ADVERTISEMENT

ಹಾದಿ ತಪ್ಪಿದ ‘ಜಲಜೀವನ್’: ಮನೆಗೆ ಬಾರದ ‘ಗಂಗೆ’

ಇಂಗಳಗಿ: ₹1.30 ಕೋಟಿ ವೆಚ್ಚದ ಕಾಮಗಾರಿ, ಗ್ರಾಮಸ್ಥರ ಆರೋಪ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 5:55 IST
Last Updated 13 ನವೆಂಬರ್ 2024, 5:55 IST
ವಾಡಿ ಸಮೀಪದ ಇಂಗಳಗಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಲಾದ ನಳಗಳಿಗೆ ನೀರು ಬಾರದಿರುವುದು
ವಾಡಿ ಸಮೀಪದ ಇಂಗಳಗಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಲಾದ ನಳಗಳಿಗೆ ನೀರು ಬಾರದಿರುವುದು   

ವಾಡಿ: ಚಿತ್ತಾಪುರ ತಾಲ್ಲೂಕಿನ ಇಂಗಳಗಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದ್ದು ಜನರ ಆಕ್ರೋಶಕ್ಕೆ ಗುರಿಯಾಗಿದೆ.

‘ಜಲೋತ್ಸವ– ಮನೆ ಮನೆಗೆ ಗಂಗೆ’ ಹೆಸರಿನಡಿ 2020-21ನೇ ಸಾಲಿನಲ್ಲಿ ಹಂತ–1ರ ಅಡಿಯಲ್ಲಿ ಜಾರಿ ಮಾಡಿರುವ ಯೋಜನೆಗೆ ದುಡ್ಡು ಹರಿದಿದೆ ಹೊರತು, ನಳಗಳಲ್ಲಿ ಇದುವರೆಗೂ ನೀರು ಬಂದಿಲ್ಲ. ನೀರು ಬರಬಹುದೆಂದು 3 ವರ್ಷಗಳಿಂದ ಕಾದು ಜನರು ಸುಸ್ತಾಗಿದ್ದಾರೆ. ಆದರೆ ನೀರು ಬರದೇ ನಳಗಳು ಅವಶೇಷಗಳಾಗುತ್ತಿವೆ.

4 ವಾರ್ಡ್‌ಗಳಿರುವ ಇಂಗಳಗಿ ಗ್ರಾಮದಲ್ಲಿ ಒಟ್ಟು 7,000 ಜನಸಂಖ್ಯೆ ಇದೆ. ಇಲ್ಲಿನ ಸಾವಿರಕ್ಕೂ ಅಧಿಕ ಮನೆಗಳಿಗೆ ನೇರ ನೀರು ಸರಬರಾಜು ಮಾಡಲು ಯೋಜನೆ ರೂಪಿಸಿ ಅದಕ್ಕಾಗಿ ₹1.30 ಕೋಟಿ ವ್ಯಯಿಸಲಾಗಿದೆ. ಆದರೆ ಅಳವಡಿಸಿದ ಬಹುತೇಕ ನಳಗಳಿಗೆ ಇದುವರೆಗೂ ಒಂದು ಹನಿ ನೀರು ಬಂದಿಲ್ಲ. ವಿಶ್ವರಾಧ್ಯ ನಗರ, ಉಲ್ಲಾಸ ನಗರ, ಬರಗಾಲ ಚಾಳಿ, ಪೂಜಾರಿ ಓಣಿ, ಭೀಮ ನಗರ, ಜಾತಕರ ಬಡಾವಣೆ ಸಹಿತ ಹಲವೆಡೆ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಲಾಗಿದೆ. ಆದರೆ ಬಹುತೇಕ ನಳಗಳಿಗೆ ನೀರು ಮಾತ್ರ ಹರಿದಿಲ್ಲ.

ADVERTISEMENT

ಜಲಜೀವನ್ ಮಿಷನ್ ಯೋಜನೆಗೆ ಜನರ ಮೆಚ್ಚುಗೆಯೂ ಇದೆ. ಆದರೆ, ಯೋಜನೆಯ ಜಾರಿಯಲ್ಲಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸುತ್ತಿರುವ ಆರೋಪಗಳು ಕೇಳಿಬಂದಿವೆ. ಇವರ ನಿರ್ಲಕ್ಷ್ಯದಿಂದಲೇ ಇಂದಿಗೂ ಮನೆಗಳ ಬಾಗಿಲಿಗೆ ನೀರು ತಲುಪುತ್ತಿಲ್ಲವೆಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ನಮ್ಮ ಬಡಾವಣೆಗೆ ಪೈಪ್ ಹಾಕಲಾಗಿದೆ ಆದರೆ ನೀರು ಮಾತ್ರ ಬಂದಿಲ್ಲ. ಶುದ್ಧೀಕರಣ ಮಷಿನ್‌ನಿಂದ ನೀರು ಹೊತ್ತು ತರುತ್ತಿದ್ದೇವೆ ಎಂದು ಸ್ಥಳೀಯ ನಿವಾಸಿ ಭೀಮಬಾಯಿ ಮ್ಯಾಗೇರಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲವು ಕಡೆಗಳಲ್ಲಿ ಕಳಪೆ ಕಾಮಗಾರಿಯನ್ನೂ ಮಾಡಿದ್ದಾರೆ. ಕಾಮಗಾರಿ ಮುಕ್ತಾಯವಾದರೂ ನಳದಲ್ಲಿ ನೀರು ಬರುತ್ತಿಲ್ಲವೆಂದರೆ ಏನು ಅರ್ಥ? ಕಾಮಗಾರಿಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಜಿಲ್ಲಾಧಿಕಾರಿ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

ವಾಡಿ ಸಮೀಪದ ಇಂಗಳಗಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಿಸಲಾದ ನಳಗಳಿಗೆ ನೀರು ಬಾರದಿರುವುದು

ಗ್ರಾಮ ಪಂಚಾಯಿತಿಗೆ ಹಸ್ತಾಂತರ

ಕಾಮಗಾರಿ ಅಪೂರ್ಣಗೊಂಡಿದ್ದು ಯಾವ ಮನೆಗೂ ಒಂದು ಹನಿ ನೀರು ಹರಿಸಿಲ್ಲ. ಅದರೂ ಗುಣಮಟ್ಟ ಕಾಮಗಾರಿ ನಡೆದಿದ್ದು ಯೋಜನೆ ಸಂಪೂರ್ಣ ಪೂರ್ಣಗೊಂಡಿದೆ ಎಂದು ಸ್ಥಳೀಯ ಪಂಚಾಯತಿಗೆ 2023 ಜು.12ರಂದು ಮುಂದಿನ ನಿರ್ವಹಣೆಗಾಗಿ ಹಸ್ತಾಂತರ ಮಾಡಲಾಗಿದೆ. ಯೋಜನೆ ಹೆಸರಲ್ಲಿ ಕೋಟ್ಯಂತರ ಹಣ ಇಲ್ಲಿ ನೀರು ಪಾಲಾಗಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.