ಆಳಂದ: ಬಿಸಲಿನ ಧಗೆಯಿಂದ ಬೆವರು ಹರಿದಷ್ಟು ನೀರು ಸಹ ನಮಗೆ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಅಲೆಮಾರಿ ದುಡಿಯುವ ನಮ್ಮ ಜನ ದಿನವಿಡಿ ನೀರಿಗಾಗಿ ಹೊಲಗದ್ದೆಗಳಿಗೆ ಅಲೆಯುತ್ತಿದ್ದೇವೆ ಎಂದು ಝಳಕಿ (ಕೆ) ಗ್ರಾಮದ ಪಾರ್ಧಿ ತಾಂಡಾದ ಮಹಿಳೆ ಪಾರ್ವತಿ ಪವಾರ ಹತಾಶೆಯ ಮಾತುಗಳು.
ತಾಲ್ಲೂಕಿನ ಝಳಕಿ (ಕೆ) ಗ್ರಾಮ ಸಮೀಪದ ತಾಂಡಾದಲ್ಲಿ 45 ಮನೆಗಳು ಇದ್ದು, ನೂರಾರು ಅಲೆಮಾರಿ ಕುಟುಂಬಗಳು ವಾಸವಾಗಿವೆ. ಇವರು ಕುಡಿಯುವ ನೀರಿಗಾಗಿ ಒಂದು ಕಿ.ಮೀ ನಡೆಯಬೇಕಿದೆ. ಮನೆಗಳಲ್ಲಿ ಬೈಕ್, ಜೀಪ್ ಅನುಕೂಲವೂ ಇಲ್ಲ, ಹೀಗಾಗಿ ಕೊಡ ಹೊತ್ತು ಕಾಲ್ನಡಿಗೆಯಲ್ಲಿ ಸಂಚರಿಸಬೇಕಿದೆ.
ಕವಲಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಝಳಕಿ (ಕೆ) ಗ್ರಾಮವು ಸಂಪೂರ್ಣ ಎತ್ತರದ ಗುಡ್ಡದಲ್ಲಿ ಇದೆ. ಝಳಕಿ (ಕೆ) ಮತ್ತು ತಾಂಡಾದ ಅಂದಾಜು ಐದು ಸಾವಿರ ಜನಸಂಖ್ಯೆಯುಳ್ಳ ಗ್ರಾಮಕ್ಕೆ ಹೊಂದಿಕೊಂಡು ಪಾರ್ಧಿ ತಾಂಡಾ ಇದೆ. ಇಲ್ಲಿನ ನೀರಿನ ಮೂಲಗಳಾದ ಎರಡು ಬಾವಿ, 8 ಕೊಳವೆ ಬಾವಿಯು ಸಂಪೂರ್ಣ ಬತ್ತಿವೆ. ಇದರ ಪರಿಣಾಮ ಗ್ರಾಮದಲ್ಲಿ ಕಳೆದ ತಿಂಗಳಿಂದ ಕುಡಿಯುವ ನೀರಿನ ಹಾಹಾಕಾರ ಹೆಚ್ಚಿದೆ.
ಒಂದು ಬಾವಿಯಲ್ಲಿ ಅಲ್ಪಸ್ವಲ್ಪ ನೀರು ಇದ್ದು, ದಿನಕ್ಕೆ 20 ಕೊಡ ನೀರು ಮಾತ್ರ ಸಿಗುವ ಸ್ಥಿತಿ ಇದೆ. ಭೀಮನಗರ ಹಾಕಲಾದ ಕೊಳವೆಬಾವಿ ಅರ್ಧ ಗಂಟೆ ಮಾತ್ರ ನೀರು ಬರುತ್ತಿದೆ. ಇದರಿಂದ ಮನೆಗೆ ನಾಲ್ಕೈದು ಕೊಡ ನೀರು ಸಿಗುತ್ತಿದೆ. ಇಲ್ಲಿಯ ಜನರು ಸಮೀಪದಲ್ಲಿನ ತೋಟದಿಂದ ನೀರು ತರಲು ಅಲೆಯುವುದು ಅನಿವಾರ್ಯವಾಗಿದೆ.
‘ಖಾಸಗಿ ಕೊಳವೆಬಾವಿಯಿಂದ ನೀರು ಖರೀದಿಸಿ ಸರಬರಾಜು ಮಾಡಲಾಗುತ್ತಿದೆ. ಆದರೆ ಈ ನೀರು ಸಹ ಸಮರ್ಪಕವಾಗಿ ಎಲ್ಲ ಮನೆಗಳಿಗೆ ಪೂರೈಕೆ ಆಗುತ್ತಿಲ್ಲ. ಸರದಿಯಲ್ಲಿ ನಿಂತವರಿಗೆ ಮಾತ್ರ ನಾಲ್ಕು ಕೊಡ ನೀರು ಸಿಗುತ್ತದೆ. ಹೊಲಗದ್ದೆ, ಬೇರೆಯಡೆ ಹೋದವರಿಗೆ, ಅಸಹಾಯಕರಿಗೆ ಈ ನೀರು ಸಿಗುವುದು ಗ್ಯಾರಂಟಿ ಇಲ್ಲ ಎನ್ನುವ ಮಟ್ಟಿಗೆ ನೀರಿನ ಸಮಸ್ಯೆ ಎದುರಾಗಿದೆ’ ಎನ್ನುತ್ತಾರೆ ಪ್ರಭುಲಿಂಗ ಪಾಟೀಲ.
