ಕಲಬುರಗಿ: ನಿರ್ಮಾಣ ಹಂತದಲ್ಲಿರುವ ಇಲ್ಲಿನ ಡಾ.ಎಸ್.ಎಂ. ಪಂಡಿತ್ ರಂಗಮಂದಿರದ ಎದುರಿನ ಜಯದೇವ ಆಸ್ಪತ್ರೆಯ ಕಾಂಪೌಂಡ್ ಗುರುವಾರ ಕುಸಿದು ಬಿದ್ದಿದೆ. ಬೆಳಗಿನ ಜಾವ ಬಿದ್ದಿದ್ದರಿಂದ ಯಾರಿಗೂ ಅಪಾಯವಾಗಿಲ್ಲ. ಆದರೆ, ವಿದ್ಯುತ್ ಕಂಬ ಬಾಗಿದೆ.
ಜನವರಿಯಲ್ಲಿ ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಅವರು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು. ಅದರಂತೆಯೇ ವೇಗವಾಗಿ ಹಗಲೂ–ರಾತ್ರಿ ಕಾಮಗಾರಿ ನಡೆಯುತ್ತಿದೆ.
ಮೊದಲಿಗೆ ಸಿಮೆಂಟ್ ಕಾಂಕ್ರೀಟ್ ತಳಪಾಯದ ಮೇಲೆ ಕಾಂಪೌಂಡ್ ನಿರ್ಮಿಸಿ ಗ್ರಿಲ್ ಅಳವಡಿಸಲಾಗಿತ್ತು. ಮೇಲ್ಭಾಗದಲ್ಲಿ ಕಲ್ಲುಗಳನ್ನು ಅಳವಡಿಸಲಾಗಿತ್ತು. ಇತ್ತೀಚೆಗೆ ಕಾಂಪೌಂಡ್ ಪಕ್ಕದಲ್ಲಿಯೇ ಚರಂಡಿ ನಿರ್ಮಿಸಲು ಆಳವಾದ ತಗ್ಗು ತೋಡಲಾಗಿತ್ತು. ಆ ತಗ್ಗು ಕಾಂಪೌಂಡ್ ತಳಪಾಯಕ್ಕಿಂತಲೂ ಆಳವಾಗಿತ್ತು. ಅಲ್ಲದೇ, ಕಾಂಪೌಂಡ್‌ಗೆ ಹೊಂದುಕೊಂಡೇ ತಗ್ಗು ತೆಗೆಯುತ್ತಿದ್ದುದರಿಂದ ಹಾಗೂ ಕಪ್ಪು ಮಣ್ಣು ಇದ್ದುದರಿಂದ ಭಾರ ಗ್ರಿಲ್ ಹಾಗೂ ಕಲ್ಲುಗಳ ಭಾರ ತಾಳಲಾರದೇ ನೆಲಕ್ಕುರುಳಿದೆ ಎನ್ನಲಾಗಿದೆ.
ತಕ್ಷಣವೇ ಗುತ್ತಿಗೆದಾರರು ಯಂತ್ರಗಳನ್ನು ಬಳಸಿ ಮತ್ತೆ ಮಣ್ಣನ್ನು ಪಕ್ಕಕ್ಕೆ ಸರಿಸುವ ಕಾರ್ಯವನ್ನು ಶುರು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.