ಕಲಬುರ್ಗಿ: ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು, ರಸ್ತೆ, ರೈಲು ಸಂಪರ್ಕವೂ ಇದೆ. ಹೀಗಾಗಿ, ನಗರದಲ್ಲಿ ಹೂಡಿಕೆದಾರರ ಸಮಾವೇಶ ನಡೆಸುವ ಮೂಲಕ ಉದ್ಯಮಿಗಳನ್ನು ಬೆಳೆಯುವ ಚಿಂತನೆ ಇದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೊರೊನಾ ಹಾವಳಿ ತಗ್ಗಿರುವುದರಿಂದ ಕಟ್ಟಡ ನಿರ್ಮಾಣ ಹಾಗೂ ಸೇವಾ ವಲಯದ ಚಟುವಟಿಕೆಗಳು ಚುರುಕಾಗಿವೆ. ಹೀಗಾಗಿ, ಬೆಂಗಳೂರು ಹೊರಗಡೆ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಕೈಗಾರಿಕೆಗಳು ಬರಲಿ ಎಂಬುದು ನಮ್ಮ ಅಪೇಕ್ಷೆ. ಅದರಂತೆ ಕೊಪ್ಪಳದಲ್ಲಿ ಇತ್ತೀಚೆಗೆ ಆಟಿಗೆ ಕ್ಲಸ್ಟರ್‌ಗೆ ಚಾಲನೆ ನೀಡಲಾಗಿದ್ದು, 25 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ. ಅದೇ ಮಾದರಿಯಲ್ಲಿ ಕಲಬುರ್ಗಿಯಲ್ಲಿಯೂ ಹಲವು ಉದ್ಯಮಗಳು ಬಂದರೆ ಒಳ್ಳೆಯದು. ಆ ನಿಟ್ಟಿನಲ್ಲಿ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು’ ಎಂದರು.
ಕಲಬುರ್ಗಿಗೆ ಮಂಜೂರಾಗಿದ್ದ ರಾಷ್ಟ್ರೀಯ ಹೂಡಿಕೆ ಮತ್ತು ತಯಾರಿಕಾ ವಲಯ (ನಿಮ್ಜ್)ಕ್ಕೆ ಕೇಂದ್ರ ಸರ್ಕಾರ ಹಣ ನೀಡಲಿಲ್ಲ. ಅಲ್ಲದೇ, ಆ ಯೋಜನೆಯೇ ಕೇಂದ್ರದ ಬಳಿ ಇಲ್ಲ. ಹಾಗಾಗಿ, ರಾಜ್ಯ ಸರ್ಕಾರ ನಿಮ್ಜ್ ಆರಂಭವನ್ನು ಕೈಬಿಟ್ಟಿತು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ಇದ್ದ ವಿಶೇಷ ಅವಕಾಶಗಳನ್ನು ಹೊಸ ಕೈಗಾರಿಕಾ ನೀತಿ ಕಿತ್ತುಕೊಂಡಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಶೆಟ್ಟರ್, ‘ನೂತನ ಕೈಗಾರಿಕಾ ನೀತಿಯಲ್ಲಿ ರಾಜ್ಯದ ಎಲ್ಲೆಲ್ಲಿ ಹೂಡಿಕೆಗೆ ಅವಕಾಶಗಳಿವೆಯೇ ಅಲ್ಲಿ ಅಗತ್ಯ ಅನುಕೂಲ ಕಲ್ಪಿಸುವ ಪ್ರಸ್ತಾವಗಳನ್ನು ಮಾಡಲಾಗಿದೆ. ಈ ನೀತಿ ಬರುವುದಕ್ಕೂ ಮುನ್ನ ಕಲಬುರ್ಗಿ ಭಾಗಕ್ಕೆ ವಿಶೇಷ ಅನುಕೂಲತೆಗಳಿದ್ದವು. ಆದರೂ ಕೈಗಾರಿಕೆಗಳು ಬಂದಿಲ್ಲವಲ್ಲ’ ಎಂದು ಮರುಪ್ರಶ್ನೆ ಹಾಕಿದರು.
ಯಾದಗಿರಿ ಜಿಲ್ಲೆ ಕಡೇಚೂರು ಕೈಗಾರಿಕಾ ವಲಯದಲ್ಲಿ ಹೆಚ್ಚು ಉದ್ಯಮಗಳನ್ನು ಸ್ಥಾಪಿಸಲು ಅಗತ್ಯವಾದ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಕೈಗಾರಿಕೆಗಳನ್ನು ಆರಂಭಿಸಲು ನಿವೇಶನ ಮಂಜೂರು ಮಾಡಿಸಿಕೊಂಡವರು ಹತ್ತಾರು ವರ್ಷವಾದರೂ ಉದ್ಯಮ ಆರಂಭಿಸದಿದ್ದರೆ ಅಂತಹ ನಿವೇಶನಗಳನ್ನು ರದ್ದುಗೊಳಿಸಲಾಗುವುದು. ಹುಬ್ಬಳ್ಳಿ ಬಳಿಯ ಗಾಮನಗಟ್ಟಿಯಲ್ಲಿ ಇಂತಹ ಹಲವು ನಿವೇಶನಗಳನ್ನು ಮರಳಿ ಕೆಐಎಡಿಬಿ ವಶಕ್ಕೆ ಪಡೆದು ಬೇರೆ ಆಸಕ್ತ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.