ಕಲಬುರ್ಗಿ: ಬೆಂಬಲ ಬೆಲೆಯಡಿ ಬಿಳಿಜೋಳ (ಮಾಲ್ಡಂಡಿ) ಖರೀದಿಸಲು ರಾಜ್ಯ ಸರ್ಕಾರ ಎಲ್ಲ ತಾಲ್ಲೂಕುಗಳ ಎಪಿಎಂಸಿಗಳಲ್ಲಿ ಖರೀದಿ ಕೇಂದ್ರ ಆರಂಭಿಸಿದೆ. ಆದರೆ, ಜಿಲ್ಲೆಯಲ್ಲಿ ಯಾವೊಬ್ಬ ರೈತರೂ ಬಿಳಿಜೋಳ ಮಾರಾಟಕ್ಕೆ ಈ ವರೆಗೆ ನೋಂದಣಿಯನ್ನೇ ಮಾಡಿಸಿಕೊಂಡಿಲ್ಲ!
‘ಸರ್ಕಾರ ಬಿಳಿಜೋಳಕ್ಕೆ ಕ್ವಿಂಟಲ್‌ಗೆ ₹2,450 ದರ ನಿಗದಿ ಮಾಡಿದೆ. ಆದರೆ, ಮಾರುಕಟ್ಟೆಯಲ್ಲಿ ಇದಕ್ಕಿಂತಲೂ ಹೆಚ್ಚು ಬೆಲೆ ಇದೆ. ಕಲಬುರ್ಗಿ ಎಪಿಎಂಸಿಯಲ್ಲಿ ಬಿಳಿಜೋಳ ₹2,500ರಿಂದ ₹3,600 ವರೆಗೆ ಮಾರಾಟವಾಗುತ್ತಿದ್ದು, ಮಾದರಿ ದರ ₹3,300 ಇದೆ. ಹೀಗಾಗಿ ಬೆಂಬಲ ಬೆಲೆಯಡಿ ಮಾರಾಟ ಮಾಡಲು ನಾವು ಮುಂದಾಗುತ್ತಿಲ್ಲ’ ಎಂದು ರೈತರು ಹೇಳುತ್ತಿದ್ದಾರೆ.
‘ಬಿಳಿ ಜೋಳ ಹಾಗೂ ರಾಗಿಯನ್ನು ಬೆಂಬಲ ಬೆಲೆಯಡಿ ಖರೀದಿಸಲು ಖರೀದಿ ಕೇಂದ್ರಗಳಲ್ಲಿ ಆನ್‌ಲೈನ್‌ನಲ್ಲಿ ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ ಯಾವುದೇ ರೈತರು ನೋಂದಣಿ ಮಾಡಿಸಿಲ್ಲ’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದ್ದಾರೆ.
‘ಬಿಳಿಜೋಳ ಮತ್ತು ರಾಗಿಯನ್ನು ಬೆಂಬಲ ಬೆಲೆಯಡಿ ಮಾರಾಟ ಮಾಡಲು ನೋಂದಣಿಗೆಜ.15ಕೊನೆ ದಿನವಾಗಿದೆ. ಜೋಳವನ್ನು ಪ್ರತಿ ರೈತರಿಂದ ಎಕರೆಗೆ 6 ಕ್ವಿಂಟಲ್‌ನಂತೆ ಮಾರ್ಚ್ 31ರ ವರೆಗೆಖರೀದಿಸಲಾಗುವುದು. ರೈತರು ಅಗತ್ಯ ದಾಖಲೆಗಳೊಂದಿಗೆ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.