಸಿದ್ಧಪಡಿಸಲಾಗುತ್ತಿದೆ. ಹೆಚ್ಚಿನ ಗ್ರಾಹಕರು ಬಂದರೆ ತಕ್ಷಣ ಊಟ ಸಿದ್ಧಪಡಿಸಿ ಕೊಡುತ್ತೇವೆ. ಅಡುಗೆಗೆ ಬೇಕಾದ ಸಾಮಾನು ತರಕಾರಿ ಖರೀದಿಗೆ ಗುತ್ತಿಗೆದಾರರು ಹಣ ಹಾಕುತ್ತಾರೆ’ ಎಂದು ಕ್ಯಾಂಟೀನ್ ಸಿಬ್ಬಂದಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.