ADVERTISEMENT

ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಭ್ರಾತೃತ್ವದ ಸಂದೇಶ ಸಾರಿದ ಮಾನವ ಸರಪಳಿ

113 ಕಿ.ಮೀ. ಉದ್ದ, 1 ಲಕ್ಷಕ್ಕೂ ಹೆಚ್ಚು ಮಂದಿ ಉತ್ಸಾಹದಿಂದ ಭಾಗಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 3:20 IST
Last Updated 16 ಸೆಪ್ಟೆಂಬರ್ 2024, 3:20 IST
<div class="paragraphs"><p>ಕಲಬುರಗಿಯಲ್ಲಿ ಭಾನುವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ, ಡಿಸಿ ಬಿ.ಫೌಜಿಯಾ ತರನ್ನುಮ್,&nbsp; ಸಂವಿಧಾನ ಪೀಠಿಕೆ ಓದಿದರು.&nbsp; &nbsp; &nbsp;&nbsp;</p></div>

ಕಲಬುರಗಿಯಲ್ಲಿ ಭಾನುವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ, ಡಿಸಿ ಬಿ.ಫೌಜಿಯಾ ತರನ್ನುಮ್,  ಸಂವಿಧಾನ ಪೀಠಿಕೆ ಓದಿದರು.      

   

 ಪ್ರಜಾವಾಣಿ ಚಿತ್ರ

ಕಲಬುರಗಿ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾನುವಾರ ಕಮಲಾಪುರದ ಕಿಣ್ಣಿಸಡಕ್‌ನಿಂದ ಚಿತ್ತಾಪುರದ ದೇವಲ ನಾಯಕ ತಾಂಡಾವರೆಗಿನ ಸುಮಾರು 113 ಕಿ.ಮೀ. ಉದ್ದ 1 ಲಕ್ಷಕ್ಕೂ ಹೆಚ್ಚು ಮಂದಿ ನಿಂತು ಮಾನವ ಸರಪಳಿ ರಚಿಸಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಂದೇಶ ಸಾರಿದರು.

ADVERTISEMENT

ಬೀದರ್‌ನಿಂದ ಚಾಮರಾಜನಗರ ವರೆಗಿನ 2,500 ಕಿ.ಮೀ. ಉದ್ದ ಮಾನವ ಸರಪಳಿ ನಿರ್ಮಿಸಿ ವಿಶ್ವದಾಖಲೆ ಬರೆಯುವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಜಿಲ್ಲೆಯ ಶಾಲಾ ಮಕ್ಕಳು, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯರು, ಕೂಲಿ ಕಾರ್ಮಿಕರು, ಸಾರ್ವಜನಿಕರು, ಅಧಿಕಾರಿ-ನೌಕರರು, ಚುನಾಯಿತ ಜನಪ್ರತಿನಿಧಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.

ರಿಂಗ್ ರಸ್ತೆಯ ವೀರಶೈವ ಕಲ್ಯಾಣ ಮಂಟಪದ ಬಳಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ‘ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಸಮಾನತೆಯ ಸಂಕೇತವಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಯು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಂವಿಧಾನವೇ ತಳಹದಿಯಾಗಿದೆ’ ಎಂದರು.

‘ಸಂವಿಧಾನದ ಆಶಯಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಪ್ರಜಾಪ್ರಭುತ್ವ ಸರಿಯಾದ ಮಾರ್ಗವಾಗಿದೆ. ಸಂವಿಧಾನ ಬಗ್ಗೆ ಪ್ರತಿಯೊಬ್ಬರಿಗೆ ಅರಿವು ಮೂಡಿಸಿ, ಅದರ ಅಂಶಗಳನ್ನು ತಿಳಿಸಲು ಮಾನವ ಸರಪಳಿ ಅಭಿಯಾನ ನಡೆಸಲಾಗಿದೆ’ ಎಂದು ಹೇಳಿದರು.