ಗ್ರಾಮದಲ್ಲಿ ಹಗಲು ರಾತ್ರಿ ಸರದಿಯಲ್ಲಿ ಕೊಡ ಇಟ್ಟು ಕಾಯದರೂ ಆರು ಕೊಡ ನೀರು ಸಿಗುತ್ತಿಲ್ಲ ನೀರಿಗಾಗಿ ತೋಟಗಳಿಗೂ ಸುತ್ತಿದ್ದರೂ ನೀರು ಸಾಕಾಗುತ್ತಿಲ್ಲ.ಚೆನ್ನಮ್ಮ ಸುತಾರ, ಗ್ರಾಮಸ್ಥೆ
ಮಹಿಳೆಯರು, ಮಕ್ಕಳು ಸುಡುವ ಬಿಸಲು ಲೆಕ್ಕಿಸದೆ ನೀರಿಗಾಗಿ ಖಾಲಿ ಕೊಡಗಳು ಇಟ್ಟು ನೀರಿಗಾಗಿ ಕಾಯಬೇಕು. ಯುವಕರು, ರೈತರು, ಮಹಿಳೆಯರು ಸುತ್ತಲಿನ ನೀರು ಇರುವ ರೈತರ ತೋಟಗಳಿಗೆ ಬೈಕ್, ಜೀಪ್ ಕಟ್ಟಿಕೊಂಡು ನೀರು ತರುವ ಸ್ಥಿತಿ ಸಾಮಾನ್ಯವಾಗಿದೆ.
ಪಾರ್ಧಿ ತಾಂಡಾ ಜನರು ಝಳಕಿ (ಕೆ) ಗ್ರಾಮಕ್ಕೆ ಬಂದು ನೀರು ತೆಗೆದುಕೊಂಡು ಹೋಗಬೇಕು. ಒಂದು ಕೊಡ ನೀರಿಗಾಗಿ 1 ಕಿ.ಮೀ ನಡೆಯಬೇಕು. ತೋಟಗಳು ಸಹ ಇಲ್ಲಿಯ ಜನರಿಗೆ ದೂರ, ಕುರಿ, ಆಕಳು, ಎಮ್ಮೆ , ಎತ್ತು ಮತ್ತಿತರ ಜಾನುವಾರುಗಳ ನೀರಿನ ಸ್ಥಿತಿಯು ಭಯಂಕರವಾಗಿದೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಬಂದು ನೀರಿನ ಸಮಸ್ಯೆ ವೀಕ್ಷಣೆ ಮಾಡಿದರೂ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳು ತಕ್ಷಣ ಸ್ಪಂದಿಸುತ್ತಿಲ್ಲ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು.ಮಡಿವಾಳಯ್ಯ ಸ್ವಾಮಿ, ಗ್ರಾಮಸ್ಥ
ಗ್ರಾಮದಲ್ಲಿ ಜಾನುವಾರುಗಳ ನೀರಿನ ಸಂಕಟವು ರೈತರಿಗೆ ತಲೆನೋವಾಗಿದೆ. ಪಂಚಾಯಿತಿ, ಖಾಸಗಿ ರೈತರ ಖರೀದಿ ಮತ್ತಿತರ ಪ್ರಯತ್ನದ ಹೊರತಾಗಿಯೂ ಹಲವು ಮನೆಗಳಿಗೆ ಕನಿಷ್ಠ 6 ಕೊಡ ನೀರು ಲಭ್ಯವಾಗುತ್ತಿಲ್ಲ, ಇಂತಹ ಸಂಕಷ್ಟದಲ್ಲಿ ಜಾನುವಾರು ನೀರಿನ ನಿರ್ವಹಣೆಗಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ಕೊಳವೆಬಾವಿ ಹಾಕಿದರೂ ನೀರು ಸಿಗದ ಸ್ಥಿತಿ ಇದೆ ಎಂದು ಝಳಕಿ ರೈತ ಚಂದ್ರಕಾಂತ ರೇವೂರು ಹೇಳುತ್ತಾರೆ.
ಜನರಿಗೆ ಉಚಿತ ನೀರು ಪೂರೈಕೆ
ಗ್ರಾಮದ ಪ್ರಭುಲಿಂಗ ಪಾಟೀಲ ಅವರು ನೀರಿನ ಸಮಸ್ಯೆ ಕಂಡು ಮನೆ ಕಟ್ಟುವಾಗ 10 ವರ್ಷದ ಹಿಂದೆ ಸ್ವಂತಕ್ಕೆ ಕೊಳವೆಬಾವಿ ಹಾಕಿದ್ದಾರೆ. ನೀರು ಇರುವುದರಿಂದ ಸತತ 10 ವರ್ಷದಿಂದ ಸುತ್ತಲಿನ ನಿವಾಸಿಗಳಿಗೆ ನೀರು ಕೊಡುತ್ತಿದ್ದರು. ಈಗ ಗ್ರಾಮದಲ್ಲಿ ನೀರಿನ ಸಮಸ್ಯೆ ವಿಪರೀತವಾದ ಹಿನ್ನೆಲೆಯಲ್ಲಿ ಅರ್ಧದಷ್ಟು ಮನೆಗಳಿಗೆ ತಲಾ ನಾಲ್ಕು ಕೊಡ ಹಂಚಿಕೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯು ಖಾಸಗಿ ನೀರು ಖರೀದಿಗೆ ಮನೆಗೆ ಬಂದಾಗಲೂ ಖರೀದಿ ನೀರು ಕೊಡುವುದನ್ನು ನಿರಾಕರಿಸಿ ನಾನು ಮನೆ ಬಳಕೆಗೆ ಮಾತ್ರ ಇಟ್ಟು ಉಳಿದ ನೀರು ಪುಕ್ಕಟೆಯಾಗಿ ಸರಬರಾಜು ಮಾಡಲು ಮುಂದಾಗಿರುವುದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.