ಕಲಬುರಗಿ: ‘ರಂಗಾಯಣಗಳ ನಿರ್ದೇಶಕರ ನೇಮಕದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ನಿಯಮಗಳನ್ನು ಮೀರಿದ್ದಾರೆ’ ಎಂದು ಜನರಂಗದ ಅಧ್ಯಕ್ಷ, ಹಿರಿಯ ರಂಗಕರ್ಮಿ ಶಂಕ್ರಯ್ಯ ಆರ್. ಘಂಟಿ ಆರೋಪಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ರಂಗಾಯಣಗಳಿಗೆ ಅರ್ಹ ನಿರ್ದೇಶಕರನ್ನು ನೇಮಕ ಮಾಡದೆ ಬಿ.ವಿ. ಕಾರಂತರ ಕನಸಿಗೆ ಕೊಳ್ಳಿ ಇಟ್ಟಿದೆ. ರಂಗ ಸಮಾಜದ ಶಿಫಾರಸು ಪಾಲನೆ ಮಾಡದೇ ಘಾಸಿಗೊಳಿಸಿದೆ’ ಎಂದು ದೂರಿದರು.
‘ಸಾಹಿತಿಗಳು, ನಾಟಕ ರಚನೆಕಾರರು, ರಂಗ ನಿರ್ದೇಶಕರು, ಕಲಾವಿದರು ಮತ್ತು ಸಂಘಟಕರನ್ನು ಶೋಧಿಸಿ ರಂಗಾಯಣದ ಮಾರ್ಗದರ್ಶನಕ್ಕಾಗಿ ಗುರುತಿಸಿ ರಂಗ ಸಮಾಜದ ಸದಸ್ಯರನ್ನಾಗಿ ನೇಮಕ ಮಾಡಬೇಕು. ಆದರೆ, ಸರ್ಕಾರದಿಂದ ರಂಗಾಯಣದಂತಹ ಸಂಸ್ಥೆಗೆ ಮಾನದಂಡಗಳಿಲ್ಲದೆ ನೇಮಕ ಮಾಡಿ ನಾಡಿನ ಸಾಂಸ್ಕೃತಿಕ ಮಾನ, ಮರ್ಯಾದೆ ಹರಾಜಿಗಿಟ್ಟಂತಾಗಿದೆ’ ಎಂದರು.
‘ರಂಗ ಸಮಾಜವು ಶಿಫಾರಸು ಮಾಡಿದ ಹೆಸರುಗಳನ್ನು ಮಂಗಳೂರು ಹೊರತುಪಡಿಸಿ ಯಾವ ಕಡೆಯೂ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಪರಿಗಣಿಸಿಲ್ಲ. ನಿರ್ದೇಶಕರ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಅರ್ಹ ಅಭ್ಯರ್ಥಿಗಳ ವೃತ್ತಿ ಅನುಭವ, ರಂಗ ರಚನೆ ಹಾಗೂ ರಂಗಭೂಮಿಗೆ ನೀಡಿರುವ ಕೊಡುಗೆ ಪರಿಗಣಿಸಿಲ್ಲ’ ಎಂದು ಆಪಾದಿಸಿದರು.
‘ಆಯ್ಕೆಯಲ್ಲಿ ಸಚಿವರ ಸ್ವಹಿತಾಸಕ್ತಿ ಎದ್ದು ಕಾಣುತ್ತದೆ. ಸಚಿವರ ಅಸಂವಿಧಾನಿಕ ನಡೆ ಮತ್ತು ಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಸ್ತು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ನೋವಿಗೆ ಒಳಗಾದ ರಂಗ ಚೇತನರು ರಾಜ್ಯಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಶಾ ಕಂಠಿ, ಸಮಿತ್ರಾ, ಸಾಗರ, ಸಂಪತ್, ಎಂ.ಬಿ. ಸಜ್ಜನ ಉಪಸ್ಥಿತರಿದ್ದರು.
ಸ್ಮರಣಿಕೆ ಪ್ರಶಸ್ತಿ ಪತ್ರ ವಾಪಸ್ ಎಚ್ಚರಿಕೆ
‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಮತ್ತು ರಾಜ್ಯ ಸರ್ಕಾರ ರಂಗಾಯಣ ನಿರ್ದೇಶಕರ ನೇಮಕ ಕುರಿತು ಮರು ಪರಿಶೀಲನೆ ಮಾಡಬೇಕು’ ಎಂದು ಶಂಕ್ರಯ್ಯ ಆರ್. ಘಂಟಿ ಆಗ್ರಹಿಸಿದರು. ‘ಇಲ್ಲವಾದರೆ ರಾಜ್ಯ ಸರ್ಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿರುವ ಪ್ರಶಸ್ತಿ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಹಿಂದುರುಗಿಸುವ ಮೂಲಕ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.