‘ವಿಶ್ವದಲ್ಲಿ ಹಲವು ರಾಷ್ಟ್ರಗಳು ಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆದಿದ್ದನ್ನು ಕಂಡಿದ್ದೇವೆ. ಆದರೆ. ಭಾರತದ ಚಳವಳಿ ಅಹಿಂಸಾತ್ಮಕವಾಗಿತ್ತು ಎಂಬುದನ್ನು ಯಾರು ಮರೆಯುವಂತಿಲ್ಲ. ಮಹನೀಯರ ತ್ಯಾಗ, ಬಲಿದಾನದ ಫಲವಾಗಿ ಮತ್ತು ಅಹಿಂಸಾತ್ಮಕವಾಗಿ ಸ್ವಾತಂತ್ರ್ಯ ಪಡೆದುಕೊಂಡಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಜಗದೇವ ಗುತ್ತೇದಾರ, ಬಿ.ಜಿ.ಪಾಟೀಲ, ಪಾಲಿಕೆಯ ಮೇಯರ್ ಯಲ್ಲಪ್ಪ ನಾಯ್ಕೋಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ, ಕೆಕೆಆರ್‌ಡಿಬಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ., ಎಸ್‌ಪಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಪಾಲಿಕೆಯ ಆಯುಕ್ತ ಭುವನೇಶ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಅಲ್ಲಾಭಕ್ಷ ಉಪಸ್ಥಿತರಿದ್ದರು.

ಕಲಬುರಗಿಯಲ್ಲಿ ಭಾನುವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ಅಭಿಯಾನದಲ್ಲಿ ಬ್ಯಾನರ್ ಹಿಡಿದು ಮಾನವ ಸರಪಳಿ ರಚಿಸಿದ ವಿದ್ಯಾರ್ಥಿಗಳು               ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿಯಲ್ಲಿ ಭಾನುವಾರ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆದ ಅಭಿಯಾನದಲ್ಲಿ ಮಾನವ ಸರಪಳಿ ರಚಿಸಿದ ಸಾರ್ವಜನಿಕರು                        ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ನಮ್ಮ ಸಂವಿಧಾನ ನಮಗೆ ಹೆಮ್ಮೆಯ ಪ್ರತೀಕವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಅರಿವು ಮೂಡಿಸಲು ಆಯೋಜಿಸಿದ್ದ ಮಾನವ ಸರಪಳಿಯಲ್ಲಿ ಸುಮಾರು ಒಂದು ಲಕ್ಷ ಜನರು ಭಾಗವಹಿಸಿದ್ದಾರೆ
ಡಾ.ಅಜಯ್ ಸಿಂಗ್ ಕೆಕೆಆರ್‌ಡಿಬಿ ಅಧ್ಯಕ್ಷ

ಬಿಸಿಲಿಗೆ ಬಸವಳಿದ ಶಾಲಾ ಮಕ್ಕಳು

ಹುಮನಬಾದ್ ರಿಂಗ್ ರಸ್ತೆಯಿಂದ ಶಹಾಬಾದ್ ರಸ್ತೆಯವರೆಗೆ ವಿದ್ಯಾರ್ಥಿಗಳು ಶಿಕ್ಷಕರು ಬೆಳಿಗ್ಗೆ 8ರಿಂದ 10ರ ವರೆಗೆ ಬಿಸಿಲಿನಲ್ಲಿ ನಿಂತು ಹಿಡಿಶಾಪ ಹಾಕಿದರು. ‌ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದ ಪಕ್ಕದಲ್ಲಿಯೇ ಚೆನ್ನಬಸವ ಶಾಲೆಯ ಮಕ್ಕಳು ‘ನಮ್ಮ ಸಂವಿಧಾನ ನಮ್ಮ ಹೆಮ್ಮೆ’ ನಾಮಫಲಕ ಹಿಡಿದು ನಿಂತಿದ್ದರು. ಅವರಿಗೆ ಕುಡಿಯುವ ನೀರು ಕೊಡುವವರು ಇರಲಿಲ್ಲ. ಈ ಬಗ್ಗೆ ಶಿಕ್ಷಕರನ್ನು ಕೇಳಿದಾಗ ‘ನಮಗೆ ಕೊಟ್ಟಿಲ್ಲ ಮಕ್ಕಳಿಗೆ ಎಲ್ಲಿಂದ ತರುವುದು’ ಎಂದರು. ‘ದೂರದ ಶಾಲೆಗಳಿಂದ ವಾಹನಗಳ ಮೂಲಕ ಮಕ್ಕಳನ್ನು ಬೆಳ್ಳಂಬೆಳಿಗ್ಗೆ ಕರೆ ತಂದು ಅವರಿಗೆ ಸೂಕ್ತ ಊಟೋಪಚಾರದ ವ್ಯವಸ್ಥೆ ಕನಿಷ್ಠ ಕುಡಿಯುವ ನೀರು ಸರಬರಾಜು ಮಾಡಿಲ್ಲ. ರಸ್ತೆಯ ಬದಿಯ ದೂಳಿನಲ್ಲಿ ಎರಡು ಗಂಟೆ ಬಿಸಿಲಿನಲ್ಲಿ ನಿಂತು ಬಸವಳಿದರು’ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.