ಚಿತ್ತಾಪುರ: ಕಲ್ಯಾಣ ಚಾಲುಕ್ಯರ ಆಡಳಿತಾವಧಿಯಲ್ಲಿ ಪ್ರಸಿದ್ಧ ಘಟಿಕಾಸ್ಥಾನವಾದ ನಾಗಾವಿಯ ಅಗ್ರಹಾರದಲ್ಲಿ ರಾಮಾಯಣದ ಶ್ರೀರಾಮ ಮತ್ತು ರಾಮನ ಸಹೋದರ ಲಕ್ಷ್ಮಣರ ಹೆಸರಿನಲ್ಲಿ ದೇವಾಲಯ ನಿರ್ಮಾಣ ಮಾಡಿ, ಈಶ್ವರ ಶಿವಲಿಂಗ ಸ್ಥಾಪಿಸಿ, ದೇವಾಲಯದ ವ್ಯವಸ್ಥೆಗೆಂದು ದತ್ತಿ ಬಿಟ್ಟಿರುವುದಕ್ಕೆ ನಾಗಾವಿಯಲ್ಲಿ ದೊರೆತಿರುವ ಶಿಲಾ ಶಾಸನಗಳಲ್ಲಿ ಉಲ್ಲೇಖವಿದೆ.
ಕಲ್ಯಾಣ ಚಾಲುಕ್ಯರ ಅರಸ ಒಂದನೇ ಸೋಮೇಶ್ವರನ ಆಡಳಿತಾವಧಿಯಲ್ಲಿ ಅರಲು-300 (ತಾಲ್ಲೂಕಿನ ಅಲ್ಲೂರ್.ಬಿ ಗ್ರಾಮ) ಪ್ರಾಂತೀಯ ಆಡಳಿತ ಕೇಂದ್ರದ ಮಹಾದಂಡನಾಯಕನಾಗಿದ್ದ ಮಧುವರಸನು (ಮಧುವಪ್ಪರಸ) ನಾಗಾವಿಯಲ್ಲಿ ‘ರಾಮೇಶ್ವರ ದೇವಾಲಯ’ (ರಾಮೇಶ್ವರಾಲಯ) ಕಟ್ಟಿಸಿರುವ ಉಲ್ಲೇಖ ನಾಗಾವಿಯಲ್ಲಿ ದೊರೆತಿರುವ ಕ್ರಿ.ಶ.1058ರ ಶಿಲಾ ಶಾಸನದಲ್ಲಿದೆ. ದೇವಾಲಯದಲ್ಲಿ ಈಶ್ವರ ಶಿವಲಿಂಗ ಸ್ಥಾಪನೆ ಮಾಡಿ ರಾಮೇಶ್ವರ ದೇವಾಲಯ ಎಂದು ಕರೆಯಲಾಗಿದೆ.
ರಾಮೇಶ್ವರ ದೇವಾಲಯಕ್ಕೆ ಹೊಂದಿಕೊಂಡೆ ದೇವಾಲಯದ ಹಿಂದುಗಡೆ ‘ರಾಮತೀರ್ಥ’ (ಈಗ ನಂದಿ ಬಾವಿ ಎಂದೇ ಪ್ರಸಿದ್ದ) ಎಂಬ ಹೆಸರಿನ ಬಾವಿ ಕಟ್ಟಿಸಿರುವ ಮಾಹಿತಿ ಇದೇ ಶಾಸನದಲ್ಲಿದೆ. ಕಲ್ಯಾಣ ಚಾಲುಕ್ಯರ ಅರಸ ವಿಕ್ರಮಾದಿತ್ಯನ ಆಡಳಿತಾವಧಿಯಲ್ಲಿ ದಂಡನಾಯಕನಾಗಿದ್ದ ಕಾಳಿಮರಸನು ನಾಗಾವಿಯಲ್ಲಿ ರಾಮೇಶ್ವರ ದೇವಾಲಯದ ಮುಂಭಾಗದಲ್ಲಿರುವ ಲಕ್ಷ್ಮಣೇಶ್ವರ ದೇವಾಲಯಕ್ಕೆ ನಾಗಾವಿ ಅಗ್ರಹಾರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನಾಲ್ಕುನೂರು ಮಹಾಜನರ ಸಮ್ಮುಖದಲ್ಲಿ ಸೀರೆ, ಬಟ್ಟೆ, ಅಡಿಕೆ ಮುಂತಾದ ಮಾರಾಟದ ವಸ್ತುಗಳ ಮೇಲಿನ ಹಣವನ್ನು ನೀಡಿರುವ ಉಲ್ಲೇಖ ಕ್ರಿ.ಶ 1093ರ ಶಿಲಾ ಶಾಸನದಲ್ಲಿದೆ.
