ADVERTISEMENT

ಬಿಜೆಪಿಯಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ: ಜೆ.ಎಂ. ಕೊರಬು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 14:23 IST
Last Updated 23 ಏಪ್ರಿಲ್ 2024, 14:23 IST
ಜೆ.ಎಂ.ಕೊರಬು
ಜೆ.ಎಂ.ಕೊರಬು   

ಕಲಬುರಗಿ: ‘ಹಿಂದಿನಿಂದಲೂ ಹಿಂದುಳಿದ ವರ್ಗಗಳಿಗೆ ಬಿಜೆಪಿ ಅನ್ಯಾಯ ಮಾಡಿದೆ. ಅವರ ಮತ ಕೇಳುವ ನೈತಿಕತೆ ಬಿಜೆಪಿಗಿಲ್ಲ’ ಎಂದು ಅಹಿಂದ ಕರ್ನಾಟಕ ಅಲ್ಪಸಂಖ್ಯಾತರ ಹಿಂದುಳಿದವರ ದಲಿತರ ಒಕ್ಕೂಟ(ರಿ)ದ ಜಿಲ್ಲಾ ಘಟಕದ ಅಧ್ಯಕ್ಷ ಜೆ.ಎಂ. ಕೊರಬು ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡುವುದನ್ನು ವಿರೋಧಿಸಿದವರ ಪರ ಬಿಜೆಪಿ ನಾಯಕ ರಾಮಜೋಯಿಸ್ ವಕಾಲತ್ತು ವಹಿಸಿದ್ದರು. ಬಿಜೆಪಿ ಹಿಂದುಳಿದ ವರ್ಗಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ’ ಎಂದು ಆರೋಪಿಸಿದರು.

‘ಕಳೆದ ವಿಧಾನಸಭೆ, ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಕೋಲಿ, ಕುರುಬ ಸಮಾಜವನ್ನು ಎಸ್.ಟಿ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡುವುದಾಗಿ ಭರವಸೆ ನೀಡಿದ್ದರು. ಈವರೆಗೆ ಅದು ಸಾಧ್ಯವಾಗಿಲ್ಲ. ಆರ್‌ಎಸ್‌ಎಸ್ ಹಿಡಿತದಲ್ಲಿರುವ ಬಿಜೆಪಿ, ಹಿಂದುಳಿದ ವರ್ಗಕ್ಕೆ ಏನನ್ನೂ ನೀಡಲು ಸಾಧ್ಯವಿಲ್ಲ. ಹಿಂದುಳಿದ ವರ್ಗಗಳ ಪರ ಇರುವ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನೀಡಿದ ಎಲ್ಲ ಗ್ಯಾರಂಟಿ ಜಾರಿಗೆ ತಂದಿದೆ. ಲೋಕಸಭೆ ಚುನಾವಣೆಯಲ್ಲಿ 25 ಗ್ಯಾರಂಟಿಗಳನ್ನು ನೀಡಿದೆ. ಅವುಗಳು ಸಿಗಬೇಕಾದರೆ ಕಾಂಗ್ರೆಸ್‌ ಪಕ್ಷ ಹಾಗೂ ಕಲಬುರಗಿಯ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗುರುಶಾಂತಯ್ಯ ಝಳಕಿ, ದುಂಡಪ್ಪ ಆರ್. ಗೌಡಗಾಂವ, ಖಾಜಪ್ಪ ಭಜಂತ್ರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.