ರಾಮಾಯಾಣದ ಶ್ರೀರಾಮ ಮತ್ತು ರಾಮನ ಸಹೋದರ ಲಕ್ಷ್ಮಣರ ಹೆಸರಿನಲ್ಲಿ ದೇವಾಲಯಗಳಿರುವ ನಾಗಾವಿಯ ಇತಿಹಾಸದ ಸಂಶೋಧನೆ ಮಾಡಲು, ಐತಿಹಾಸಿಕ ಸತ್ಯ ಹೆಕ್ಕಿ ಹೊರತೆಗಯಲು ಇಲ್ಲಿಯವರೆಗೂ ಕಲಬುರಗಿ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಯಾವುದೇ ವಿಶ್ವವಿದ್ಯಾಲಯ ಮುಂದಾಗಿಲ್ಲ. ನಾಗಾವಿ ಇತಿಹಾಸ ಸಂಶೋಧನೆ ಮಾಡಬೇಕು ಮತ್ತು ಶಿಕ್ಷಣದ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂಬುದು ಇತಿಹಾಸ ಪ್ರಿಯರ ಆಶಯ.
ಎರಡು ದೇವಾಲಯಗಳ ಜೀರ್ಣೋದ್ಧಾರ: ನಾಗಾವಿಯಲ್ಲಿರುವ ರಾಮೇಶ್ವರ ದೇವಾಲಯ ಮತ್ತು ಹನುಮಾನ ದೇವಾಲಯಗಳನ್ನು ರಾಜ್ಯ ಪ್ರಾಚ್ಯವಸ್ತುಗಳ ಇಲಾಖೆಯಿಂದ ಕಳೆದ 2017–18ನೇ ಸಾಲಿನಲ್ಲಿ ₹1.02 ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಇನ್ನುಳಿದಂತೆ ಅನೇಕ ದೇವಾಲಯಗಳ, ಪುರಾತನ ಸ್ಮಾರಕಗಳ ಸಂರಕ್ಷಣೆ, ಜೀರ್ಣೋದ್ದಾರ ಮಾಡಬೇಕಿದೆ.
ಚಿತ್ತಾಪುರ: ಇಲ್ಲಿನ ನಾಗಾವಿಯಲ್ಲಿರುವ ಯಲ್ಲಮ್ಮ ದೇವಿಯ ಜಾತ್ರೆ ಪಲ್ಲಕ್ಕಿ ಉತ್ಸವ ಗುರುವಾರ (ಅ.17) ಸಡಗರ ಸಂಭ್ರಮ ಶ್ರದ್ಧಾಭಕ್ತಿಯಿಂದ ನಡೆಯಲಿದೆ. ಪಟ್ಟಣದ ಸರಾಫ್ ಲಚ್ಚಪ್ಪ ಮಲ್ಹಾರ ನಾಯಕ ಅವರ ಮನೆಯಲ್ಲಿ ಅಂದು ಮಧ್ಯಾಹ್ನ ಒಂದು ಗಂಟೆಗೆ ವಿಘ್ನೇಶ್ವರ ಪೂಜೆ ಗುರುಪೂಜೆ ಯಲ್ಲಮ್ಮ ದೇವಿಯ ಪಾದುಕೆ ಪೂಜೆ ಪಲ್ಲಕ್ಕಿ ಪೂಜೆ ಮಂಗಳಾರತಿ ಕಾರ್ಯಕ್ರಮವನ್ನು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಪುರಪ್ರಮುಖರ ಉಪಸ್ಥಿತಿಯಲ್ಲಿ ನೆರವೇರಿಸುವರು. ಪೂಜೆ ಕಾರ್ಯಕ್ರಮದ ನಂತರ ಲಚ್ಚಪ್ಪ ನಾಯಕ ಅವರ ಮನೆಯಿಂದ ಮಧ್ಯಾಹ್ನ 2 ಗಂಟೆಯಿಂದ ದೇವಿಯ ಪಲ್ಲಕ್ಕಿ ಉತ್ಸವದ ಮೆರವಣಿಗೆ ಶುರುವಾಗಿ ಪಟ್ಟಣದ ಪ್ರಮುಖ ಬೀದಿಗಳಾದ ಚಿತಾವಲಿ ಚೌಕ್ ಜನತಾ ಚೌಕ್ ನಾಗಾವಿ ಚೌಕ್ ಒಂಟಿ ಕಮಾನ್ ದಿಗ್ಗಾಂವ್ ವೃತ್ತದ ಮೂಲಕ ದೇವಿಯ ದೇವಸ್ಥಾನದವರೆಗೆ ಸಡಗರ ಸಂಭ್ರಮದೊಂದಿಗೆ ಸಂಜೆ 7 ಗಂಟೆಯವರೆಗೆ ನಡೆದು ಗರ್ಭಗುಡಿಯ ಪ್ರದಕ್ಷಿಣೆ ಮಂಗಳಾರತಿ ನಂತರ ಉತ್ಸವ ಸಂಪನ್ನವಾಗಲಿದೆ. ಪಲ್ಲಕ್ಕಿ ಸಾಗುವ ಮನೆಯಿಂದ ದೇವಿಯ ದೇವಸ್ಥಾನದವರೆಗೆ ಪಟ್ಟಣದ ಯುವಕರು ದೇವಿಯ ಸೇವಾರ್ಥವಾಗಿ ಸಾರ್ವಜನಿಕರ ಸಹಕಾರದಿಂದ ರಸ್ತೆಯುದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಿಸಿದ್ದಾರೆ. ರಸ್ತೆಗಳು ರಾತ್ರಿಯಲ್ಲಿ ವರ್ಣರಂಜಿತವಾಗಿ ಜಗಮಗಿಸಿ ಭಕ್ತರ ಮನಸ್ಸು ಆಕರ್ಷಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.